ಇರಾನ್ ಮಹಿಳೆಯರು…
ವಾಷಿಂಗ್ಟನ್, ಮಾರ್ಚ್ 1: ಇರಾನ್ ದೇಶದ ಮೇಲೆ ಇಸ್ರೇಲ್ ಹಾಗೂ ಅಮೆರಿಕ ಜೊತೆಯಾಗಿ ಸೇರಿ ಮುಗಿಬಿದ್ದಿವೆ. ಇರಾನ್ ಕೂಡ ಪ್ರತಿದಾಳಿ ನಡೆಸುತ್ತಾ ಬಂದಿದೆ. ಮಧ್ಯಪ್ರಾಚ್ಯದಲ್ಲಿರುವ ಅಮೆರಿಕದ ವಿವಿಧ ಸೇನಾ ನೆಲೆಗಳು ಹಾಗು ಅಮೆರಿಕ ಪರವಾಗಿರುವ ಕೆಲ ದೇಶಗಳ ಪ್ರಮುಖ ನಗರಗಳ ಮೇಲೂ ಇರಾನ್ ದಾಳಿ ನಡೆಸುತ್ತಿದೆ. ಇದೇ ವೇಳೆ ನಿನ್ನೆ ಬೆಳಗ್ಗೆ (ಶನಿವಾರ) ಅಮೆರಿಕವು ಇರಾನ್ ಮೇಲೆ ಕ್ಷಿಪ್ರ ವಾಯು ದಾಳಿ ನಡೆಸಿತು. ಅದರಲ್ಲಿ ಇರಾನ್ ಮುಖ್ಯಸ್ಥ ಆಯತುಲ್ಲಾ ಅಲಿ ಖಮೇನಿ (Ayatollah Ali Khamenei) ಹಾಗೂ ಅವರ ಕುಟುಂಬ ಸದಸ್ಯರು ಹಾಗು ಸರ್ಕಾರದ ಕೆಲ ಪ್ರಬಲ ವ್ಯಕ್ತಿಗಳು ಹತರಾಗಿದ್ದಾರೆ.
ವರದಿಗಳ ಪ್ರಕಾರ, ಖಮೇನಿ ಜೊತೆ ಪ್ರಬಲ ಸೇನಾ ನೇತಾರರಾದ ಅಲಿ ಶಂಖಾನಿ, ಮೊಹಮ್ಮದ್ ಪಕಪೂರ್ (Mohammad Pakpour) ಅವರೂ ಬಲಿಯಾಗಿದ್ದಾರೆ. ಅಲಿ ಶಂಖಾನಿ (Ali Shamkhani) ಅವರು ನ್ಯಾಷನಲ್ ಸೆಕ್ಯೂರಿಟಿ ಕೌನ್ಸಿಲ್ನ ಮಾಜಿ ಕಾರ್ಯದರ್ಶಿಯಾಗಿದ್ದರು. ಪಕಪೂರ್ ಅವರು ಇಸ್ಲಾಮಿಕ್ ರೆವಲ್ಯೂಶನರಿ ಗಾರ್ಡ್ ಕಾರ್ಪ್ಸ್ನ ಕಮಾಂಡರ್ ಆಗಿದ್ದರು.
ಇದನ್ನೂ ಓದಿ: ಇರಾನ್-ಅಮೆರಿಕ ಯುದ್ಧ; ಚಿನ್ನದ ಬೆಲೆ ಎಷ್ಟು ಏರಬಹುದು? ನಿಫ್ಟಿ, ಸೆನ್ಸೆಕ್ಸ್ ಕುಸಿತ ಕಾಣುತ್ವಾ?
ಶನಿವಾರ ಸಂಜೆ ಆಗಬೇಕಿದ್ದ ದಾಳಿ ಬೆಳಗ್ಗೆ ಆಗಲು ಕಾರಣ?
‘ನಮ್ಮ ಬೇಹುಗಾರಿಕೆ ಮತ್ತು ಅತ್ಯುತ್ತಮ ಟ್ರ್ಯಾಕಿಂಗ್ ಸಿಸ್ಟಂಗಳ ಕಣ್ತಪ್ಪಿಸಲು ಅವರಿಂದಾಗಲಿಲ್ಲ. ಅವರಿಗೆ ಬೇರೇನೂ ಮಾಡಲು ಸಾಧ್ಯವಿರಲಿಲ್ಲ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಅಂದರೆ, ಇರಾನ್ ಮುಖ್ಯಸ್ಥರು ಹಾಗೂ ಇತರರ ಮೇಲೆ ಇಸ್ರೇಲ್ ಹಾಗೂ ಅಮೆರಿಕದ ಗೂಢಚಾರರು ಮತ್ತು ಟ್ರ್ಯಾಕಿಂಗ್ ಸಿಸ್ಟಂಗಳು ಸದಾ ಕಣ್ಣಿಟ್ಟಿದ್ದರು ಎಂದಾಯಿತು.
ಟೆಹರಾನ್ನಲ್ಲಿ ಶನಿವಾರ ಸಂಜೆ ಖಮೇನಿ ಅವರು ಇತರ ಪ್ರಮುಖ ವ್ಯಕ್ತಿಗಳ ಜೊತೆ ರಹಸ್ಯ ಸಭೆ ನಡೆಸಲು ನಿಶ್ಚಿತವಾಗಿತ್ತು. ಈ ವಿಚಾರ ಕೂಡ ಅಮೆರಿಕ, ಇಸ್ರೇಲ್ ಗುಪ್ತಚರರಿಗೆ ಗೊತ್ತಾಗಿತ್ತು. ಇರಾನ್ ಮುಖ್ಯಸ್ಥರು ಸೇರಿದಂತೆ ಆ ದೇಶದ ಅತ್ಯಂತ ಪ್ರಬಲ ನಾಯಕರು ಒಂದೆಡೆ ಇರುವಾಗಲೇ ದಾಳಿ ಮಾಡಿ ಒಟ್ಟಿಗೆ ಮುಗಿಸುವುದು ಅಮೆರಿಕ, ಇಸ್ರೇಲ್ನ ಪ್ಲಾನ್ ಆಗಿತ್ತು. ಅಂತೆಯೇ ಶನಿವಾರ ಸಂಜೆ ದಾಳಿ ಮಾಡುವುದೆಂದು ತೀರ್ಮಾನಿಸಲಾಯಿತು.
ಇದನ್ನೂ ಓದಿ: ಓಮನ್ ಬಿಟ್ಟು ಉಳಿದ ಗಲ್ಫ್ ದೇಶಗಳ ಮೇಲೆ ಇರಾನ್ ಕ್ಷಿಪಣಿ ದಾಳಿ; ಆ ಒಂದು ರಾಷ್ಟ್ರ ಬಿಟ್ಟಿದ್ದೇಕೆ?
ನಂತರ ಖಮೇನಿ ಅವರ ಪ್ಲಾನ್ ಬದಲಾಯಿತು. ಸಂಜೆ ಬದಲು ಬೆಳಗ್ಗೆ ರಹಸ್ಯ ಸಭೆ ನಡೆಸಿದರು. ಈ ಮಾಹಿತಿಯೂ ಕೂಡ ಅಮೆರಿಕ ಮತ್ತು ಇಸ್ರೇಲ್ಗೆ ಗೊತ್ತಾಗಿ ಹೋಗಿತ್ತು. ಅವರ ದಾಳಿ ಕಾರ್ಯಾಚರಣೆಯ ಸಮಯವೂ ಕೂಡ ಶನಿವಾರ ಬೆಳಗ್ಗೆಗೆ ಹಿಂದೂಡಿಕೆ ಆಯಿತು. ಅದರಂತೆ ಇಸ್ರೇಲ್ ಅಮೆರಿಕ ಜಂಟಿ ಕಾರ್ಯಾಚರಣೆ ನಡೆಸಿ ಖಮೇನಿ ಇದ್ದ ಸ್ಥಳದ ಮೇಲೆ ದಾಳಿ ಮಾಡಲಾಯಿತು ಎನ್ನಲಾಗಿದೆ.
ಇನ್ನಷ್ಟು ಅಂತರರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ