Headlines

ಎಐ ಶೃಂಗಸಭೆಯಲ್ಲಿ ಶರ್ಟ್ ತೆಗೆದು ಘೋಷಣೆ ಕೂಗಿದ ಯುವ ಕಾಂಗ್ರೆಸ್ ಕಾರ್ಯಕರ್ತರ ಬಂಧನ – Kannada News | Youth Congress workers detained over shirtless protest against PM Modi at AI Impact Summit

ನವದೆಹಲಿ, ಫೆಬ್ರವರಿ 20: ದೆಹಲಿಯ ಭಾರತ್ ಮಂಟಪದಲ್ಲಿ ನಡೆಯುತ್ತಿರುವ ಎಐ ಶೃಂಗಸಭೆಯಲ್ಲಿ (AI Summit) ಅಂಗಿ ಬಿಚ್ಚಿ ಪ್ರತಿಭಟನೆ ನಡೆಸಿದ ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ಬಂಧಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ರಾಜಿ ಮಾಡಿಕೊಂಡಿದ್ದಾರೆ ಎಂದು ಘೋಷಣೆ ಕೂಗುತ್ತಾ, ಮೋದಿ ಹಾಗೂ ಟ್ರಂಪ್ ಫೋಟೋ ಇರುವ ಅಂಗಿಯನ್ನು ಕೈಯಲ್ಲಿ ಹಿಡಿದುಕೊಂಡು ಅರೆನಗ್ನರಾಗಿ ಎಐ ಶೃಂಗಸಭೆಯ ಆವರಣದ ತುಂಬ ಓಡಾಡಿ ಪ್ರತಿಭಟನೆ ನಡೆಸಿದ ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ, ಕೇಸ್ ದಾಖಲಿಸಿದ್ದಾರೆ. ಅವರೆಲ್ಲರನ್ನೂ ವಿಚಾರಣೆಗಾಗಿ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ.

ಇನ್ನು, ಈ ಕಾಂಗ್ರೆಸ್ ಕಾರ್ಯರ್ತರು ಹೇಗೆ ಅಷ್ಟು ಬಿಗಿ ಭದ್ರತೆಯಿದ್ದ ಭಾರತ್ ಮಂಟಪದೊಳಗೆ ನುಗ್ಗಿದರು ಎಂಬ ಬಗ್ಗೆ ಚರ್ಚೆ ನಡೆದಿತ್ತು. ಈ ಬಗ್ಗೆಯೂ ಅಡಿಷನಲ್ ಪೊಲೀಸ್ ಕಮಿಷನರ್ ದೇವೇಶ್ ಕುಮಾರ್ ಮಹ್ಲಾ ಮಾಹಿತಿ ನೀಡಿದ್ದಾರೆ. “ಯೂತ್ ಕಾಂಗ್ರೆಸ್ ಕಾರ್ಯರ್ತರು ಎಂದು ಹೇಳಿಕೊಂಡಿರುವ ಜನರ ಗುಂಪು ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಭಾರತ್ ಮಂಟಪದೊಳಗೆ ಪ್ರವೇಶಿಸಿದ್ದರು. ಅವರು ಸ್ವೆಟರ್ ಮತ್ತು ಜಾಕೆಟ್ ಹಾಕಿಕೊಂಡಿದ್ದರಿಂದ ಸೆಕ್ಯುರಿಟಿಗಳಿಗೆ ಅವರ ಶರ್ಟ್​​ ಮೇಲಿದ್ದ ಮೋದಿ ಹಾಗೂ ಟ್ರಂಪ್ ಫೋಟೋ, ಘೋಷಣೆ ಕಾಣಿಸಿರಲಿಲ್ಲ. ಒಳಗೆ ಬಂದ ನಂತರ ಅವರು ತಮ್ಮ ಜಾಕೆಟ್ ಬಿಚ್ಚಿ ಅಂಗಿಯನ್ನು ಕೈಯಲ್ಲಿ ಹಿಡಿದು ಘೋಷಣೆ ಕೂಗತೊಡಗಿದರು. ಈ ವಿಷಯ ಗೊತ್ತಾಗುತ್ತಿದ್ದಂತೆ ಕೆಲವೇ ನಿಮಿಷಗಳಲ್ಲಿ ಅವರನ್ನು ನಮ್ಮ ವಶಕ್ಕೆ ಪಡೆಯಲಾಯಿತು. ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಿದ್ದೇವೆ. ಈಗಾಗಲೇ ನಾಲ್ವರನ್ನು ಬಂಧಿಸಿದ್ದೇವೆ. ಉಳಿದವರ ವಿಚಾರಣೆ ನಡೆಯುತ್ತಿದೆ” ಎಂದು ತಿಳಿಸಿದ್ದಾರೆ.

ಇಂದು ನಡೆದ ಇಂಡಿಯಾ ಎಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರ ಗುಂಪೊಂದು ತಮ್ಮ ಶರ್ಟ್‌ಗಳನ್ನು ತೆಗೆದು ಕೇಂದ್ರದ ವಿರುದ್ಧ ಘೋಷಣೆಗಳನ್ನು ಕೂಗಿದ ನಂತರ ಭಾರತ್ ಮಂಟಪದಲ್ಲಿ ನಡೆಯುತ್ತಿರುವ ಎಐ ಶೃಂಗಸಭೆಯ ಒಂದು ಸಭಾಂಗಣದಲ್ಲಿ ಅವ್ಯವಸ್ಥೆ ಭುಗಿಲೆದ್ದಿತು. ಯೂತ್ ಕಾಂಗ್ರೆಸ್ ಕಾರ್ಯಕರ್ತರು ತಮ್ಮ ಟೀ ಶರ್ಟ್‌ಗಳನ್ನು ತೆಗೆದು ಗಾಳಿಯಲ್ಲಿ ಬೀಸುತ್ತಾ ಘೋಷಣೆಗಳನ್ನು ಕೂಗಲು ಪ್ರಾರಂಭಿಸಿದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ದೆಹಲಿಯ ಎಐ ಶೃಂಗಸಭೆಯಲ್ಲಿ ಹೈಡ್ರಾಮಾ; ಶರ್ಟ್ ಬಿಚ್ಚಿ ಮೋದಿ ವಿರುದ್ಧ ಯುವ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ

ಯುವ ಕಾಂಗ್ರೆಸ್ ಸದಸ್ಯರು ಎಂದು ಹೇಳಿಕೊಂಡು ಸುಮಾರು 10 ಜನರು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಅವರು ಪ್ರಧಾನಿ ಮೋದಿ ಮತ್ತು ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಫೋಟೋ ಮುದ್ರಿತವಾದ ಬಿಳಿ ಟಿ-ಶರ್ಟ್‌ಗಳನ್ನು ಹಿಡಿದುಕೊಂಡು “ಇಂಡಿಯಾ ಯುಎಸ್ ಟ್ರೇಡ್ ಡೀಲ್”, “ಎಪ್ಸ್ಟೀನ್ ಫೈಲ್ಸ್” ಮತ್ತು “ಪ್ರಧಾನಿ ರಾಜಿ ಮಾಡಿಕೊಂಡಿದ್ದಾರೆ” ಮುಂತಾದ ಘೋಷಣೆಗಳೊಂದಿಗೆ ಮಳಿಗೆ ಸಂಖ್ಯೆ 5ರಲ್ಲಿ ಮೆರವಣಿಗೆ ನಡೆಸಿದರು. ಪ್ರತಿಭಟನೆ ಕೆಲವೇ ನಿಮಿಷಗಳ ಕಾಲ ನಡೆಯಿತು, ಆದರೆ ಗದ್ದಲಕ್ಕೆ ಕಾರಣವಾಯಿತು.

ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಕಾಂಗ್ರೆಸ್ ಯುವ ನಾಯಕರಲ್ಲಿ ರಾಷ್ಟ್ರೀಯ ಕಾರ್ಯದರ್ಶಿ ಕೃಷ್ಣ ಹರಿ, ಬಿಹಾರ ರಾಜ್ಯ ಕಾರ್ಯದರ್ಶಿ ಕುಂದನ್ ಯಾದವ್, ಯುಪಿ ರಾಜ್ಯ ಉಪಾಧ್ಯಕ್ಷ ಅಜಯ್ ಕುಮಾರ್, ರಾಷ್ಟ್ರೀಯ ಸಂಯೋಜಕ ನರಸಿಂಹ ಯಾದವ್ ಸೇರಿದ್ದಾರೆ ಎಂದು ತಿಳಿದುಬಂದಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 3:21 pm, Fri, 20 February 26

Source link

Leave a Reply

Your email address will not be published. Required fields are marked *