ಕರ್ನಾಟಕ ಬಜೆಟ್ 2026: ಕನ್ನಡ ಚಿತ್ರರಂಗಕ್ಕೆ ಸಿಕ್ಕಿದ್ದೇನು?

ಕರ್ನಾಟಕ ಬಜೆಟ್ 2026: ಕನ್ನಡ ಚಿತ್ರರಂಗಕ್ಕೆ ಸಿಕ್ಕಿದ್ದೇನು?

ಸಿಎಂ ಸಿದ್ದರಾಮಯ್ಯ (Siddaramaiah) ಅವರು ದಾಖಲೆಯ 17ನೇ ಬಾರಿ ಕರ್ನಾಟಕ ಬಜೆಟ್ ಅನ್ನು ಇಂದು (ಮಾರ್ಚ್ 06) ಮಂಡಿಸಿದರು. ಹಲವಾರು ಕ್ಷೇತ್ರಗಳಿಗೆ ಹಲವು ಅನುದಾನ, ಯೋಜನೆಗಳನ್ನು ಬಜೆಟ್​​ನಲ್ಲಿ ಘೋಷಣೆ ಮಾಡಲಾಗಿದೆ. ನಿರೀಕ್ಷೆಯಂತೆ ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಗ್ರಾಮೀಣಾಭಿವೃದ್ಧಿ, ಕೃಷಿ ಇನ್ನಿತರೆ ಪ್ರಮುಖ ಕ್ಷೇತ್ರಗಳಿಗೆ ಹೆಚ್ಚಿನ ಅನುದಾನವನ್ನು ನೀಡಲಾಗಿದೆ. ಕನ್ನಡ ಚಿತ್ರರಂಗವೂ ಸಹ ಈ ಬಾರಿಯ ಬಜೆಟ್​​ ಮೇಲೆ ಸಾಕಷ್ಟು ನಿರೀಕ್ಷೆಗಳನ್ನು ಇರಿಸಿಕೊಂಡಿತ್ತು. ಹಾಗಿದ್ದರೆ ಬಜೆಟ್​​ನಲ್ಲಿ ಕನ್ನಡ ಚಿತ್ರರಂಗಕ್ಕೆ ಸಿಕ್ಕಿದ್ದೇನು? ಮಾಹಿತಿ ಇಲ್ಲಿದೆ…

ಹೆಸರಘಟ್ಟದಲ್ಲಿರುವ ಸರ್ಕಾರಿ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆಯಲ್ಲಿ ನಡೆಸಲಾಗುತ್ತಿರುವ ಸೌಂಡ್ ರೆಕಾರ್ಡಿಂಗ್ ಮತ್ತು ಇಂಜಿನಿಯರಿಂಗ್ ಹಾಗೂ ಸಿನಿಮಾಟೊಗ್ರಫಿ ಕೋರ್ಸುಗಳಿಗೆ ಅಗತ್ಯವಿರುವ ಆಧುನಿಕ ಉಪಕರಣಗಳನ್ನು ಒದಗಿಸಲಾಗುವುದು ಎಂದು ಸಿಎಂ ಅವರು ಬಜೆಟ್​​ನಲ್ಲಿ ಘೋಷಿಸಿದ್ದಾರೆ.

ರಾಜ್ಯದಲ್ಲಿ ಚಲನಚಿತ್ರ ಹಾಗೂ ಇತರೆ ಚಿತ್ರೀಕರಣಗಳಿಗೆ ಅಗತ್ಯವಿರುವ ವಿವಿಧ ಇಲಾಖೆಗಳ ಅನುಮತಿಗಳನ್ನು ಏಕಗವಾಕ್ಷಿ ವ್ಯವಸ್ಥೆಯಲ್ಲಿ ಒಂದೇ ವೇದಿಕೆಯಲ್ಲಿ ನೀಡುವ ಸಲುವಾಗಿ ‘ಸಿನಿ ಮಿತ್ರ’ ಎಂಬ ಆನ್‌ಲೈನ್ ಡಿಜಿಟಲ್ ವ್ಯವಸ್ಥೆಯನ್ನು ಜಾರಿಗೊಳಿಸಲಾಗುವುದು ಎಂದು ಬಜೆಟ್​​ನಲ್ಲಿ ಘೋಷಿಸಲಾಗಿದೆ. ಚಿತ್ರೀಕರಣಕ್ಕೆ ಅನುಮತಿ ಪಡೆಯುವುದು ಇದರಿಂದ ಸುಲಭವಾಗುವ ಜೊತೆಗೆ ನಿಯಮಗಳ ಪಾಲನೆ ಕಡ್ಡಾಯ ಆಗಲಿದೆ.

ಇದನ್ನೂ ಓದಿ:‘ಧುರಂಧರ್ 2’ ಸಿನಿಮಾ ಟ್ರೈಲರ್: ಸಜ್ಜಾಗಿ ಎಂದ ರಣ್ವೀರ್

ಗುಣಾತ್ಮಕ ಚಲನಚಿತ್ರಗಳಿಗೆ ನೀಡಲಾಗುತ್ತಿದ್ದ ಸಹಾಯಧನವು ಕೆಲವು ವರ್ಷಗಳಿಂದ ಸ್ಥಗಿತಗೊಂಡಿದ್ದು, 2025-26 ನೇ ಸಾಲಿನಲ್ಲಿ ಮೂರು ವರ್ಷಗಳ ಚಲನಚಿತ್ರಗಳನ್ನು ಗುರುತಿಸಿ ನಮ್ಮ ಸರ್ಕಾರದಲ್ಲಿ ಸಹಾಯಧನವನ್ನು ನೀಡಲಾಗಿರುತ್ತದೆ. ಪ್ರಸಕ್ತ ಸಾಲಿಗೆ ಉಳಿದ ಮೂರು ವರ್ಷಗಳ ಚಲನಚಿತ್ರಗಳ ಆಯ್ಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಸಹಾಯಧನವನ್ನು ನೀಡಲು 20 ಕೋಟಿ ರೂ. ಗಳನ್ನು ಒದಗಿಸಲಾಗುವುದು ಎಂದು ಸಿದ್ದರಾಮಯ್ಯ ಬಜೆಟ್​​ನಲ್ಲಿ ಘೋಷಿಸಿದ್ದಾರೆ.

ಮೈಸೂರು ಫಿಲ್ಮ್ ಸಿಟಿಯನ್ನು ಸ್ಥಾಪಿಸಲು ಈ ಸಾಲಿನಲ್ಲಿ 500 ಕೋಟಿ ರೂ.ಗಳಿಗೆ ಅನುಮೋದನೆ ನೀಡಲಾಗಿದೆ. ಫಿಲ್ಮ್ ಸಿಟಿ ಸೌಲಭ್ಯಗಳನ್ನು ಒಳಗೊಂಡಂತೆ ಪ್ರವಾಸಿಗರಿಗೆ ಅನುಕೂಲವಾಗುವಂತೆ ಥೀಮ್ ಪಾರ್ಕ್, ಸ್ಟಾರ್ ಹೋಟೆಲ್ ಮತ್ತು ರೆಸಾರ್ಟ್‌ಗಳನ್ನು ಒಳಗೊಂಡ PPP (ಪಬ್ಲಿಕ್ ಪ್ರೈವೇಟ್ ಪಾರ್ಟನರ್​​ಶಿಪ್) ಮಾದರಿಯಲ್ಲಿ ಅಭಿವೃದ್ಧಿಗೆ ಅನುಮೋದನೆ ನೀಡಿ ವ್ಯವಹಾರ ನಡೆಸಬೇಕೆಂದು ತೀರ್ಮಾನಿಸಲಾಗಿದೆ.

ಕನ್ನಡ ಚಿತ್ರರಂಗದ ಹಿರಿಯ ಮತ್ತು ಲಿಜೆಂಡರಿ ನಿರ್ದೇಶಕ ಆಗಿರುವ ಪುಟ್ಟಣ್ಣ ಕಣಗಾಲ್ ಅವರ ನಿವಾಸವನ್ನು ವಸ್ತು ಸಂಗ್ರಹಾಲಯವನ್ನಾಗಿ ರೂಪಿಸಲಾಗುವುದು ಎಂದು ಸಿದ್ದರಾಮಯ್ಯ ಬಜೆಟ್​​ನಲ್ಲಿ ಹೇಳಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *