Headlines

ಐದು ವರ್ಷದಲ್ಲಿ ಐಟಿ ಉದ್ಯೋಗಗಳೇ ಇರೋದಿಲ್ಲ ಎಂದಿದ್ದಾರೆ ವಿನೋದ್ ಖೋಸ್ಲಾ; ಎಐನಿಂದ ಭಾರತವೇನು ಮಾಡಬೇಕು? – Kannada News | AI impact on the world, not IT service and BPO jobs in 5 years, says Vinod Khosla

ನವದೆಹಲಿ, ಫೆಬ್ರುವರಿ 16: ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನ ದಿನೇ ದಿನೇ ವೇಗವಾಗಿ ಅಭಿವೃದ್ಧಿಗೊಳ್ಳುತ್ತಿದ್ದು, ಮನುಷ್ಯರ ಬಹುತೇಕ ಉದ್ಯೋಗಗಳು ಇಲ್ಲವಾಗುತ್ತವೆ ಎಂದು ಅನೇಕ ಟೆಕ್ ಪಂಡಿತರು ಹೇಳುತ್ತಿದ್ದಾರೆ. ಅಮೆರಿಕದಲ್ಲಿ ಹೆಸರಾಂತ ಉದ್ಯಮಿ ಮತ್ತು ಹೂಡಿಕೆದಾರರಾಗಿರುವ ಭಾರತ ಮೂಲದ ವಿನೋದ್ ಖೋಸ್ಲಾ (Vinod Khosla) ಕೂಡ ಇದೇ ಅಭಿಪ್ರಾಯ ಪುನರುಚ್ಚರಿಸಿದ್ದಾರೆ. ಇವರ ಪ್ರಕಾರ ಮುಂದಿನ ಐದು ವರ್ಷದಲ್ಲಿ ಐಟಿ ಸರ್ವಿಸ್ ಮತ್ತು ಬಿಪಿಒ ಕೆಲಸಗಳು ಬಹುತೇಕ ಪೂರ್ಣವಾಗಿ ಕಾಣೆಯಾಗುತ್ತವಂತೆ.

‘ಐಟಿ ಮತ್ತು ಬಿಪಿಒ ಸೇವೆಗಳು ಮುಂದಿನ ಐದು ವರ್ಷದಲ್ಲಿ ಮರೆಯಾಗುವುದು ಖಚಿತ. ಆ ನಂತರದ ಐದು ವರ್ಷದಲ್ಲಿ ಎಲ್ಲಾ ಕೆಲಸಗಳಲ್ಲೂ ಮತ್ತು ಎಲ್ಲಾ ವಿಷಯಗಳಲ್ಲೂ ಮನುಷ್ಯರಿಗಿಂತ ಎಐ ಉತ್ತಮ ಎನಿಸುತ್ತದೆ. ಯಂತ್ರಕ್ಕಿಂತ ಮನುಷ್ಯ ಚೆನ್ನಾಗಿ ಕೆಲಸ ಮಾಡುತ್ತಾನೆ ಎಂದು ಹೇಳಿಕೊಳ್ಳಲು ಹೆಚ್ಚೇನೂ ಇರದು’ ಎಂದು ಸನ್ ಮೈಕ್ರೋಸಿಸ್ಟಮ್ಸ್​ನ ಸಹ-ಸಂಸ್ಥಾಪಕರಾದ ಖೋಸ್ಲಾ ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: AI Impact Summit: ಜನಕಲ್ಯಾಣಕ್ಕೆ ಎಐ ಬಳಕೆ, ಇದು ಭಾರತಕ್ಕಿರುವ ಬದ್ಧತೆ: ಅಶ್ವಿನಿ ವೈಷ್ಣವ್

‘ಎಐ ಏಜೆಂಟ್​ಗಳು ಅಕೌಂಟಿಂಗ್ ಮಾಡಬಲ್ಲವು. ಮಾನವ ಅಕೌಂಟೆಂಟ್​ಗಳಿಗಿಂತ ಈ ಯಂತ್ರಗಳಿಗೆ ಕ್ಷಮತೆ ಹೆಚ್ಚು. ಎಐ ಏಜೆಂಟ್ ಒಬ್ಬ ವೈದ್ಯನಾಗಬಹುದು, ಕ್ಯಾನ್ಸರ್ ರೋಗ ತಜ್ಞನಾಗಬಹುದು, ಮಾನಸಿಕ ಚಿಕಿತ್ಸಕನಾಗಬಹುದು. ಇವತ್ತು 25 ವರ್ಷದೊಳಗಿನ ವಯಸ್ಸಿನಲ್ಲಿರುವವರು 40ರ ಪ್ರಾಯಕ್ಕೆ ಬರುವಷ್ಟರಲ್ಲಿ ಭೂಮಿಯ ಮೇಲೆ ಬಹಳ ಕಡಿಮೆ ಉದ್ಯೋಗಗಳಿರುತ್ತವೆ’ ಎಂದು ಹೇಳುವ ವಿನೋದ್ ಖೋಸ್ಲಾ, ಆಟೊಮೇಶನ್ ಬಳಿಕ ಭೌತಿಕ ರೋಬೋಟಿಕ್ ಕಾರ್ಮಿಕರ ಆಗಮನ ಹೆಚ್ಚಾಗುತ್ತದೆ ಎಂದೂ ಭವಿಷ್ಯ ನುಡಿದಿದ್ದಾರೆ.

ಎಐ ಸೆಕ್ಟರ್​ನಲ್ಲಿ ಭಾರತಕ್ಕೇನಿದೆ ಅವಕಾಶ?

ಭಾರತ ಐಟಿ ಸರ್ವಿಸ್ ಮೇಲೆ ಅವಲಂಬಿತವಾಗಿದ್ದಂತಹ ದೇಶ. ಈಗ ಎಐ ಬಂದು ಐಟಿ ಸೆಕ್ಟರ್ ದೊಡ್ಡ ಅಲೆಯಲ್ಲಿ ಕೊಚ್ಚಿಕೊಂಡು ಹೋಗುವಂತಿದೆ. ಈ ಪರಿಸ್ಥಿತಿಯಲ್ಲಿ ಭಾರತವೇನು ಮಾಡಬೇಕು? ವಿನೋದ್ ಖೋಸ್ಲಾ ಅವರು ಎಐ ಅಧಾರಿತ ಉತ್ಪನ್ನ ಮತ್ತು ಸೇವೆಗಳನ್ನು ಜಗತ್ತಿಗೆ ರಫ್ತು ಮಾಡಬೇಕು ಎಂದು ಸಲಹೆ ನೀಡಿದ್ದಾರೆ.

‘ಪ್ರತಿಯೊಬ್ಬ ಭಾರತೀಯನಿಗೂ ಖರ್ಚೇ ಇಲ್ಲದೆ ವೈದ್ಯರ ಸೇವೆ ನೀಡಬಹುದು. ಪ್ರತೀ ಮಗುವಿಗೂ ಎಐನಿಂದ ಉಚಿತವಾಗಿ ಪಾಠ ಮಾಡಿಸಬಹುದು. ಪ್ರತಿಯೊಬ್ಬರಿಗೂ ವಕೀಲರ ಸೇವೆ ಸಿಗುವಂತೆ ಮಾಡಬಹುದು’ ಎಂದು ವಿನೋದ್ ಖೋಸ್ಲಾ ಅವರು ಎಐ ಉಪಯುಕ್ತತೆಯ ಅವಕಾಶವನ್ನು ವಿವರಿಸಿದ್ಧಾರೆ.

ಇದನ್ನೂ ಓದಿ: ಭಾರತದ ಎಐ ಇಂಪ್ಯಾಕ್ಟ್ ಸಮಿಟ್​ಗೆ ಇಡೀ ಜಗತ್ತು ಆಕರ್ಷಿತವಾಗಿರುವುದು ಯಾಕೆ? ಅಂಥದ್ದೇನು ವಿಶೇಷತೆ ಇದೆ?

ಅಮೆರಿಕ ಮತ್ತು ಚೀನಾದ ಪ್ರಾಬಲ್ಯದಿಂದ ತಪ್ಪಿಸಲು ಭಾರತವು ಸ್ವಂತವಾದ ಎಐ ಮಾಡಲ್​ಗಳನ್ನು ಅಭಿವೃದ್ದಿಪಡಿಸಬೇಕು ಎಂದೂ ಅವರು ಸಲಹೆ ನೀಡಿದ್ದಾರೆ. ವಿನೋದ್ ಖೋಸ್ಲಾ ಅವರು ದೆಹಲಿಯಲ್ಲಿ ನಡೆಯುತ್ತಿರುವ ಎಐ ಇಂಪ್ಯಾಕ್ಟ್ ಸಮಿಟ್​ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಖೋಸ್ಲಾ ಸಲಹೆ ಕೊಟ್ಟಿರುವ ರೀತಿಯಲ್ಲಿ ಭಾರತ ಸರ್ಕಾರ ಕೂಡ ಸಾರ್ವಭೌಮವಾದ ಎಐ ಮಾಡಲ್​ಗಳನ್ನು ಅಭಿವೃದ್ಧಿಪಡಿಸುತ್ತಿದೆ. ಎಐ ಪ್ರಾಡಕ್ಟ್ ಮತ್ತು ಸೇವೆಗಳನ್ನು ನಿರ್ಮಿಸಿ ಜಗತ್ತಿಗೆ ಕೊಡಲು ಬೇಕಾದ ಕ್ರಮ ತೆಗೆದುಕೊಳ್ಳುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *