
ಬೆಂಗಳೂರು, ಏ.3: ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬೇರೆ ಬೇರೆ ಬೆದರಿಕೆ ಕರೆಗಳು ಬಂದಿರುವುದನ್ನು ನೋಡಬಹುದು. ಆದರೆ ಇದೀಗ ವಿಚಿತ್ರ ಘಟನೆಯೊಂದು ನಡೆದಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲೂ ಭಾರೀ ವೈರಲ್ ಆಗಿದೆ. ವಿಮಾನ ನಿಲ್ದಾಣದ ಆಡಳಿತ ಕಚೇರಿಗೆ ಅಸಾಮಾನ್ಯ ವಸ್ತುಗಳನ್ನು ಒಳಗೊಂಡಿರುವ ಬಾಕ್ಸ್ವೊಂದು ಬಂದಿದೆ. ಈ ವಿಚಿತ್ರ ಪಾರ್ಸೆಲ್ ಅನ್ನು ಕಳುಹಿಸಿದ ಆರೋಪದ ಮೇಲೆ ಭಾರತೀಯ ಮೂಲದ 65 ವರ್ಷದ ಡಚ್ ಪ್ರಜೆಯನ್ನು ಬಂಧಿಸಲಾಗಿದೆ. ಸುಭಾಷ್ ಜೈ ಅಜೀಜ್ ಎಂದು ಗುರುತಿಸಲ್ಪಟ್ಟ ವ್ಯಕ್ತಿಯನ್ನು ಬುಧವಾರ (ಏ.1) ಬಂಧಿಸಲಾಗಿದೆ. ಸುಭಾಷ್ ಜೈ ಅಜೀಜ್ ಎಂಬ ವ್ಯಕ್ತಿ ಜನವರಿಯಲ್ಲಿ ಈ ಪಾರ್ಸೆಲ್ ಕಳುಹಿಸಿದ್ದಾನೆ. ಅಷ್ಟಕ್ಕೂ ಇದರಲ್ಲಿ ಏನಿತ್ತು ಎಂಬುದು ಅನೇಕರಿಗೆ ಕೂತುಹಲವಾಗಿದೆ.
ಈ ಪಾರ್ಸೆಲ್ನಲ್ಲಿ, ಕೊಳೆತ ಟೊಮೆಟೊ ಮತ್ತು ಕಬ್ಬಿಣದ ತುಂಡುಗಳಂತಹ ವಿಲಕ್ಷಣ ವಸ್ತುಗಳು ಮತ್ತು ಇತರ ಕೆಲವು ವಸ್ತುಗಳು ಇದ್ದವು ಎಂದು ಹೇಳಲಾಗಿದೆ. ಅಧಿಕಾರಿಗಳು ಪ್ರಾಥಮಿಕ ತನಿಖೆ ನಡೆಸಿ ಮಾರ್ಚ್ 4 ರಂದು ಔಪಚಾರಿಕ ದೂರು ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯ ನಂತರ ಪೊಲೀಸರು ತನಿಖೆ ಆರಂಭಿಸಿದರು. ಆ ಪಾರ್ಸೆಲ್ನಲ್ಲಿ ಟೂತ್ಪೇಸ್ಟ್ ಕವರ್, ಕೊಳೆಯುತ್ತಿರುವ ಹೂವಿನ ಮಾಲೆಗಳು, ಕೊಳೆತ ಟೊಮೆಟೊಗಳು, ಕಬ್ಬಿಣದ ತುಂಡುಗಳು ಮತ್ತು ಅಶ್ಲೀಲ ಛಾಯಾಚಿತ್ರಗಳು ಇದ್ದವು ಎಂದು ಪಿಟಿಐ ಸುದ್ದಿ ಸಂಸ್ಥೆ ತಿಳಿಸಿದೆ.
ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ನಂತರ ಮತ್ತು ಸ್ಥಳೀಯ ಮೂಲಗಳಿಂದ ಮಾಹಿತಿಯನ್ನು ಸಂಗ್ರಹಿಸಿದ ನಂತರ, ಪೊಲೀಸರು ಮಡಿವಾಳದ ದೇವಸ್ಥಾನದ ಬಳಿ ಈ ಪಾರ್ಸೆಲ್ ಇಟ್ಟ ವ್ಯಕ್ತಿಯನ್ನು ಬಂಧಿಸಲಾಗಿದೆ. ಇನ್ನು ಪೊಲೀಸ್ ವಿಚಾರಣೆ ವೇಳೆ ಈ ವ್ಯಕ್ತಿ ಹೇಳಿರುವ ಹೇಳಿಕೆಯನ್ನು ಸಂಗ್ರಹಿಸಿದ್ದಾರೆ. ಅದರಲ್ಲಿ ಈ ವ್ಯಕ್ತಿ, ತನಗೆ ಯಾವುದೇ ದುರುದ್ದೇಶಪೂರಿತ ಉದ್ದೇಶವಿಲ್ಲ ಮತ್ತು ಪಾರ್ಸೆಲ್ “ಅಹಿತಕರ ಘಟನೆಗಳನ್ನು” ತಡೆಗಟ್ಟುವ ಉದ್ದೇಶದ ಭಾಗವಾಗಿದೆ ಎಂದು ಹೇಳಿಕೊಂಡಿದ್ದಾನೆ. ತಾನು ಇತರ ವಿಮಾನ ನಿಲ್ದಾಣಗಳಿಗೂ ಇದೇ ರೀತಿಯ ಪಾರ್ಸೆಲ್ಗಳನ್ನು ಕಳುಹಿಸಿದ್ದಾಗಿ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ.
ಇದನ್ನೂ ಓದಿ: ಕೆ.ಆರ್. ಮಾರುಕಟ್ಟೆಗೆ ಸಿಗಲಿದೆ ಹೈಟೆಕ್ ಸ್ಪರ್ಶ: ಒಂದು ವಾರದೊಳಗೆ ಅಭಿವೃದ್ಧಿ ರಿಪೋರ್ಟ್ ನೀಡಲು ಮಹೇಶ್ವರ ರಾವ್ ಸೂಚನೆ
ಅವನು ಮಾನಸಿಕವಾಗಿ ಅಸ್ವಸ್ಥನಂತೆ ಕಾಣುತ್ತಿದ್ದ. ಯಾವುದೇ ರೀತಿಯ ತೊಂದರೆ ಸೃಷ್ಟಿಸುವ ದುರುದ್ದೇಶ ತನಗೆ ಇರಲಿಲ್ಲ, ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ನೋಡಿಕೊಳ್ಳುವ ಉದ್ದೇಶವನ್ನು ಹೊಂದಿದ್ದೇನೆ ಎಂದು ಹೇಳಿಕೆಯನ್ನು ಹೇಳಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಇದೀಗ ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಮತ್ತು ಮುಂದಿನ ಕ್ರಮಗಳು ಅವರ ವೈದ್ಯಕೀಯ ಪರೀಕ್ಷೆಯ ವರದಿಯ ನಂತರ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ