ಬೆಂಗಳೂರು, ಫೆ.19: ಪೊಲೀಸ್ ಸಮವಸ್ತ್ರ ಧರಿಸಿ ಬಂದು ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರ ಮನೆಯವರನ್ನು ಬೆದರಿಸಿ ಲಕ್ಷಾಂತರ ರೂಪಾಯಿ ನಗದು ಹಾಗೂ ಚಿನ್ನಾಭರಣ ದೋಚಿದ್ದ ಪ್ರಕರಣವನ್ನು ಭೇದಿಸುವಲ್ಲಿ ಬ್ಯಾಡರಹಳ್ಳಿ ಪೊಲೀಸರು (Byadarahalli robbery) ಯಶಸ್ವಿಯಾಗಿದ್ದಾರೆ. ಈ ದರೋಡೆಯ ಹಿಂದೆ ಪೆರೋಲ್ ಮೇಲೆ ಹೊರಬಂದಿದ್ದ ಕುಖ್ಯಾತ ಕೈದಿಯ ಕೈವಾಡ ಇರುವುದು ಪೊಲೀಸರ ತನಿಖೆಯಲ್ಲಿ ದೃಢಪಟ್ಟಿದೆ. ಬ್ಯಾಡರಹಳ್ಳಿಯ ಬಿಇಎಲ್ ಲೇಔಟ್‌ನಲ್ಲಿರುವ ಹೊಂಬಾಳೆಗೌಡ ಎಂಬುವವರ ಮನೆಗೆ ಪೊಲೀಸ್ ಸಮವಸ್ತ್ರದಲ್ಲಿ ಬಂದಿದ್ದ ಗ್ಯಾಂಗ್, ಮನೆಯವರ ಕೈಕಾಲುಗಳಿಗೆ ಟೇಪ್ ಸುತ್ತಿ, ಪಿಸ್ತೂಲ್ ತೋರಿಸಿ ಪ್ರಾಣ ಬೆದರಿಕೆ ಹಾಕಿದ್ದರು. ಮನೆಯಲ್ಲಿದ್ದ 20 ಲಕ್ಷ ರೂಪಾಯಿ ನಗದು ಹಾಗೂ ಅರ್ಧ ಕೆಜಿ ಚಿನ್ನವನ್ನು ದೋಚಿ ಪರಾರಿಯಾಗಿದ್ದರು. ಇದೀಗ ಈ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ.
ಈ ಕಳ್ಳತನ ನಡೆದ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಸೋಕೋ (SOCO) ತಂಡ ಮತ್ತು ಬೆರಳಚ್ಚು ತಜ್ಞರು ಪರಿಶೀಲನೆ ನಡೆಸಿದಾಗ ಮಹತ್ವದ ಸುಳಿವು ಲಭ್ಯವಾಗಿತ್ತು. ಅಲ್ಲಿ ಪತ್ತೆಯಾದ ಬೆರಳಚ್ಚುಗಳನ್ನು ಪರೀಕ್ಷೆ ಮಾಡಿದಾಗ, ಅದು ಈಗಾಗಲೇ ಜೈಲಿನಲ್ಲಿರುವ ಒಬ್ಬ ಖೈದಿಯ ಬೆರಳಚ್ಚಿಗೆ ತಾಳೆಯಾಗಿದೆ. ಇದು ಪೊಲೀಸರನ್ನು ಬೆಚ್ಚಿಬೀಳಿಸಿತ್ತು. ಜೈಲಿನಲ್ಲಿರುವ ವ್ಯಕ್ತಿ ದರೋಡೆ ಮಾಡಲು ಹೇಗೆ ಸಾಧ್ಯ ಎಂಬ ಪ್ರಶ್ನೆ ಕಾಡಿತ್ತು. ನಂತರದಲ್ಲಿ ಈ ಬಗ್ಗೆ ತನಿಖೆ ಮಾಡಿದಾಗ ಅಚ್ಚರಿಯ ವಿಚಾರವೊಂದು ಸಿಕ್ಕಿದೆ.
ಇದನ್ನೂ ಓದಿ: ಪೊಲೀಸರ ಸೋಗಲ್ಲಿ ಉದ್ಯಮಿ ಮನೆಗೆ ನುಗ್ಗಿ 20 ಲಕ್ಷ ನಗದು, ಅರ್ಧ ಕೆಜಿ ಚಿನ್ನಾಭರಣ ದರೋಡೆ
ಹೆಚ್ಚಿನ ತನಿಖೆ ನಡೆಸಿದಾಗ ಖೈದಿಯು ಪೆರೋಲ್ (Parole) ಮೇಲೆ ಜೈಲಿನಿಂದ ಹೊರಬಂದಿರುವುದು ಗೊತ್ತಾಗಿದೆ. ದರೋಡೆ ನಡೆದ ಮರುದಿನವೇ ಆತ ಪುನಃ ಜೈಲಿಗೆ ವಾಪಸ್ ಹೋಗಿರುವುದು ತಿಳಿದುಬಂದಿದೆ. ಅಂದರೆ, ಜೈಲಿನಿಂದ ಹೊರಬಂದು ದರೋಡೆ ಸ್ಕೆಚ್ ಹಾಕಿ, ಕಳ್ಳತನ ಮಾಡಿ ಯಾರಿಗೂ ಅನುಮಾನ ಬಾರದಂತೆ ಮತ್ತೆ ಜೈಲು ಸೇರಿಕೊಂಡಿದ್ದ.ಹೊಂಬಾಳೆಗೌಡ ಅವರು ಇತ್ತೀಚೆಗಷ್ಟೇ ಜಮೀನು ಮಾರಾಟ ಮಾಡಿದ್ದು, ಮನೆಯಲ್ಲಿ ಸುಮಾರು ಒಂದೂವರೆ ಕೋಟಿ ರೂಪಾಯಿ ನಗದು ಇತ್ತು ಎನ್ನಲಾಗಿದೆ. ಈ ವಿಚಾರ ದರೋಡೆಕೋರರಿಗೆ ಗೊತ್ತಾಗಿದ್ದು ಹೇಗೆ ಎಂಬುದು ಈಗ ಪೊಲೀಸರ ಮುಂದಿರುವ ದೊಡ್ಡ ಪ್ರಶ್ನೆ. ಮನೆಯಲ್ಲಿ ದೊಡ್ಡ ಮೊತ್ತದ ಹಣ ಇರುವ ಬಗ್ಗೆ ಕುಟುಂಬದವರಿಗೇ ತಿಳಿದಿದ್ದರಿಂದ, ಕುಟುಂಬದ ಸದಸ್ಯರ ಮೇಲೆಯೂ ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ. ಸದ್ಯ ಬ್ಯಾಡರಹಳ್ಳಿ ಪೊಲೀಸರು ಜೈಲಿನಲ್ಲಿರುವ ಆರೋಪಿಯನ್ನು ಬಾಡಿ ವಾರೆಂಟ್ ಮೇಲೆ ವಶಕ್ಕೆ ಪಡೆಯಲು ಸಿದ್ಧತೆ ನಡೆಸಿದ್ದಾರೆ. ಈ ಬಗ್ಗೆ ಹೆಚ್ಚಿನ ತನಿಖೆ ಅಗತ್ಯ ಇದೆ ಎಂದು ಹೇಳಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On – 10:06 am, Thu, 19 February 26