ಮೈಸೂರು, ಮಾರ್ಚ್ 02: ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ರಾಜ್ಯ ಗುಪ್ತಚರ ಇಲಾಖೆಯ ದುರ್ಬಳಕೆ ಕುರಿತು ಗಂಭೀರ ಆರೋಪ ಮಾಡಿದ್ದಾರೆ. ಗುಪ್ತಚರ ಇಲಾಖೆಯನ್ನು ಸರ್ಕಾರವು ದುರ್ಬಳಕೆ ಮಾಡಿಕೊಳ್ಳುತ್ತಿದ್ದು, ರಾಜ್ಯದಲ್ಲಿ ಬಹುಶಃ ಇದೇ ಮೊದಲ ಬಾರಿಗೆ ಇಲಾಖೆ ಮೂಲಕ ಪಕ್ಷದ ಶಾಸಕರುಗಳು ಮತ್ತು ನಾಯಕರ ಕುರಿತು ಮಾಹಿತಿ ಸಂಗ್ರಹಿಸಲಾಗುತ್ತಿದೆ. ಮುಖ್ಯಮಂತ್ರಿ ಸ್ಥಾನಕ್ಕಾಗಿ ಪೈಪೋಟಿ ನಡೆಸುತ್ತಿರುವವರ ಮತ್ತು ಮುಖ್ಯಮಂತ್ರಿಯನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿರುವವರ ಎರಡು ಗುಂಪುಗಳಿದ್ದು, ಇವೆರಡರ ಮಾಹಿತಿ ಸಂಗ್ರಹ ನಡೆಯುತ್ತಿದೆ. ಫೋನ್ ಟ್ಯಾಪಿಂಗ್ ನಿರಂತರವಾಗಿ ಹಲವಾರು ವರ್ಷಗಳಿಂದ ಎಲ್ಲಾ ಸರ್ಕಾರಗಳಲ್ಲೂ ನಡೆಯುತ್ತಾ ಬಂದಿರುವ ಸರ್ವೇಸಾಮಾನ್ಯ ಸಂಗತಿ. ಕೆಲವೊಮ್ಮೆ ತಪ್ಪುಗಳು ಹೊರಬಂದು ಕೆಲವು ಪ್ರಮುಖರ ಸ್ಥಾನಮಾನಗಳಿಗೆ ಧಕ್ಕೆಯಾದ ನಿದರ್ಶನಗಳಿವೆ. ಆದರೂ ಕೆಲವರು ಮಾತ್ರ ತಾವು ನಿಷ್ಕಳಂಕರು ಎಂದು ಬಿಂಬಿಸಿಕೊಳ್ಳಲು ಪ್ರಯತ್ನಿಸುತ್ತಾರೆ ಎಂದು ಕುಮಾರಸ್ವಾಮಿ ಮಾರ್ಮಿಕವಾಗಿ ಹೇಳಿದ್ದಾರೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.