
ಬೆಳಗಾವಿ, ಏಪ್ರಿಲ್ 12: ಅನೈತಿಕ ಸಂಬಂಧಕ್ಕೆ ಅಡ್ಡಿಯಾದ ಕಾರಣ ಲವ್ವರ್ ಜೊತೆ ಸೇರಿಕೊಂಡು ಪ್ರೀತಿಸಿ ಮದುವೆ ಆಗಿದ್ದ ಗಂಡನನ್ನೇ ಪತ್ನಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬೆಳಗಾವಿ ಅನಗೋಳದ ಬಾಬಲೇ ಗಲ್ಲಿಯಲ್ಲಿ ನಡೆದಿದೆ. ಖಾಸಗಿ ಆಯುರ್ವೇದಿಕ್ ಕಾಲೇಜಿನ ಥೆರಪಿಸ್ಟ್ ಅವಿನಾಶ್ ಸೂಪ್ಪಣ್ಣವರ (40) ಮೃತ ವ್ಯಕ್ತಿಯಾಗಿದ್ದು, ಘಟನೆ ಸಂಬಂಧ ಪತ್ನಿ ಲಕ್ಷ್ಮೀ ಸೂಪಣ್ಣವರ ಮತ್ತು ಕೈಲಾಶ್ ಅಚ್ಚಿತಾಲ್ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ತಂಪು ಪಾನೀಯದಲ್ಲಿ ನಿದ್ದೆ ಮಾತ್ರ ಹಾಕಿ ನೀಡಿದ್ದ ಆರೋಪಿಗಳು, ಅವಿನಾಶ್ ಕುಸಿದು ಬೀಳ್ತಿದ್ದಂತೆ ಸಿಲಿಂಡರ್ನಿಂದ ತಲೆ ಮತ್ತು ಎದೆ ಭಾಗಕ್ಕೆ ಹೊಡೆದು ಕೊಲೆ ಮಾಡಿದ್ದರು ಎಂಬುದು ಗೊತ್ತಾಗಿದೆ.
ಮಾರ್ಚ್ 6ರಂದು ಸಂಜೆ 4ಕ್ಕೆ ಮನೆಯಿಂದ ಅವಿನಾಶ್ ಕ್ಲಿನಿಕ್ಗೆ ಹೋಗಿದ್ದರು. ಈ ವೇಳೆ ಥೆರಪಿ ಮಾಡಿಸಿಕೊಳ್ಳಲೆಂದು ಆರೋಪಿ ಕೈಲಾಶ್ ಕೂಡ ಕ್ಲಿನಿಕ್ಗೆ ತೆರಳಿದ್ದ. ಹೋಗುವಾಗ ತಂಪು ಪಾನೀಯದಲ್ಲಿ ನಿದ್ರೆ ಮಾತ್ರೆ ಬೆರಸಿಕೊಂಡು ಹೋಗಿದ್ದ ಈತ, ಥೆರಪಿಗೂ ಮುನ್ನ ಅವಿನಾಶ್ಗೆ ಅದನ್ನು ಕುಡಿಸಿದ್ದ. ತಂಪು ಪಾನೀಯ ಕುಡಿಯುತ್ತಿದ್ದಂತೆ ಅವಿನಾಶ್ ಕುಸಿದು ಬಿದ್ದಿದ್ದು, ಅಲ್ಲೇ ಇದ್ದ ಸಿಲಿಂಡರ್ನಿಂದ ದಾಳಿ ಮಾಡಿ ಕೈಲಾಶ್ ಕೊಲೆ ಮಾಡಿದ್ದ. ಈ ವೇಳೆ ಗಂಡ ಸತ್ತಿರುವುದನ್ನ ಕನ್ಪರ್ಮ್ ಮಾಡಿಕೊಳ್ಳಲು ಪತ್ನಿ ಲಕ್ಷ್ಮೀ ವಿಡಿಯೋ ಕಾಲ್ ಮಾಡಿದ್ದಳು. ಗಂಡ ಸತ್ತಿಲ್, ಮೂಗು ಬಿಗಿಹಿಡಿದು ಸಾಯಿಸು ಎಂದು ಈ ವೇಳೆ ಕೈಲಾಶ್ಗೆ ಹೇಳಿದ್ದಳು. ಆ ಬಳಿಕ ಕ್ಲಿನಿಕ್ಗೆ ಹೋಗಿದ್ದ ಲಕ್ಷ್ಮೀ, ಗಂಡನ ಸಾವಿನ ಬಗ್ಗೆ ಏನೂ ಗೊತ್ತಿಲ್ಲದಂತೆ ಗೋಳಾಟ ನಡೆಸಿದ್ದಳು. ಅಲ್ಲದೆ, ಶುಗರ್ ಹೆಚ್ಚಾಗಿ ಕುಸಿದು ಬಿದ್ದು, ತಲೆಗೆ ಪೆಟ್ಟಾಗಿ ಸಾವನಪ್ಪಿರುವ ಬಗ್ಗೆ ಕತೆ ಹೇಳಿದ್ದಳು.
ಇದನ್ನೂ ಓದಿ: ಪ್ಯಾಸೆಂಜರ್ ವಿಚಾರಕ್ಕೆ ಗಲಾಟೆ; ಕೆಲವೇ ದಿನಗಳಲ್ಲಿ ಹಸೆಮಣೆ ಏರಬೇಕಿದ್ದ ಆಟೋ ಚಾಲಕನ ಭೀಕರ ಹತ್ಯೆ
ಆದರೆ ಮಗನ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ಮೃತನ ತಾಯಿ ದೂರು ದಾಖಲಿಸಿದ್ದು, ಪ್ರಕರಣ ಬೆನ್ನತ್ತಿದ ಪೊಲೀಸರಿಗೆ ಪತ್ನಿ ಲಕ್ಷ್ಮೀ ಮೇಲೆಯೇ ಅನುಮಾನ ಬಂದಿತ್ತು. ಎರಡು ವರ್ಷಗಳಿಂದ ಕೈಲಾಶ್ ಜೊತೆಗೆ ಲಕ್ಷ್ಮೀ ಅನೈತಿಕ ಸಂಬಂಧ ಹೊಂದಿದ್ದು, ಮೊಬೈಲ್ ರಿಚಾರ್ಜ್ ಮಾಡಿಸಲು ಹೋದಾಗ ಪೋನ್ ನಂಬರ್ ಶೇರ್ ಆಗಿತ್ತು. ಬಳಿಕ ಅವಿನಾಶ ಜೊತೆಗೂ ಕೈಲಾಶ್ ಉತ್ತಮ ಸಂಬಂಧ ಹೊಂದಿದ್ದ. ಇದನ್ನೇ ಬಂಡವಾಳ ಮಾಡಿಕೊಂಡು ಲಕ್ಷ್ಮೀ ಭೇಟಿಗೆ ಬರುತ್ತಿದ್ದ. ಅವಿನಾಶ್ ಮನೆಯ ಕೂಗಳತೆ ದೂರದಲ್ಲಿ ಕೈಲಾಶ್ ಮೊಬೈಲ್ ಶಾಪ್ ಇದ್ದು, ಈ ವಿಚಾರ ಗೊತ್ತಾಗಿ ಪತ್ನಿ ಮತ್ತು ಕೈಲಾಶ್ಗೆ ಅವಿನಾಶ್ ವಾರ್ನ್ ಕೂಡ ಮಾಡಿದ್ದ. ಇದೇ ಸಿಟ್ಟಿಗೆ ಪತಿ ಅವಿನಾಶ್ ಕೊಲೆಗೆ ಲಕ್ಷ್ಮೀ ಸ್ಕೆಚ್ ಹಾಕಿದ್ದಳು. ಒಂದು ತಿಂಗಳಿಂದ ಅವಿನಾಶ್ ಕೊಲೆಗೆ ಕೈಲಾಶ್ ಮೇಲೆ ಒತ್ತಡ ಹಾಕ್ತಿದ್ದಳು ಎಂಬುದೀಗ ಬಯಲಾಗಿದೆ. ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.