ಪೊಲೀಸರ ಜತೆ ಯುವಕರ ವಾಗ್ವಾದImage Credit source: tv9
ಬಾಗಲಕೋಟೆ, ಫೆಬ್ರವರಿ 21: ಬಾಗಲಕೋಟೆಯಲ್ಲಿ (Bagalkot) ಫೆಬ್ರವರಿ 19ರ ರಾತ್ರಿ 10ಗಂಟೆ ವೇಳೆ ಶಿವಾಜಿ ಮೆರವಣಿಗೆ ಮೇಲೆ ನಡೆದ ಕಲ್ಲು ಹಾಗೂ ಚಪ್ಪಲಿ ತೂರಾಟದ ಬಳಿಕ ಉಂಟಾಗಿದ್ದ ಬಿಗುವಿನ ವಾತಾವರಣ ಮುಂದುವರಿದಿದೆ. ಘಟನೆ ಖಂಡಿಸಿ ಹಿಂದು ಸಂಘಟನೆಗಳ ಕಾರ್ಯಕರ್ತರು ಶುಕ್ರವಾರ ಬೀದಿಗಿಳಿದಿದ್ದಾರೆ. ಶುಕ್ರವಾರ ಆಗಿದ್ದರಿಂದ ಪಂಕಾ ಮಸೀದಿ ಹಾಗೂ ಕೊತ್ತಲೇಶ್ವರ ದೇವಸ್ಥಾನದ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಗುರುವಾರ ರಾತ್ರಿ ಕಲ್ಲು ತೂರಾಟ ಸಂಬಂಧ 8 ಆರೋಪಿಗಳನ್ನು ಪೊಲೀಸರು ಬಂಧಿಸಿ, ವಿಜಯಪುರ ಜೈಲಿಗೆ ಅಟ್ಟಿದ್ದಾರೆ.
ಇತ್ತ ನಿಷೇದಾಜ್ಞೆ ಉಲ್ಲಂಘಿಸಿ ಶಿವಭವಾನಿ ದೇವಸ್ಥಾನದಲ್ಲಿ ಹಿಂದು ಮುಖಂಡರು ಸಭೆ ನಡೆಸಿದ್ದಾರೆ. ಮತ್ತೊಂದೆಡೆ ಹಿಂದೂ ಸಂಘಟನೆ ಯುವ ಕಾರ್ಯಕರ್ತರು ಅಂಗಡಿಗಳನ್ನು ಬಂದ್ ಮಾಡಿಸಲು ಮುಂದಾಗಿದ್ದಾರೆ. ಈ ವೇಳೆ ತಡೆದ ಪೊಲೀಸರ ಜೊತೆಗೆ ವಾಗ್ವಾದ ನಡೆಸಿದ್ದಾರೆ. ಪೊಲೀಸರ ಸಮ್ಮುಖದಲ್ಲೇ ತರಕಾರಿ ಮಾರುಕಟ್ಟೆ ಪಕ್ಕದ ಮಾಂಸದ ಅಂಗಡಿಗಳ ಮೇಲೆ ಕಲ್ಲು ತೂರಾಟ ನಡೆದಿದೆ. ತಕ್ಷಣವೇ ಪೊಲೀಸರು ಲಾಠಿ ಬೀಸಿ ಗುಂಪನ್ನು ಚದುರಿಸಿದ್ದಾರೆ.
ಈ ನಡುವೆ ಡಿಸಿ ಕಚೇರಿಯಲ್ಲಿ ಎರಡು ಗುಂಪಿನ ಮುಖಂಡರನ್ನು ಶಾಂತಿ ಸಭೆಗೆ ಕರೆಯಲಾಗಿತ್ತು. ಸಭೆಗೆ ಹಿಂದು ಮುಖಂಡರು ಆಗಮಿಸಿದರು. ಆದರೆ ಸಭೆಗೆಂದು ಡಿಸಿ ಕಚೇರಿಗೆ ಬಂದ ಮುಸ್ಲಿಂ ಮುಖಂಡರು ಸಭೆಯಿಂದ ಹೊರಗುಳಿದಿದ್ದರು. ಇದರಿಂದ ರೊಚ್ಚಿಗೆದ್ದ ಹಿಂದು ಸಂಘಟನೆ ನಾಯಕರು ಶಾಂತಿ ಸಭೆ ಬಹಿಷ್ಕರಿಸಿದ್ದಾರೆ.
ಶಾಂತಿ ಸಭೆ ಬಹಿಷ್ಕರಿಸಿ ಹೊರಬಂದ ಹಿಂದೂ ಮುಖಂಡರು ಎಲ್ಲಾ ಆರೋಪಿಗಳನ್ನು ಬಂಧಿಸಲು ಪೊಲೀಸರಿಗೆ ಗಡುವು ನೀಡಿದ್ದಾರೆ. ಫೆಬ್ರುವರಿ 22 ರಂದು ಸರ್ವ ಸಮಾಜದ ಸಭೆ ಕರೆಯುತ್ತೇವೆ. ಸಭೆಯಲ್ಲಿ ಮುಂದಿನ ಹೋರಾಟದ ಬಗ್ಗೆ ನಿರ್ಣಯ ಕೈಗೊಳ್ಳುತ್ತೇವೆ ಎಂದು ಹೇಳಿದರು.
ರಾತ್ರಿಯಾಗುತ್ತಿದ್ದಂತೆಯೇ ಕೊತ್ತಲೇಶ್ವರ ದೇವಸ್ಥಾನದ ಬಳಿ ಹಾಕಲಾಗಿರುವ ಬ್ಯಾರಿಕೇಡ್ ತೆರವುಗೊಳಿಸುವಂತೆ ಹಿಂದೂ ಕಾರ್ಯಕರ್ತರು ಆಗ್ರಹಿಸಿದ್ದಾರೆ. ‘ನಾವು ಗಣಪತಿ ದೇವಸ್ಥಾನಕ್ಕೆ ಹೇಗೆ ಹೋಗಬೇಕು? ಮಸೀದಿಯಲ್ಲಿ ಪ್ರಾರ್ಥನೆ ಮಾಡಲು ಅವಕಾಶ ಕೊಟ್ಟಿದ್ದೀರಿ. ನಮಗ್ಯಾಕೆ ತಡೆ?’ ಎಂದು ಬ್ಯಾರಿಕೇಡ್ ಒದ್ದು ತಳ್ಳಿ ಹೋಗಲು ಪ್ರಯತ್ನಿಸಿದ್ದಾರೆ. ಆಗ ತಡೆದ ಪೊಲೀಸರ ಜೊತೆಗೆ ವಾಗ್ವಾದ ನಡೆಸಿದ್ದಾರೆ.
ಇದನ್ನೂ ಓದಿ: ಶಿವಾಜಿ ಜಯಂತಿಯಲ್ಲಿ ಕಲ್ಲು ತೂರಾಟ: ಶಾಂತಿ ಸಭೆಗೆ ಬಾರದ ಮುಸ್ಲಿಂ ಮುಖಂಡರು
ಈ ಮಧ್ಯೆ ಹೆಚ್ಚಿನ ಭದ್ರತೆಗೆ ಗದಗ ಎಸ್ಪಿ ,ವಿಜಯಪುರ ಎಎಸ್ಪಿ, ಬೆಳಗಾವಿ ಪೊಲೀಸ್ ಅಧಿಕಾರಿಗಳು ಹಾಗೂ ಸಾವಿರಾರು ಸಂಖ್ಯೆಯ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.