ಪಾಟ್ನಾ, ಮಾರ್ಚ್ 02: ಮಾದಕದ್ರವ್ಯ ಸೇವಿಸಿ ತನ್ನ ಬಳಿ ಕೆಟ್ಟದಾಗಿ ನಡೆದುಕೊಂಡಿದ್ದ ಅಪ್ರಾಪ್ತನ ಬಗ್ಗೆ ಮನೆಯಲ್ಲಿ ದೂರು ಕೊಟ್ಟಿದ್ದಕ್ಕೆ ಕೋಪಗೊಂಡ ಬಾಲಕ 9 ವರ್ಷದ ಬಾಲಕಿಯ ಕತ್ತು ಸೀಳಿ ಕೊಲೆ(Murder) ಮಾಡಿರುವ ಘಟನೆ ಬಿಹಾರದ ಕಟಿಹಾರ್ನಲ್ಲಿ ನಡೆದಿದೆ. ಕರಣದ ಆರೋಪಿಯೂ ಅಪ್ರಾಪ್ತ ವಯಸ್ಕನಾಗಿದ್ದು, ಆತನನ್ನು ಬಂಧಿಸಲಾಗಿದೆ.
ಕೊಲಾಸಿ ಪೊಲೀಸ್ ಠಾಣೆ ವ್ಯಾಪ್ತಿಯ ಸಂದಲ್‌ಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಪೊಲೀಸರ ಪ್ರಕಾರ, ಒಂದು ದಿನ ಹಿಂದೆ ಬಾಲಕಿ ಮನೆಯಿಂದ ನಾಪತ್ತೆಯಾಗಿದ್ದಳು. ನಂತರ ಕುಟುಂಬ ಸದಸ್ಯರು ಮತ್ತು ಗ್ರಾಮಸ್ಥರು ಆಕೆಗಾಗಿ ಹುಡುಕಾಟ ಆರಂಭಿಸಿದ್ದರು. ಮರುದಿನ ಕುತ್ತಿಗೆ ಸೀಳಿದ ಸ್ಥಿತಿಯಲ್ಲಿ ಆಕೆಯ ಶವ ಹತ್ತಿರದ ಮೆಕ್ಕೆಜೋಳದ ಹೊಲದಿಂದ ಪತ್ತೆಯಾಗಿದೆ.
ಪ್ರಾಥಮಿಕ ತನಿಖೆಯಲ್ಲಿ ಅದೇ ಗ್ರಾಮದ 13 ವರ್ಷದ ಬಾಲಕ ಆರೋಪಿಯಾಗಿದ್ದು, ಬಾಲಕಿ ಹೊಲದ ಕಡೆಗೆ ಹೋಗುತ್ತಿದ್ದಾಗ ಹರಿತವಾದ ಆಯುಧದಿಂದ ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಬಾಲಕ ಮಾದಕ ವ್ಯಸನಿಯಾಗಿದ್ದ ಮತ್ತು ಆಗಾಗ ಮಾದಕ ದ್ರವ್ಯ ಸೇವಿಸುತ್ತಿದ್ದ ಎಂದು ಸ್ಥಳೀಯ ನಿವಾಸಿಗಳು ಹೇಳಿದ್ದಾರೆ.
ಮತ್ತಷ್ಟು ಓದಿ: ವ್ಯಕ್ತಿಯ ಮರ್ಮಾಂಗ ಕತ್ತರಿಸಿ ಹತ್ಯೆ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್: ಕೊಲೆಗೆ ಸಾಥ್ ಕೊಟ್ಟು ಡ್ರಾಮಾ ಮಾಡಿದ್ದ ಹೆಂಡ್ತಿ, ಮಗ!
ಗ್ರಾಮಸ್ಥರ ಪ್ರಕಾರ, ಬಲಿಪಶು ಇತ್ತೀಚೆಗೆ ತನ್ನ ಪೋಷಕರಲ್ಲಿ ತನ್ನ ಆತನ ವರ್ತನೆಯ ಬಗ್ಗೆ ದೂರು ನೀಡಿದ್ದಳು, ನಂತರ ಕುಟುಂಬ ಸದಸ್ಯರು ಬಾಲಕನ ಬಳಿ ಹೋಗಿ ಗದರಿದ್ದರು ಎಂದು ವರದಿಯಾಗಿದೆ. ಅದಕ್ಕೆ ಕೋಪಗೊಂಡ ಆತ ಆಕೆಯನ್ನು ಕೊಲೆ ಮಾಡಲು ನಿರ್ಧರಿಸಿದ್ದ.
ಮೃತದೇಹ ಪತ್ತೆಯಾಗಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸ್ ತಂಡಗಳು ಸ್ಥಳಕ್ಕೆ ಧಾವಿಸಿ ತನಿಖೆ ಆರಂಭಿಸಿದ್ದವು. ಕೆಲವೇ ಗಂಟೆಗಳಲ್ಲಿ ಪ್ರಕರಣವನ್ನು ಬಗೆಹರಿಸಲಾಗಿದೆ ಮತ್ತು ಬಾಲಾಪರಾಧಿಗಳಿಗೆ ಅನ್ವಯಿಸುವ ಕಾನೂನಿನಡಿಯಲ್ಲಿ ಅಪರಾಧ ಎಸಗಿದ ಆರೋಪದ ಮೇಲೆ ಅಪ್ರಾಪ್ತ ವಯಸ್ಕ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಾಲಕಿ ತನ್ನ ಪೋಷಕರಿಗೆ ನೀಡಿದ ದೂರಿನ ಮೇರೆಗೆ ಆರೋಪಿ ಕೋಪದಿಂದ ವರ್ತಿಸಿರಬಹುದು ಎಂದು ಸ್ಥಳೀಯ ನಿವಾಸಿ ಎಂಡಿ ಅಸ್ಲಾಂ ಆರೋಪಿಸಿದ್ದಾರೆ. ಘಟನೆಯನ್ನು ದೃಢಪಡಿಸಿದ ಹಿರಿಯ ಪೊಲೀಸ್ ಅಧಿಕಾರಿ ರಂಜನ್ ಕುಮಾರ್ ಸಿಂಗ್, ಕಾಣೆಯಾದ ಬಾಲಕಿಯನ್ನು ಹರಿತವಾದ ಆಯುಧದಿಂದ ಕೊಲ್ಲಲಾಗಿದೆ ಎಂದು ಹೇಳಿದ್ದಾರೆ.
ಕೊಲೆಗೆ ಬಳಸಲಾದ ಆಯುಧವನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು ಆರೋಪಿ ಅಪ್ರಾಪ್ತನನ್ನು ಪೊಲೀಸ್ ವಶಕ್ಕೆ ತೆಗೆದುಕೊಳ್ಳಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ. ಬಾಲಾಪರಾಧಿ ನ್ಯಾಯ ನಿಬಂಧನೆಗಳ ಪ್ರಕಾರ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ