ಕರ್ನಾಟಕದಾದ್ಯಂತ ಆಟೋ ಗ್ಯಾಸ್ ಹಾಹಾಕಾರ: ಬಂಕ್‌ಗಳ ಮುಂದೆ ಕಿಲೋಮೀಟರ್‌ಗಟ್ಟಲೆ ಕ್ಯೂ, ಚಾಲಕರ ಬದುಕು ದುಸ್ತರ

ಕರ್ನಾಟಕದಾದ್ಯಂತ ಆಟೋ ಗ್ಯಾಸ್ ಹಾಹಾಕಾರ: ಬಂಕ್‌ಗಳ ಮುಂದೆ ಕಿಲೋಮೀಟರ್‌ಗಟ್ಟಲೆ ಕ್ಯೂ, ಚಾಲಕರ ಬದುಕು ದುಸ್ತರ

ಬೆಂಗಳೂರು, ಏಪ್ರಿಲ್ 2: ಕರ್ನಾಟಕದಾದ್ಯಂತ ಕಮರ್ಷಿಯಲ್ ಎಲ್​ಪಿಜಿ ಸಿಲಿಂಡರ್ ಅಭಾವ, ಗೃಹ ಬಳಕೆಯ ಎಲ್​ಪಿಜಿ (LPG) ಕೊರತೆ ಒಂದೆಡೆಯಾದರೆ ಇದೀಗ ಆಟೋ ಗ್ಯಾಸ್ (Auto Gas) ಸಮಸ್ಯೆ ವಿಕೋಪಕ್ಕೆ ಹೋಗಿದೆ. ಗ್ಯಾಸ್ ಸಿಗದೆ ಆಟೋ ಚಾಲಕರು ಬೀದಿಗೆ ಬೀಳುವ ಸ್ಥಿತಿ ನಿರ್ಮಾಣವಾಗಿದ್ದು, ಹಗಲಿಡೀ ಬಂಕ್‌ಗಳ ಮುಂದೆ ಕಾದು ಕುಳಿತು ಕಣ್ಣೀರಿಡುತ್ತಿದ್ದಾರೆ. ಬೆಂಗಳೂರು (Bangalore) ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಗ್ಯಾಸ್ ಅಭಾವದಿಂದಾಗಿ ಸಾರಿಗೆ ವ್ಯವಸ್ಥೆ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.

ಬೆಂಗಳೂರಿನಲ್ಲಿ ಚಾಲಕರ ಗೋಳು ಕೇಳೋರಿಲ್ಲ

ಸಿಲಿಕಾನ್ ಸಿಟಿ ಬೆಂಗಳೂರಿನ ಹೊಸಹಳ್ಳಿ, ಮೂಡಲಪಾಳ್ಯ ಮತ್ತು ರಾಜಾಜಿನಗರದ ರಸ್ತೆಗಳಲ್ಲಿ ಆಟೋಗಳು ಎರಡು ಕಿಲೋಮೀಟರ್‌ವರೆಗೂ ಸಾಲುಗಟ್ಟಿ ನಿಂತಿವೆ. ‘ಕೊರೊನಾ ಸಮಯದಲ್ಲಿಯೂ ನಾವು ಇಷ್ಟು ಪರದಾಡಿಲ್ಲ’ ಎಂದು ಚಾಲಕರು ತಮ್ಮ ಅಳಲು ತೋಡಿಕೊಂಡಿದ್ದಾರೆ. ವಿಜಯನಗರ ಮತ್ತು ಚಾಮರಾಜಪೇಟೆಯ ಭಾರತ್ ಪೆಟ್ರೋಲ್ ಬಂಕ್‌ಗಳಲ್ಲಿ ಕೇವಲ 500 ರೂಪಾಯಿಗೆ ಸೀಮಿತಗೊಳಿಸಿ ಗ್ಯಾಸ್ ನೀಡಲಾಗುತ್ತಿದೆ. ಇದರಿಂದ ಆಕ್ರೋಶಗೊಂಡ ಚಾಲಕರು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಇತ್ತ ಹೊಸಹಳ್ಳಿಯಲ್ಲಿ ವಿಶೇಷ ಚೇತನ ಚಾಲಕನೊಬ್ಬ ಗ್ಯಾಸ್‌ಗಾಗಿ ದಿನವಿಡೀ ಕಾಯುತ್ತಿದ್ದ ದೃಶ್ಯ ಮನಕಲಕುವಂತಿತ್ತು.

ಬಳ್ಳಾರಿಯಲ್ಲಿ ಬಾಣಂತಿ ಮತ್ತು ರೋಗಿಗಳ ಪರದಾಟ

ಗ್ಯಾಸ್ ಅಭಾವ ಕೇವಲ ಚಾಲಕರಿಗಷ್ಟೇ ಅಲ್ಲ, ಪ್ರಯಾಣಿಕರಿಗೂ ಶಾಪವಾಗಿ ಪರಿಣಮಿಸಿದೆ. ಬಳ್ಳಾರಿಯಲ್ಲಿ 9 ದಿನದ ಮಗುವನ್ನು ಆಸ್ಪತ್ರೆಗೆ ಕರೆದೊಯ್ಯಬೇಕಿದ್ದ ಆಟೋದಲ್ಲಿ ಗ್ಯಾಸ್ ಖಾಲಿಯಾಗಿದ್ದು, ಬಂಕ್‌ಗಳ ಮುಂದೆ ನೂರಾರು ಆಟೋಗಳು ನಿಂತಿದ್ದರಿಂದ ತಾಯಿ ಮತ್ತು ಮಗು ಪರದಾಡುವಂತಾಯಿತು.

ಇತರ ಜಿಲ್ಲೆಗಳಲ್ಲೂ ಮುಂದುವರಿದ ಸಂಕಷ್ಟ

  • ಹುಬ್ಬಳ್ಳಿ: ಇಲ್ಲಿನ ಬಂಕ್‌ಗಳಲ್ಲಿ ಪ್ರತಿ ಆಟೋಗೆ ಕೇವಲ 2 ಲೀಟರ್ ಗ್ಯಾಸ್ ಮಾತ್ರ ನೀಡುವಂತೆ ಲಿಮಿಟ್ ವಿಧಿಸಲಾಗಿದೆ.
  • ಯಾದಗಿರಿ: ಜಿಲ್ಲೆಯಲ್ಲಿದ್ದ ಏಕೈಕ ಎಲ್‌ಪಿಜಿ ಬಂಕ್‌ಗೆ ಬೀಗ ಬಿದ್ದಿದ್ದು, ಚಾಲಕರು ದಿಕ್ಕು ತೋಚದಂತಾಗಿದ್ದಾರೆ.
  • ರಾಯಚೂರು: ಇಲ್ಲಿನ ಚಾಲಕರ ಕಣ್ಣೀರಿಗೆ ಸ್ಪಂದಿಸಿರುವ ಜಿಲ್ಲಾಡಳಿತ, ಆಹಾರ ಇಲಾಖೆ ಅಧಿಕಾರಿಗಳ ಮೂಲಕ ಬಂಕ್‌ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದೆ.
  • ಮಂಗಳೂರು & ಚಾಮರಾಜನಗರ: ಈ ಜಿಲ್ಲೆಗಳಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ, ಚಾಲಕರು ದುಡಿಮೆ ಇಲ್ಲದೆ ಕಂಗಾಲಾಗಿದ್ದಾರೆ.

ಇದನ್ನೂ ಓದಿ: ರಾಜ್ಯದಲ್ಲಿ ಗ್ಯಾಸ್ ಸಮಸ್ಯೆ ಮಧ್ಯೆ ಆಘಾತ! ಸಿಲಿಂಡರ್​ ಸಾಗಿಸ್ತಿದ್ದ ಲಾರಿ ಪಲ್ಟಿ

‘ಮೋದಿ ಸಾಹೇಬರೇ ನಮಗೆ ಸಹಾಯ ಮಾಡಿ’ ಎಂದು ರಾಜಾಜಿನಗರದ ಚಾಲಕರು ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮೊರೆ ಇಟ್ಟಿದ್ದಾರೆ. ಒಟ್ಟಾರೆ, ದಿನದ ದುಡಿಮೆಯನ್ನೇ ನಂಬಿರುವ ಸಾವಿರಾರು ಕುಟುಂಬಗಳು ಇಂದು ಗ್ಯಾಸ್, ಆಟೋ ಗ್ಯಾಸ್ ಇಲ್ಲದೆ ಸಂಕಷ್ಟಕ್ಕೆ ಸಿಲುಕುವಂತಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *