
ಚಾಮರಾಜನಗರ, ಏ.8: ಜಿಲ್ಲೆಯಲ್ಲಿ ಮಹಿಳೆಯರ ಒಳ ಉಡುಪುಗಳನ್ನು ಕದಿಯುವ ಸೈಕೋಪಾತ್ ಒಬ್ಬನ ಉಪಟಳದಿಂದ ಸ್ಥಳೀಯ ನಿವಾಸಿಗಳು, ವಿಶೇಷವಾಗಿ ಗೃಹಿಣಿಯರು ತೀವ್ರ ಆತಂಕಕ್ಕೊಳಗಾಗಿದ್ದಾರೆ. ಹೌಸಿಂಗ್ ಬೋರ್ಡ್ ಕಾಲೋನಿ, ಇಂದಿರಾನಗರ ಮತ್ತು ಕರಿನಂಜಿಪುರ ಸುತ್ತಮುತ್ತಲ ಪ್ರದೇಶಗಳಲ್ಲಿ ಸುಮಾರು ಒಂದೂವರೆ ತಿಂಗಳಿನಿಂದ ಈ ವಿಚಿತ್ರ ಕೃತ್ಯಗಳು ವರದಿಯಾಗುತ್ತಿವೆ. ರಾತ್ರಿ 12 ರಿಂದ ಬೆಳಗಿನ ಜಾವ 3 ಗಂಟೆಯ ನಡುವೆ, ಒಬ್ಬ ಅಪರಿಚಿತ ವ್ಯಕ್ತಿ ಮಹಿಳೆಯರ ವೇಷಧರಿಸಿ ಮನೆಗಳ ಮುಂದೆ ಒಣಗಲು ಹಾಕಿರುವ ಮಹಿಳೆಯರ ಒಳ ಉಡುಪುಗಳನ್ನು ಗುರಿಯಾಗಿಸಿಕೊಂಡು ಕಳವು ಮಾಡುತ್ತಿದ್ದಾನೆ. ಈ ಸೈಕೋಪಾತ್ ಕದ್ದ ಒಳ ಉಡುಪುಗಳನ್ನು ತಾನೇ ಧರಿಸಿ ಒಂದು ವಿಕೃತಿಯನ್ನು ಮೆರೆಯುತ್ತಿದ್ದಾನೆ ಎಂದು ತಿಳಿದುಬಂದಿದೆ. ಈತನ ಕೃತ್ಯಗಳು ಸಿಸಿಟಿವಿ ಕ್ಯಾಮೆರಾಗಳಲ್ಲಿ ಸ್ಪಷ್ಟವಾಗಿ ದಾಖಲಾಗಿದ್ದು, ಇವು ಬೆಳಕಿಗೆ ಬಂದ ನಂತರ ಸ್ಥಳೀಯರಲ್ಲಿ ಭೀತಿ ಹೆಚ್ಚಾಗಿದೆ. ಈ ಪ್ರದೇಶದ ಮಹಿಳೆಯರು ಮತ್ತು ಪೋಷಕರು ತಮ್ಮ ಮಕ್ಕಳ ಸುರಕ್ಷತೆಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಒಬ್ಬ ಗೃಹಿಣಿ ಈ ಬಗ್ಗೆ ಮಾತನಾಡಿದ್ದು, ಸಾಮಾನ್ಯವಾಗಿ ಚಾಮರಾಜನಗರವನ್ನು ಸುರಕ್ಷಿತ ಪ್ರದೇಶವೆಂದು ಪರಿಗಣಿಸಲಾಗುತ್ತಿತ್ತು, ಆದರೆ ಇಂತಹ ಘಟನೆಗಳಿಂದ ಪ್ರಸ್ತುತ ನಿರ್ಜನ ಪ್ರದೇಶವೆನ್ನಿಸುವ ವಾಸಸ್ಥಳದಲ್ಲಿ ಒಂಟಿಯಾಗಿರುವ ಮಹಿಳೆಯರು ಮತ್ತು ಮಕ್ಕಳು ಭಯಭೀತರಾಗಿದ್ದಾರೆ ಎಂದು ತಿಳಿಸಿದ್ದಾರೆ. ಈ ವ್ಯಕ್ತಿಯ ಮನಸ್ಥಿತಿ ಯಾವ ರೀತಿ ಇದೆ ಎಂಬುದು ತಿಳಿದಿಲ್ಲ. ಮುಂದೆ ಈತನಿಂದ ಬೇರೆ ಯಾವುದೇ ಅನಾಹುತಗಳಾಗುವ ಸಾಧ್ಯತೆಗಳಿರುವುದರಿಂದ ಕೂಡಲೇ ಪೊಲೀಸರು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಬೇಸಿಗೆ ರಜೆ ಇರುವುದರಿಂದ ಮಕ್ಕಳು ಮನೆಯಲ್ಲಿ ಒಬ್ಬಂಟಿಯಾಗಿರುವಾಗ ಈ ಸೈಕೋಪಾತ್ ಮಕ್ಕಳ ಮೇಲೆ ದುಷ್ಕೃತ್ಯ ಎಸಗುವ ಸಾಧ್ಯತೆಗಳ ಬಗ್ಗೆ ಪೋಷಕರು ಆತಂಕ ವ್ಯಕ್ತಪಡಿಸಿದ್ದಾರೆ. ಚಿನ್ನಾಭರಣ ಕಳ್ಳತನದಂತಹ ಪ್ರಕರಣಗಳನ್ನು ಕಂಡಿದ್ದೇವೆ, ಆದರೆ ಒಳ ಉಡುಪುಗಳನ್ನು ಕದ್ದು ಧರಿಸುವ ಇಂತಹ ವಿಕೃತಕಾಮಿಯ ಕೃತ್ಯವು ತೀರಾ ವಿಚಿತ್ರವಾಗಿದೆ. ಈತನಿಂದ ಯಾವುದೇ ಆಪತ್ತು ಸಂಭವಿಸುವ ಮುನ್ನವೇ ಪೊಲೀಸರು ಎಚ್ಚೆತ್ತುಕೊಂಡು, ಬಂಧನ ಮಾಡುವ ಕಾರ್ಯಕ್ಕೆ ಮುಂದಾಗಬೇಕೆಂದು ಸಾರ್ವಜನಿಕರು ಮನವಿ ಮಾಡಿದ್ದಾರೆ. ಕರ್ನಾಟಕ ಸರ್ಕಾರವು ಜನಸ್ನೇಹಿ ಪೊಲೀಸ್, ಒಬವ್ವ ಪಡೆ ಮತ್ತು ಅಕ್ಕಪಡೆಗಳಂತಹ ಮಹಿಳೆಯರ ಸುರಕ್ಷತೆಗಾಗಿ ವಿಶೇಷ ಯೋಜನೆಗಳನ್ನು ಜಾರಿಗೆ ತಂದಿದ್ದರೂ, ಇಂತಹ ಘಟನೆಗಳು ನಡೆಯುತ್ತಿರುವುದು ಆತಂಕಕಾರಿ ವಿಷಯವಾಗಿದೆ. ಚಾಮರಾಜನಗರ ಜಿಲ್ಲಾ ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಸೈಕೋಪಾತ್‌ನನ್ನು ಶೀಘ್ರವಾಗಿ ಬಂಧಿಸಿ ಮಹಿಳೆಯರಲ್ಲಿ ಸುರಕ್ಷತಾ ಭಾವನೆಯನ್ನು ಮೂಡಿಸಬೇಕಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ