
ದಾವಣಗೆರೆ, ಮಾ.19: ಎಲ್ಲಿಯೋ ನಡೆಯುತ್ತಿರುವ ಯುದ್ಧದ ಪರಿಣಾಮ ದಾವಣಗೆರೆಯ ಈರುಳ್ಳಿ ಮಾರುಕಟ್ಟೆಯ ಮೇಲೆ ಭೀಕರವಾಗಿ ಪರಿಣಾಮವನ್ನು ಉಂಟು ಮಾಡಿದೆ. ಬೆಲೆ ಕುಸಿತದಿಂದಾಗಿ ರೈತರು ಕಂಗಾಲಾಗಿದ್ದು, ತಾವು ಬೆಳೆದ ಬೆಳೆಯನ್ನು ಮಾರುಕಟ್ಟೆಗೆ ತಂದ ಕೂಲಿಯೂ ಸಿಗದೆ ಒದ್ದಾಡಿದ್ದಾರೆ. ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಪ್ರತಿ ಕೆಜೆಗೆ ಕೇವಲ 6 ರಿಂದ 12 ರೂಪಾಯಿಗೆ ಕುಸಿದಿದೆ. ಉತ್ತಮ ಗಾತ್ರದ ಈರುಳ್ಳಿಗೂ ಕೇವಲ 10-12 ರೂಪಾಯಿ ಸಿಗುತ್ತಿದ್ದರೆ, ಸಣ್ಣ ಗಾತ್ರದ ಈರುಳ್ಳಿಗೆ 6-8 ರೂಪಾಯಿ ಮಾತ್ರ ಲಭಿಸುತ್ತಿದೆ.
ಜಾಗತಿಕ ಯುದ್ಧದ ಭೀತಿಯಿಂದಾಗಿ ಇಂಧನ ಮತ್ತು ಸಿಲಿಂಡರ್ ಬೆಲೆ ಏರಿಕೆಯಾಗಿದ್ದು, ಹಲವು ಹೋಟೆಲ್ಗಳು ವಹಿವಾಟು ಸ್ಥಗಿತಗೊಳಿಸಿವೆ. ಇದು ಈರುಳ್ಳಿಯ ಬೇಡಿಕೆಯ ಮೇಲೆ ನೇರ ಪರಿಣಾಮ ಬೀರಿದೆ. ಈರುಳ್ಳಿ ಬೆಲೆ ಕುಸಿದಿದ್ದರೆ, ಅದನ್ನು ತುಂಬುವ ಖಾಲಿ ಚೀಲದ ಬೆಲೆ ಮಾತ್ರ 18 ರಿಂದ 20 ರೂಪಾಯಿಗೆ ಏರಿಕೆಯಾಗಿದೆ. ರೈತರು ಈರುಳ್ಳಿಯ ಜೊತೆಗೆ ಚೀಲವನ್ನೂ ಉಚಿತವಾಗಿ ಕೊಟ್ಟು ಹೋಗಬೇಕಾದ ದುಸ್ಥಿತಿ ನಿರ್ಮಾಣವಾಗಿದೆ.
ಇದನ್ನೂ ಓದಿ: ಕರ್ನಾಟಕದಲ್ಲಿ ಆಲಿಕಲ್ಲು ಮಳೆ ಅಬ್ಬರ: ಕಾಶ್ಮೀರದಂತಾದ ಮಲೆನಾಡು; ರೈತರಿಗೆ ತಪ್ಪದ ಬೆಳೆ ಹಾನಿ ಸಂಕಷ್ಟ!
ಆಂಧ್ರಪ್ರದೇಶ, ತೆಲಂಗಾಣ ಸೇರಿದಂತೆ ರಾಜ್ಯದ ಕೊಪ್ಪಳ, ಬಳ್ಳಾರಿ, ವಿಜಯಪುರ ಮತ್ತು ಹೊಸಪೇಟೆಯಿಂದ ನೂರಾರು ಕ್ವಿಂಟಾಲ್ ಈರುಳ್ಳಿ ಹೊತ್ತು ತಂದ ರೈತರು ದರ ನೋಡಿ ಕಣ್ಣೀರು ಹಾಕುತ್ತಿದ್ದಾರೆ. ಸ್ಥಳೀಯವಾಗಿ ಬೆಳೆದ ಈರುಳ್ಳಿಗೆ ನಾಸಿಕ್ ಈರುಳ್ಳಿಯ ಅರ್ಧದಷ್ಟು ದರವೂ ಸಿಗುತ್ತಿಲ್ಲ ಎಂಬುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ