
ಬೆಂಗಳೂರು, ಮಾರ್ಚ್ 11: ರಾಜ್ಯದ ಪೊಲೀಸ್ ಸಿಬ್ಬಂದಿಗೆ ಕಳೆದ ತಿಂಗಳಿನ ಸಂಬಳ ಇನ್ನೂ ಆಗಿಲ್ಲ ಎಂಬ ವಿಚಾರವಾಗಿ ವಿಪಕ್ಷ ಬಿಜೆಪಿ ರಾಜ್ಯ ಸರ್ಕಾರದ ಮೇಲೆ ಮುಗಿಬಿದ್ದಿರುವ ನಡುವೆ ಮತ್ತೊಂದು ಆಘಾತಕಾರಿ ಸುದ್ದಿ ವರದಿಯಾಗಿದೆ. ಈಗಾಗಲೇ ಶಿಕ್ಷಕರ ಕೊರತೆಯಿಂದ ಬಳಲುತ್ತಿರುವ ಕರ್ನಾಟಕದ ಸರ್ಕಾರಿ ಶಾಲೆಗಳ ಸುಮಾರು 51,000 ಅತಿಥಿ ಶಿಕ್ಷಕರಿಗೆ (Guest Teachers) 2025ರ ನವೆಂಬರ್ನಿಂದ ಇಂದಿನವರೆಗೆ ವೇತನ ಪಾವತಿಯಾಗಿಲ್ಲ ಎಂಬ ಆರೋಪ ಕೇಳಿಬಂದಿದೆ.
ಈ ಬಗ್ಗೆ ಮಾತನಾಡಿರುವ ಬೆಂಗಳೂರು ಲಿಂಕ್ ರೋಡ್ನಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಯ ಅತಿಥಿ ಶಿಕ್ಷಕಿ ಸುರೇಖಾ, ನಮ್ಮ ಬೋಧನಾ ಅನುಭವದ ಆಧಾರದ ಮೇಲೆ ನಮಗೆ ತಿಂಗಳಿಗೆ 10,000ರಿಂದ 12,000 ವರೆಗೆ ವೇತನ ನೀಡಲಾಗುತ್ತದೆ. ಆದರೆ ನವೆಂಬರ್ನಿಂದ ಇಂದಿನವರೆಗೆ ನಮಗೆ ವೇತನ ಸಿಕ್ಕಿಲ್ಲ. ಈ ಬಗ್ಗೆ ಕರ್ನಾಟಕ ರಾಜ್ಯ ಪ್ರಾಥಮಿಕ ಮತ್ತು ಪ್ರೌಢಶಾಲಾ ಅತಿಥಿ ಶಿಕ್ಷಕರ ಸಂಘವು ಶಾಲಾ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಮತ್ತು ಮುಖ್ಯ ಕಾರ್ಯದರ್ಶಿಗೆ ಪತ್ರ ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದಿದ್ದಾರೆ.
ಇದನ್ನೂ ಓದಿ: ವೇತನ ಸಿಗದೆ ಪೊಲೀಸ್ ಸಿಬ್ಬಂದಿ ಪರದಾಟ; ಸಂಬಳ ನೀಡಲೂ ಸರ್ಕಾರದ ಬಳಿ ಇಲ್ವಾ ಹಣ?
ಯಲಹಂಕದ ಸರ್ಕಾರಿ ಶಾಲೆಯಲ್ಲಿ ಕೆಲಸ ಮಾಡುತ್ತಿರುವ ಮತ್ತೊಬ್ಬ ಶಿಕ್ಷಕರು ಮಾತನಾಡಿ, ನಾವು 12 ತಿಂಗಳು ಕೆಲಸ ಮಾಡಿದರೂ ನಮಗೆ 10 ತಿಂಗಳಷ್ಟೇ ವೇತನ ನೀಡಲಾಗುತ್ತದೆ. ಮಾರ್ಚ್ 31ರಂದು ನಮ್ಮ ಒಪ್ಪಂದ ಅವಧಿ ಮುಗಿಯುತ್ತದೆ. ನಂತರ ಶಾಲೆ ಹಾಗೂ ಇಲಾಖೆಯ ನಿರ್ಧಾರಕ್ಕೆ ಅನುಗುಣವಾಗಿ ನಮ್ಮ ಒಪ್ಪಂದವನ್ನು ನವೀಕರಿಸುವುದೋ ಅಥವಾ ಇಲ್ಲವೋ ಎಂಬುದು ತೀರ್ಮಾನವಾಗುತ್ತದೆ. ಸರ್ಕಾರ ಕನಿಷ್ಠ ನಮ್ಮ ಕಡಿಮೆ ವೇತನವನ್ನಾದರೂ ಸಮಯಕ್ಕೆ ಸರಿಯಾಗಿ ಪಾವತಿಸಬೇಕು ಎಂದು ಆಗ್ರಹಿಸಿದ್ದಾರೆ.
ಈ ನಡುವೆ ಶಿಕ್ಷಣ ತಜ್ಞ ಡಾ.ನಿರಂಜನಾರಾಧ್ಯ ವಿ.ಪಿ. ಅವರು ಅತಿಥಿ ಶಿಕ್ಷಕರ ವೇತನ ಪಾವತಿಗಾಗಿ ತಕ್ಷಣವೇ ನಿಧಿ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಗ್ರಹಿಸಿದ್ದಾರೆ. ಗ್ರಾಮೀಣ ಪ್ರದೇಶದ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳ ಶಿಕ್ಷಣದಲ್ಲಿ ಅತಿಥಿ ಶಿಕ್ಷಕರು ಮಹತ್ವದ ಪಾತ್ರ ವಹಿಸುತ್ತಿದ್ದಾರೆ. ಮೂರು ತಿಂಗಳಿಗೂ ಹೆಚ್ಚು ಕಾಲ ವೇತನ ಸಿಗದಿದ್ದರೆ ಅವರ ಜೀವನ ನಿರ್ವಹಣೆ ಕಷ್ಟವಾಗುತ್ತದೆ. ಇದರಿಂದ ಬೋಧನೆಯ ಗುಣಮಟ್ಟಕ್ಕೂ ಪರಿಣಾಮ ಬೀಳಬಹುದು ಮತ್ತು ಮಕ್ಕಳ ಕಲಿಕೆಯ ಮಟ್ಟವೂ ಕುಸಿಯಬಹುದು ಎಂದು ಅವರು ಎಚ್ಚರಿಸಿರೋದಾಗಿ ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.