ಬೆಂಗಳೂರು, ಮಾರ್ಚ್ 6: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ದಾಖಲೆಯ 16ನೇ ಬಜೆಟ್ (Karnataka Budget 2026) ಮಂಡಿಸುತ್ತಿದ್ದು, ಇದು ರಾಜ್ಯದ ರಾಜಕೀಯ ಮತ್ತು ಆರ್ಥಿಕ ವಲಯದ ಗಮನ ಸೆಳೆದಿದೆ. ಈಗಾಗಲೇ, ಕರ್ನಾಟಕದ ಇತಿಹಾಸದಲ್ಲೇ ಅತೀ ಹೆಚ್ಚು ಕಾಲ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ ಹೆಗ್ಗಳಿಕೆಗೆ ಅವರು ಜನವರಿಯಲ್ಲಿ ಪಾತ್ರರಾಗಿದ್ದು, ಇದೀಗ ಬಜೆಟ್ ಮಂಡನೆಯಲ್ಲೂ ದಾಖಲೆ ನಿರ್ಮಿಸುತ್ತಿದ್ದಾರೆ. ಈ ಹಿಂದೆ ರಾಮಕೃಷ್ಣ ಹೆಗಡೆ 13 ಹಾಗೂ ಬಿಎಸ್ ಯಡಿಯೂರಪ್ಪ 8 ಬಜೆಟ್ಗಳನ್ನು ಮಂಡಿಸಿದ್ದರೆ ಇದೀಗ ಸಿದ್ದರಾಮಯ್ಯ 17ನೇ ಬಜೆಟ್ ಮಂಡನೆ ಮಾಡುತ್ತಿದ್ದಾರೆ.
ಕರ್ನಾಟಕ ಬಜೆಟ್ ಅಧಿವೇಶನ ಮಾರ್ಚ್ 6 ರಿಂದ ಮಾರ್ಚ್ 27ರವರೆಗೆ ನಡೆಯಲಿದೆ. ಒಟ್ಟು 14 ದಿನಗಳ ಅವಧಿಯಲ್ಲಿ ವಿಧಾನಸಭೆ ಮತ್ತು ವಿಧಾನ ಪರಿಷತ್‌ನಲ್ಲಿ ಬಜೆಟ್ ಸಂಬಂಧಿತ ಚರ್ಚೆಗಳು ನಡೆಯಲಿವೆ.
ಕರ್ನಾಟಕ ಬಜೆಟ್ ಲೈವ್ ವಿಡಿಯೋ ಇಲ್ಲಿ ನೋಡಿ
ರಾಜಕೀಯವಾಗಿಯೂ ಈ ಬಜೆಟ್ ಬಹಳ ಮಹತ್ವ ಪಡೆದಿದೆ. ಒಂದೆಡೆ ಅಧಿಕಾರ ಹಂಚಿಕೆ ಜಿದ್ದಾಜಿದ್ದಿಯ ನಡುವೆ ಸಿದ್ದರಾಮಯ್ಯ ಬಜೆಟ್ ಸಿದ್ಧಪಡಿಸಿದ್ದು, ಐದು ಉಚಿತ ಗ್ಯಾರಂಟಿಗಳ ಜತೆಗೆ ಅಭಿವೃದ್ಧಿ ಯೋಜನೆಗಳನ್ನು ನೀಡಬೇಕಾದ ಸವಾಲೂ ಅವರ ಮುಂದಿದೆ. ರಾಜ್ಯದ ಆರ್ಥಿಕ ಹೊರೆ ಕಡಿಮೆ ಮಾಡುವ ನಿಟ್ಟಿನಲ್ಲಿ ಯೋಜನೆಗಳಲ್ಲಿ ಕೆಲವು ಬದಲಾವಣೆ ಮಾಡಲಿದ್ದಾರೆಯೇ ಎಂಬ ಕುತೂಹಲವೂ ಇದೆ.
ಶಿಕ್ಷಣ, ಕೃಷಿ, ಮೂಲಸೌಕರ್ಯ ಅಭಿವೃದ್ಧಿ, ಆರೋಗ್ಯ ಮತ್ತು ಸಾಮಾಜಿಕ ಕಲ್ಯಾಣ ಕ್ಷೇತ್ರಗಳಿಗೆ ಹೆಚ್ಚಿನ ಅನುದಾನ ನೀಡುವ ಸಾಧ್ಯತೆ ಇದೆ ಎಂದು ಮೂಲಗಳು ಈಗಾಗಲೇ ತಿಳಿಸಿದ್ದವು.
ಕರ್ನಾಟಕದಲ್ಲಿ ಈವರೆಗೆ 1956 ರ ನಂತರ ಚುನಾವಣಾ ವರ್ಷಗಳ ಮಧ್ಯಂತರ ಆಯವ್ಯಯಗಳನ್ನು ಹೊರತುಪಡಿಸಿ 70ಕ್ಕೂ ಹೆಚ್ಚು ಬಜೆಟ್‌ಗಳು ಮಂಡನೆಯಾಗಿವೆ. 2025–26ನೇ ಹಣಕಾಸು ವರ್ಷದಲ್ಲಿ ಬಜೆಟ್ ಗಾತ್ರ ಮೊದಲ ಬಾರಿಗೆ 4 ಲಕ್ಷ ಕೋಟಿ ರೂ. ಗಡಿ ದಾಟಿತ್ತು ಎಂಬುದು ಗಮನಾರ್ಹ.
ಇದನ್ನೂ ಓದಿ: ಸಿದ್ದರಾಮಯ್ಯ ದಾಖಲೆಯ ಬಜೆಟ್: ನೀವು ತಿಳಿಯಲೇಬೇಕಾದ ಮಾಹಿತಿ ಇಲ್ಲಿದೆ
ಒಟ್ಟಿನಲ್ಲಿ, ಸಿದ್ದರಾಮಯ್ಯ ಮಂಡಿಸುತ್ತಿರುವ ಈ ದಾಖಲೆಯ ಬಜೆಟ್ ಕರ್ನಾಟಕದ ಆರ್ಥಿಕ ಸ್ಥಿತಿ, ಅಭಿವೃದ್ಧಿ ಯೋಜನೆಗಳು ಹಾಗೂ ಜನಪರ ಕಾರ್ಯಕ್ರಮಗಳ ದಿಕ್ಕನ್ನು ನಿರ್ಧರಿಸುವ ಮಹತ್ವದ ಆಯವ್ಯಯವಾಗಲಿದೆ ಎಂದು ನಿರೀಕ್ಷಿಸಲಾಗಿದೆ.