ಹಾವೇರಿಯಲ್ಲಿ ಕಳ್ಳತನ Image Credit source: tv9 kannada
ಹಾವೇರಿ, ಫೆಬ್ರವರಿ 06: ಇತ್ತೀಚೆಗೆ ಬೆಳಗಾವಿಯ ಚೋರ್ಲಾಘಾಟ್ನಲ್ಲಿ 400 ಕೋಟಿ ರೂ ಹೊತ್ತೊಯ್ತಿದ್ದ ಹಣವನ್ನ ಕಂಟೇನರ್ ಸಮೇತ ಹೈಜಾಕ್ ಮಾಡಲಾಗಿದೆ ಅನ್ನೋ ವಿಷಯ ಕೋಲಾಹಲ ಸೃಷ್ಟಿಸಿತ್ತು. ಇದೀಗ ಅದರಂತೆ ಹೋಲುವ ಪ್ರಕರಣ ಒಂದು ಬೆಳಕಿಗೆ ಬಂದಿದೆ. ಫ್ಲಿಪ್‌ಕಾರ್ಟ್ (Flipkart) ಕಂಪನಿಗೆ ಸೇರಿದ 24 ಲಕ್ಷ ರೂ ಮೌಲ್ಯದ ಮೊಬೈಲ್ ಸೇರಿದಂತೆ ವಿವಿಧ ವಸ್ತುಗಳನ್ನು ಖದೀಮರು ಮೂವಿಂಗ್ ಗೂಡ್ಸ್ ವಾಹನದಿಂದಲೇ ಮಂಗಮಾಯ (theft) ಮಾಡಿದ್ದಾರೆ. ಬೆಂಗಳೂರಿನಿಂದ ಧಾರವಾಡದ ಕೊಟೂರ ಗ್ರಾಮದಲ್ಲಿರುವ ಫ್ಲಿಪ್‌ಕಾರ್ಟ್ ಕಂಪನಿಯ ವೇರ್ ಹೌಸ್ಗೆ ಸಾಗಿಸುವ ವೇಳೆ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಹೆದ್ದಾರಿಯಲ್ಲೇ ಕಳ್ಳರ ಕೈಚಳಕ
ಇತ್ತೀಚಿನ ದಿನಗಳಲ್ಲಿ ಹೆದ್ದಾರಿ ಸೇರಿದಂತೆ ಹಲವು ಕಡೆ ಸಿನಿಮೀಯ ರೀತಿಯಲ್ಲಿ ಕಳ್ಳತನ ಮಾಡುವ ಪ್ರಕರಣಗಳು ಹೆಚ್ಚಾಗುತ್ತಿವೆ. ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲ್ಲೂಕಿನ ಕಾಕೋಳ ಮತ್ತು ಮೊಟೇಬೆನ್ನೂರು ಮಧ್ಯದಲ್ಲಿ ಲಕ್ಷಾಂತರ ರೂ ಮೌಲ್ಯದ ಮೊಬೈಲ್ ಕಳ್ಳತನ ಮಾಡಿದ ಪ್ರಕರಣ ತಡವಾಗಿ ಬೆಳಕಿನ ಬಂದಿದೆ. ಕಳೆದ ಶನಿವಾರ ಘಟನೆ ನಡೆದಿದ್ದು, ಫ್ಲಿಪ್ಕಾರ್ಟ್ ಕಂಪನಿಗೆ ಸೇರಿದ ಮೊಬೈಲ್ ಸೇರಿದಂತೆ ವಿವಿಧ ವಸ್ತುಗಳು ಬೆಂಗಳೂರಿನಿಂದ ಧಾರವಾಡದ ಕೊಟೂರು ಗ್ರಾಮದ ವೇರ್ ಹೌಸ್ಗೆ ಹೋಗುತ್ತಿದ್ದ ವೇಳೆ ಕಳ್ಳತನವಾಗಿದೆ.
ಇದನ್ನೂ ಓದಿ: 400 ಕೋಟಿ ರೂ. ದರೋಡೆ ಪ್ರಕರಣದ ಪ್ರಮುಖ ಆರೋಪಿ ಕಿಶೋರ್ ಸಾಳ್ವೆ ಬಂಧನ
ಗೂಡ್ಸ್ ಲಾರಿ KA-22 D0666 ನಂಬರ್ ವಾಹನದಲ್ಲಿ 6 ಬಾಕ್ಸ್ನಲ್ಲಿದ್ದ 25 ಲಕ್ಷ ರೂ ಮೌಲ್ಯದ ಮೊಬೈಲ್ ಕಳ್ಳತನ ಮಾಡಿದ್ದಾರೆ. ಲಿಂಕಿಟ್ ಡಿವೈಸ್ ಲಾಕ್ ಮುರಿದು ಮೊಬೈಲ್ ಕಳ್ಳತನ ಮಾಡಿದ್ದಾರೆ. ಮಲಿಕಜಾನ್ ಮುಲ್ಲಾ ಎಂಬಾತ ಲಾರಿ ಚಾಲನೆ ಮಾಡುತ್ತಿದ್ದು, ಲಾಕ್ ಮುರಿಯುತ್ತಿದ್ದಂತೆ ಮಾಲೀಕನಿಗೆ ಮೆಸೇಜ್ ಹೋಗಿದೆ. ಲಾರಿಯನ್ನ ಪಕ್ಕಕ್ಕೆ ನಿಲ್ಲಿಸಿ ನೋಡಿದಾಗ 25 ಲಕ್ಷ ರೂ ಮೌಲ್ಯದ 6 ಬಾಕ್ಸ್ನಲ್ಲಿದ್ದ ಮೊಬೈಲ್ ಕಳ್ಳತನವಾಗಿದೆ.
ಪ್ರಕರಣ ದಾಖಲು
ಶನಿವಾರ ಸಂಜೆ ಬೆಂಗಳೂರಿನಿಂದ ಲಾರಿ ಹೊರಟಿದ್ದು ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಕಳ್ಳತನ ನಡೆದಿದೆ ಎನ್ನಲಾಗಿದೆ. ಖದೀಮರು ಹಿಂದೆ ಹಾಕಿದ್ದ ಸೀಲ್ ಮತ್ತು ಡಿಜಿಟಲ್ ಲಾಕರ್ ಕೂಡ ಓಪನ್ ಮಾಡಿದ್ದಾರೆ. ಸದ್ಯ ರಾಣೇಬೆನ್ನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಘಟನೆ ಹೇಗೆ ನಡೆದಿದೆ ಎನ್ನುವುದರ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಎಸ್ಪಿ ಯಶೋದಾ ವಂಟಗೋಡಿ ಹೇಳಿದ್ದಾರೆ.
ಇದನ್ನೂ ಓದಿ: 400 ಕೋಟಿ ರೂ. ದರೋಡೆ ಪ್ರಕರಣ: ಹಣ ಸಾಗಿಸುತ್ತಿದ್ದ ಕಂಟೇನರ್ ಚಾಲಕರು ಕೊನೆಗೂ ಸಿಕ್ಕಿಬಿದ್ರಾ?
ಒಟ್ಟಿನಲ್ಲಿ ಹೆದ್ದಾರಿಯಲ್ಲಿ ಸಾವಿರಾರು ವಾಹನಗಳ ಓಡಾಟದ ಮಧ್ಯೆ ಗೂಡ್ಸ್ ವಾಹನದ ಲಾಕ್ ಮುರಿದು 24 ಲಕ್ಷ ರೂ ಮೌಲ್ಯದ ವಸ್ತುಗಳ ಕಳ್ಳತನ ಮಾಡುವ ಮೂಲಕ ಕಳ್ಳರು ತಮ್ಮ ಕೈಚಳಕ ತೋರಿದ್ದಾರೆ. ಸದ್ಯ ಪೊಲೀಸರ ತನಿಖೆಯಿಂದ ಸತ್ಯಾಸತ್ಯತೆ ಹೊರಬರಬೇಕಿದೆ.
ವರದಿ: ಅಣ್ಣಪ್ಪ ಬಾರ್ಕಿ ಟಿವಿ9 ಹಾವೇರಿ
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.