
ಬೆಂಗಳೂರು, (ಏಪ್ರಿಲ್ 12): ದಾವಣಗೆರೆ ದಂಗಲ್ ತೀವ್ರ ಸ್ವರೂಪ ಪಡೆದುಕೊಂಡಿದೆ. ದಾವಣಗೆರೆ ದಕ್ಷಿಣ ಬೈ ಎಲೆಕ್ಷನ್ (Davanagere South By Election Row) ಮುಗಿಯುತ್ತಿದ್ದಂತೆಯೇ ಕಾಂಗ್ರೆಸ್ ಮುಸ್ಲಿಂ ನಾಯರ ನಡುವಿನ ಅಸಮಧಾನ ಸ್ಫೋಟಗೊಂಡಿದ್ದು, ದಾವಣಗೆರೆ ದಕ್ಷಿಣ ಉಪಚುನಾವಣೆ ಟಿಕೆಟ್ ಆಕಾಂಕ್ಷಿಯಾಗಿದ್ದ ಅಬ್ದುಲ್ ಜಬ್ಬಾರ್ ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸ್ಥಾನಕ್ಕೆ ಜಬ್ಬಾರ್ ರಾಜೀನಾಮೆ ನೀಡಿದ್ದು, ಇದೀಗ ಈ ರಾಜೀನಾಮೆಯನ್ನು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಅಂಗೀಕರಿಸಿದ್ದಾರೆ. ಅಲ್ಲದೇ ಕೆಪಿಸಿಸಿ ಅಲ್ಪಸಂಖ್ಯಾತ ಘಟಕವನ್ನೇ (KPCC Minority Department )ವಿಸರ್ಜಿಸಿ ಆದೇಶ ಹೊರಡಿಸಿದ್ದು, ಈ ಬೆಳವಣಿಗೆ ಕಾಂಗ್ರೆಸ್ನಲ್ಲಿ ಭಾರೀ ಸಂಚನಲನ ಮೂಡಿಸಿದೆ.
ರಾಜೀನಾಮೆ ಪರ್ವ ಬೆನ್ನಲ್ಲೇ ಅಲ್ಪಸಂಖ್ಯಾತರ ಘಟಕ ವಿಸರ್ಜನೆ
ಅಬ್ದುಲ್ ಜಬ್ಬಾರ್ ರಾಜೀನಾಮೆ ಬೆನ್ನಲ್ಲೇ ಅಲ್ಪಸಂಖ್ಯಾತರ ಘಟಕದ ಪದಾಧಿಕಾರಿಗಳ ರಾಜೀನಾಮೆ ಪರ್ವ ಶುರುವಾಗಿದೆ. ಮಹಮ್ಮದ್ ಸಿರಾಜ್ ಕೆಪಿಸಿಸಿ ರಾಜ್ಯ ಅಲ್ಪಸಂಖ್ಯಾತರ ಘಟಕ ಉಪಾಧ್ಯಕ್ಷ ಹಾಗೂ ವಕ್ಫ ಮಂಡಳಿ ಮಾಜಿ ಅಧ್ಯಕ್ಷ. ಇನ್ನೂ ಮೂರು ಜನ ಕೆಪಿಸಿಸಿ ಅಲ್ಪ ಸಂಖ್ಯಾತರ ಘಟಕ ಕಾರ್ಯದರ್ಶಿಗಳಾದ ಅಬ್ದುಲ್ ಗನಿ ತಾಹೀರ್, ನೂರ್ ಅಹ್ಮದ್, ಹುಸೇನ್ ಉಕ್ಕಡಗಾತ್ರಿ ರಾಜೀನಾಮೆ ನೀಡಿದ್ದಾರೆ. ಇದರ ಬೆನ್ನಲ್ಲೇ ಎಚ್ಚೆತ್ತ ಡಿಕೆ ಶಿವಕುಮಾರ್ ಇಡೀ ಅಲ್ಪಸಂಖ್ಯಾತರ ಘಟಕವನ್ನೇ ವಿಸರ್ಜನೆ ಮಾಡಿದ್ದಾರೆ.
ಇದನ್ನೂ ಓದಿ: ಕಾಂಗ್ರೆಸ್ ಮುಖಂಡ ಅಬ್ದುಲ್ ಜಬ್ಬಾರ್ ರಾಜೀನಾಮೆ ವಿಚಾರಕ್ಕೆ ಟ್ವಿಸ್ಟ್: ಸ್ವ ಇಚ್ಛೆಯಿಂದ ಹುದ್ದೆ ತೊರೆದಿದ್ದೇನೆ ಎಂದ ಪರಿಷತ್ ಸದಸ್ಯ
ದಾವಣಗೆರೆ ದಕ್ಷಿಣ ಉಪಚುನಾವಣೆಯ ಪ್ರಚಾರದಲ್ಲಿ ಭಾಗಿಯಾಗದವರ ತಲೆತಂಡಕ್ಕೆ ಕಾಂಗ್ರೆಸ್ ಹೈಕಮಾಂಡ್ ಮುಂದಾಗಿದ್ದು, ಈಗಾಗಲೇ ಕೆಪಿಸಿಸಿ ಅಲ್ಪಸಂಖ್ಯಾತ ಅಧ್ಯಕ್ಷ ಸ್ಥಾನಕ್ಕೆ ಅಬ್ದುಲ್ ಜಬ್ಬಾರ್ ರಾಜೀನಾಮೆ ನೀಡಿದ್ದಾರೆ. ಅಲ್ಲದೇ ಸಿಎಂ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮ್ಮದ್ ತಲೆದಂಡಕ್ಕೂ ಹೈಕಮಾಂಡ್ ಮುಂದಾಗಿದೆ. ಈ ಸಾಲಿನಲ್ಲಿ ಜಮೀರ್ ಅಹಮ್ಮದ್ ಖಾನ್ ಇದ್ದು, ಅವರ ಸಚಿವ ಸ್ಥಾನಕ್ಕೂ ಕುತ್ತು ಬಂದಿದೆ. ಈ ಎಲ್ಲಾ ಬೆಳವಣಿಗಳ ಮಧ್ಯೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಕೆಪಿಸಿಸಿ ಅಲ್ಪಸಂಖ್ಯಾತ ಘಟಕಕ್ಕೆ ಮೇಜರ್ ಸರ್ಜರಿ ಮಾಡಿದ್ದು, ಇದು ಅಚ್ಚರಿಗೆ ಕಾರಣವಾಗಿದೆ.
ಮುಸ್ಲಿಂ ನಾಯಕರಲ್ಲಿ ಭಿನ್ನಮತ ಸ್ಫೋಟ
ದಾವಣಗೆರೆ ದಕ್ಷಣ ಬೈ ಎಲೆಕ್ಷನ್ ಸಂಬಂಧ ಕಾಂಗ್ರೆಸ್ ಮುಸ್ಲಿಂ ನಾಯಕರಲ್ಲೇ ಭಿನ್ನಮತ ಸ್ಫೋಟಗೊಂಡಿದೆ. ಅಲ್ಲದೇ ಬಣ ರಾಜಕೀಯ ಸಹ ಶುರುವಾಗಿದೆ. ಡಿಕೆ ಶಿವಕುಮಾರ್ ಬಣದ ರಿಜ್ವಾನ್ ಅರ್ಷದ್, ಸಲೀಂ ಅಹಮ್ಮದ್ ಸುದ್ದಿಗೋಷ್ಠಿ ನಡೆಸಿ ತಮ್ಮದೇ ಸಮುದಾಯದ ನಾಯಕರ ವಿರುದ್ಧ ಬಹಿರಂಗವಾಗಿ ಗಂಭೀರ ಆರೋಪ ಮಾಡಿದ್ದಾರೆ. ದಾವಣಗೆರೆ ಬೈ ಎಲೆಕ್ಷನ್ ನಮ್ಮ ಪಕ್ಷದ ಹಿರಿಯರು ಕೆಲಸ ಮಾಡಿಲ್ಲ ಎಂದು ಪರೋಕ್ಷವಾಗಿ ಸಚಿವ ಜಮೀರ್ ಅಹಮ್ಮದ್ ಖಾನ್, ಅಬ್ದುಲ್ ಜಬ್ಬರ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೇ ಈ ಬಗ್ಗೆ ಹೈಕಮಾಂಡ್ಗೂ ದೂರು ನೀಡಿದ್ದಾರೆ. ಇದರ ಬೆನ್ನಲ್ಲೇ ಅಬ್ದುಲ್ ಜಬ್ಬರ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಇದರೊಂದಿಗೆ ಇದೀಗ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಬಣ ರಾಜಕೀಯಲ್ಕೆ ಮುನ್ನುಡಿ ಬರೆದಂತಾಗಿದೆ.
ಮೊನ್ನೆಯಷ್ಟೇ ಸಲೀಂ ಅಹ್ಮದ್, ರಿಜ್ವಾನ್ ಅರ್ಷದ್ ಷಡ್ಯಂತ್ರ ನಡೆದಿದೆ ಎಂದು ಆರೋಪಿಸಿದ್ದರು.. ದಾವಣಗೆರೆಯಲ್ಲಿ ಪಕ್ಷದ ಅಭ್ಯರ್ಥಿ ವಿರುದ್ಧವೇ ಷಡ್ಯಂತ್ರ ಮಾಡಿದ್ದಾರೆ. ಪಕ್ಷ ವಿರೋಧಿ ಚಟುವಟಿಕೆಗಳು ನಡೆದಿವೆ ಎಂಬ ಆರೋಪ ಕೇಳಿಬಂದಿತ್ತು.. ಹೀಗಾಗಿ ದಾವಣಗೆರೆ ದಕ್ಷಿಣ ಕ್ಷೇತ್ರದ ಆಂತರಿಕ ಬೆಳವಣಿಗೆ ಬಗ್ಗೆ ಹೈಕಮಾಂಡ್ ವರದಿ ತರಿಸಿಕೊಂಡಿತ್ತು.. ಎಐಸಿಸಿ ಉಸ್ತುವಾರಿ ಕಾರ್ಯದರ್ಶಿ ಅಬಿಷೇಕ್ ದತ್ ವರದಿ ನೀಡಿದ್ರು. ಈ ವರದಿ ಕೈ ಸೇರುತ್ತಿದ್ದಂತೆ ಹೈಕಮಾಂಡ್ ಆ್ಯಕ್ಷನ್ ತೆಗೆದುಕೊಂಡಿದೆ. ಸಿಎಂ ರಾಜಕೀಯ ಕಾರ್ಯದರ್ಶಿಯಾಗಿರುವ ಮತ್ತು ಜಮೀರ್ ಆಪ್ತರು ಆಗಿರೋ ನಜೀರ್ ಅಹ್ಮದ್ಗೆ ರಾಜೀನಾಮೆ ನೀಡುವಂತೆ ಹೈಕಮಾಂಡ್ ತಾಕೀತು ಮಾಡಿದೆ.
ಸಿಎಂ ರಾಜಕೀಯ ಕಾರ್ಯದರ್ಶಿ ನಜೀರ್ ಅಹ್ಮದ್ ಮತ್ತು ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಬ್ದುಲ್ ಜಬ್ಬಾರ್ ಇಬ್ಬರು ಜಮೀರ್ ಆಪ್ತರು. ಹೀಗಾಗಿ ಮುಂದಿನ ಆ್ಯಕ್ಷನ್ ಜಮೀರ್ ವಿರುದ್ಧವೇ ಎಂದ ಹೇಳಲಾಗ್ತಿದೆ.. ಯಾಕಂದ್ರೆ, ಜಮೀರ್ ಸೇರಿ ಹಲವು ಮುಸ್ಲಿಂ ಮುಖಂಡರು ದಾವಣಗೆರೆ ದಕ್ಷಿಣ ಕ್ಷೇತ್ರದ ಟಿಕೆಟ್ ಅನ್ನ ಮುಸ್ಲಿಂ ಸಮುದಾಯಕ್ಕೆ ನೀಡಬೇಕು ಎಂದು ಒತ್ತಾಯಿಸಿದ್ದರು. ಆದ್ರೆ, ಸಮರ್ಥ್ಗೆ ಟಿಕೆಟ್ ಸಿಕ್ಕ ಕಾರಣ ಬೇಸರಗೊಂಡಿದ್ದ ಜಮೀರ್, ಪ್ರಚಾರದಿಂದ ದೂರ ಉಳಿದಿದ್ದರು. ಈಗ ಕ್ಷೇತ್ರದಲ್ಲಿ ಪ್ರಚಾರ ಮಾಡದ ಆರೋಪದಲ್ಲಿ ಜಮೀರ್ ವಿರುದ್ಧ ಹೈಕಮಾಂಡ್ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದ್ದು, ಸಚಿವ ಸಂಪುಟ ಪುನಾರಚನೆ ವೇಳೆ ಜಮೀರ್ ತಲೆತಂಡ ಖಚಿತ ಎನ್ನಲಾಗಿದೆ.
ಒಟ್ಟಿನಲ್ಲಿ ದಾವಣಗೆರೆ ದಕ್ಷಿಣದ ಉಪ ಚುನಾವಣೆಯ ಬೆನ್ನಲ್ಲೇ ಕಾಂಗ್ರೆಸ್ ಮುಸ್ಲಿಂ ನಾಯಕರಲ್ಲಿ ಒಳಗಿನ ಬೇಗುದಿ ಸ್ಫೋಟಗೊಂಡಿದ್ದು, ಇದು ಮುಂದಿನ ದಿನಗಳಲ್ಲಿ ಯಾವ ಹಂತಕ್ಕೆ ಹೋಗಿ ನಿಲ್ಲುತ್ತೆ ಎನ್ನುವುದನ್ನು ಕಾದುನೋಡಬೇಕಿದೆ.