
ಬೆಂಗಳೂರು, ಮಾರ್ಚ್ 11: ಆತ ಚಾಲಕ (Driver). ಕಳೆದ ಹತ್ತು ವರ್ಷದಿಂದ ಒಂದೇ ಕಡೆ ಕೆಲಸ ಮಾಡುತ್ತಿದ್ದ. ಆತ ಮನೆ ಮಾಲೀಕರ ನಂಬಿಕೆ ಗಳಿಸಿದ್ದ. ಅವರು ಕೂಡ ಈತನನ್ನ ಬಹಳ ಆತ್ಮೀಯತೆಯಿಂದಲೇ ನೋಡಿಕೊಳ್ಳುತ್ತಿದ್ದರು. ಆದರೆ ಇದನ್ನೇ ಬಂಡವಾಳ ಮಾಡಿಕೊಂಡ ಆಸಾಮಿ ಮನೆಯಲ್ಲಿದ್ದ ಚಿನ್ನದ ಮೇಲೆಯೇ ಕಣ್ಣು ಹಾಕಿದ್ದ. ಆ ಮೂಲಕ ಉಂಡ ಮನೆಗೆ ಕನ್ನ ಹಾಕಿದ್ದ. ಚಾಲಕನ ಕಳ್ಳಾಟ ಬಯಲಾಗಿದ್ದೇ ನಿಜಕ್ಕೂ ರೋಚಕ.
ಉಂಡ ಮನೆಗೆ ದ್ರೋಹ
ಉಂಡ ಮನೆಗೆ ಕನ್ನ ಹಾಕಿದ ಕಾರು ಚಾಲಕನ ಹೆಸರು ಅಭಿಲಾಷ್. ಪ್ರತೀಕ್ ಎಂಬುವವರ ಪತ್ನಿ ಭುವನಾ ಅವರ ತಾಯಿಯ ಮನೆಯಲ್ಲಿ ಕಾರು ಚಾಲಕನಾಗಿ ಕೆಲಸ ಮಾಡಿಕೊಂಡಿದ್ದ. ಕಳೆದ 10 ವರ್ಷದಿಂದ ಇದ್ದ ಈತನನ್ನ ಮನೆಯವರು ಮನೆಮಗನಂತೆಯೇ ನೋಡಿಕೊಳ್ಳುತ್ತಿದ್ದರು. ಆದರೆ ಈತ ಮಾತ್ರ ಉಂಡ ಮನೆಗೆ ದ್ರೋಹ ಬಗೆದಿದ್ದ. 13 ಲಕ್ಷ ರೂ. ಮೌಲ್ಯದ ಚಿನ್ನದ ಗಟ್ಟಿ ಕದ್ದು ಪರಾರಿಯಾಗಿದ್ದ ಅಭಿಲಾಷ್ನನ್ನು ಬಂಧಿಸಿ ಪೊಲೀಸರು ಇದೀಗ ಜೈಲಿಗಟ್ಟಿದ್ದಾರೆ.
ನಡೆದಿದ್ದೇನು?
ಪ್ರತೀಕ್ ಪತ್ನಿ ಭುವನಾ ಕುಟುಂಬಸ್ಥರು ಎಮರ್ಜೆನ್ಸಿ ಇದೆ ಅಂತಾ ಚಿನ್ನವನ್ನು ಚಾಲಕ ಅಭಿಲಾಷ್ಗೆ ಕೊಟ್ಟು ಗಿರವಿ ಇಟ್ಟು ಬರುವಂತೆ ಹೇಳಿದ್ದಾರೆ. ಸ್ವಲ್ಪ ದಿನ ಕಳೆಯುತ್ತಿದ್ದಂತೆ ಚಿನ್ನ ಬಿಡಿಸಿಕೊಳ್ಳಲು ಮನೆಯವರು ಹೋಗಿದ್ದಾರೆ. ಆದರೆ ಅಲ್ಲಿ ಶಾಕ್ ಕಾದಿತ್ತು. ಏಕೆಂದರೆ ಗಿರವಿ ಅಂಗಡಿ ಸಿಬ್ಬಂದಿ ಈಗಾಗಲೇ ಚಾಲಕ ಅಭಿಲಾಷ್ ಚಿನ್ನವನ್ನು ಬಿಡಿಸಿಕೊಂಡು ಹೋಗಿರೋದಾಗಿ ಹೇಳಿದ್ದಾರೆ. ಅಲ್ಲಿಗೆ ಚಾಲಕನ ಅಸಲಿ ಕಹಾನಿ ಶುರುವಾಗಿದೆ.
ಇದನ್ನೂ ಓದಿ: ಚೀನಾ ಲಿಂಕ್ ಹೊಂದಿರುವ ಮಂಗಳೂರಿನ ಸೈಬರ್ ವಂಚಕರ ಬಂಧನ
ಮಾಲೀಕರು ನೀಡಿದ್ದ ಚಿನ್ನವನ್ನು ಗಿರವಿ ಇಟ್ಟಿದ್ದ ಆಸಾಮಿ ಬಳಿಕ ಅದನ್ನು ಬಿಡಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಿಬಿಟ್ಟಿದ್ದ. ಇದರಿಂದ ಅನುಮಾನಗೊಂಡ ಮನೆಯವರು ಮನೆಯಲ್ಲಿದ್ದ ಚಿನ್ನವನ್ನು ಪರಿಶೀಲನೆ ನಡೆಸಿದಾಗ ಮನೆಯಲ್ಲಿದ್ದ ಒಂದಷ್ಟು ಚಿನ್ನ ಕಡಿಮೆ ಆಗಿರುವುದು ಕೂಡ ಗೊತ್ತಾಗಿದೆ. ಚಾಲಕ ಹಂತ ಹಂತವಾಗಿ ಮನೆಯಲ್ಲಿಟ್ಟಿದ್ದ ಚಿನ್ನ ಕದ್ದು ಮಾರಾಟ ಮಾಡಿದ್ದ ಅನ್ನೋದು ಗೊತ್ತಾಗಿದೆ.
ಇದನ್ನೂ ಓದಿ: 6 ತಿಂಗಳ ಸ್ಕೆಚ್, ಪಕ್ಕಾ ಪ್ಲ್ಯಾನ್ ಮಾಡಿ ಕಳ್ಳತನ: 1.8 ಕೆಜಿ ಬಂಗಾರ, ಡೈಮಂಡ್ ಕದ್ದವ ಅರೆಸ್ಟ್
ಇಂತಹ ವ್ಯಕ್ತಿಗಳಿರುವುದರಿಂದ ಪ್ರತಿ ಕೆಲಸದವರನ್ನು ಮನೆ ಮಾಲೀಕರು ಅನುಮಾನದಿಂದ ನೋಡುವಂತಾಗಿದೆ. ಸದ್ಯ ಆರೋಪಿಯನ್ನು ಬಂಧಿಸಿರುವ ಅಮೃತಹಳ್ಳಿ ಪೊಲೀಸರು ಜೈಲಿಗಟ್ಟಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.