Headlines

ಕಾಂಗ್ರೆಸ್ನಲ್ಲಿ ಮತ್ತೊಂದು ಬೆಳವಣಿಗೆ: ಸಮುದಾಯದ ನಾಯಕರ ನಡುವೆ ಅಸಮಾಧಾನ ಸ್ಫೋಟ – Kannada News | Internal reservation Row: Sparks Outrage between Karnataka Congress Dalit Leaders

ಬೆಂಗಳೂರು, (ಮಾರ್ಚ್ 04): ಕರ್ನಾಟಕ ಕಾಂಗ್ರೆಸ್​​ನಲ್ಲಿ (Karnataka Congress) ಅಧಿಕಾರ ಹಂಚಿಕೆ ಬಿಕ್ಕಟ್ಟಿನ ಮಧ್ಯೆ ಇದೀಗ ಮತ್ತೊಂದು ಬೆಳವಣಿಗೆ ನಡೆದಿದ್ದು, ಪರಿಶಿಷ್ಟ ಜಾತಿಯ ಕಾಂಗ್ರೆಸ್ ನಾಯಕರ ನಡುವೆ ಅಸಮಾಧಾನ ಭುಗಿಲೆದ್ದಿದೆ. ಹೌದು.. 56 ಸಾವಿರ ಹುದ್ದೆಗಳ ನೇಮಕಾ ನೇಮಕಾತಿಗೆ (recruitments) ಒಳ ಮೀಸಲಾತಿ (internal reservation) ಅನ್ವಯಿಸದೆ ನೇಮಕಾತಿ ಮಾಡಲು ಸರ್ಕಾರ ನಿರ್ಧರಿಸಿರುವುದು ಇದೀಗ ಎಡಗೈ ಮತ್ತು ಬಲಗೈ ಸಮುದಾಯಗಳ ನಡುವೆ ಜಟಾಪಟಿಗೆ ಕಾರಣವಾಗಿದೆ. ಕೈಗೆ ಬಂದ ತುತ್ತು ಬಾಯಿಗೆ ಬಂದಿಲ್ಲ ಎಂಬಂತೆ ಆತಂಕಕ್ಕೆ ಒಳಗಾಗಿರುವ ಪರಿಶಿಷ್ಟ ಜಾತಿಯ ಎಡಗೈ ಸಮುದಾಯದ ನಾಯಕರು ತೀವ್ರ ಅಸಮಾಧಾನಗೊಂಡಿದ್ದಾರೆ.

ಅಷ್ಟಕ್ಕೂ ಆಗಿದ್ದೇನು?

ನಾಗಮೋಹನ ದಾಸ್ ಶಿಫಾರಸಿ ಮೇರೆಗೆ ಪರಿಶಿಷ್ಟ ಜಾತಿಯ ಸಮುದಾಯಕ್ಕೆ 17% ಮೀಸಲಾತಿ ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಿತ್ತು. ಆದರೆ ಇದರಿಂದ ಒಟ್ಟು ಮೀಸಲಾತಿಯ ಪ್ರಮಾಣ 56 ಪರ್ಸೆಂಟ್ ಗೆ ಏರಿಕೆಯಾಗುತ್ತದೆ ಎಂಬ ಕಾರಣಕ್ಕೆ ಸುಪ್ರೀಂ ಕೋರ್ಟ್ ಇದಕ್ಕೆ ತಡೆ ನೀಡಿತು. ಹೀಗಾಗಿ ಧಾರವಾಡದಲ್ಲಿ ನಡೆದ ನೇಮಕಾತಿ ಆಗ್ರಹದ ಹೋರಾಟಕ್ಕೆ ಮಣಿದ ರಾಜ್ಯ ಸರ್ಕಾರ 50% ಮೀಸಲಾತಿಯನ್ನು ಆಧರಿಸಿ 56 ಸಾವಿರ ಹುದ್ದೆಗಳ ನೇಮಕ ಮಾಡಿಕೊಳ್ಳಲು ಕ್ಯಾಬಿನೆಟ್ ನಲ್ಲಿ ತೀರ್ಮಾನಿಸಿತ್ತು. ಆದರೆ ಈ ಹುದ್ದೆಗಳ ನೇಮಕದ ವೇಳೆ ಪರಿಶಿಷ್ಟ ಜಾತಿ ವರ್ಗಕ್ಕೆ ಈ ಹಿಂದೆ ಮೀಸಲಾಗಿದ್ದ 15 ಪರ್ಸೆಂಟ್ ಮೀಸಲಾತಿಯನ್ನು ಒಳ ಮೀಸಲಾತಿ ಆಧರಿಸಿ ಮಾಡುವ ಬದಲು ನೇರ ನೇಮಕಾತಿ ಮಾಡಲು ಸರ್ಕಾರ ತೀರ್ಮಾನಿಸಿತ್ತು. ಇದರಿಂದ ದಲಿತ ಎಡಗೈ ಸಮುದಾಯದ ನಾಯಕರು ಅಸಮಾಧಾನಗೊಂಡಿದ್ದು, 15% ಮೀಸಲಾತಿಯ ಒಳಗೂ ಒಳಮೀಸಲಾತಿಯನ್ನು ಕೊಡಬೇಕು. ಒಳ ಮೀಸಲಾತಿಯನ್ನು ಅನ್ವಯಿಸಿಯೇ ನೇಮಕಾತಿಯನ್ನು ಮಾಡಬೇಕು ಒಳ ಮೀಸಲಾತಿಯನ್ನು 17% ಮೀಸಲಾತಿಗೆ ಕೊಡುವ ಮಾದರಿಯಲ್ಲಿಯೇ 15 ಪರ್ಸೆಂಟ್ ಹಂಚಿಕೆ ಮಾಡಬೇಕು ಎಂದು ಪಟ್ಟು ಹಿಡಿದಿದ್ದಾರೆ.

ಇದನ್ನೂ ಓದಿ: ಸರ್ಕಾರವನ್ನ ಬಡಿದೆಬ್ಬಿಸಿದ ಉದ್ಯೋಗಾಕಾಂಕ್ಷಿಗಳು: 56 ಸಾವಿರ ಹುದ್ದೆ ನೇಮಕಕ್ಕೆ ಸಂಪುಟ ಒಪ್ಪಿಗೆ

15 ಪರ್ಸೆಂಟ್ ಪರಿಶಿಷ್ಟ ಸಮುದಾಯದ ಮೀಸಲಾತಿ ಒಳಗೆ ಒಳಮಿಸಲಾತಿಯನ್ನು ಜಾರಿ ಮಾಡದೆ ಇರುವುದು ರಾಜಕೀಯವಾಗಿ ದೊಡ್ಡ ಸಂಕಷ್ಟವನ್ನು ಕಾಂಗ್ರೆಸ್ಗೆ ತಂದಿಟ್ಟಿದೆ. ಕಾಂಗ್ರೆಸ್ ನಲ್ಲಿ ಇರುವ ಬಲಗೈ ಸಮುದಾಯವನ್ನು ಪ್ರತಿನಿಧಿಸುವ ಸಚಿವರುಗಳ ಒತ್ತಡದಿಂದಲೇ ಒಳಮಿಸಲಾತಿ ಜಾರಿಗೆ ವಿಳಂಬವಾಗುತ್ತಿದೆ ಎಂದು ದಲಿತ ಎಡಗೈ ಸಮುದಾಯದ ನಾಯಕರು ತೀವ್ರ ಬೇಸರಗೊಂಡಿದ್ದಾರೆ. ಇದೇ ಕಾರಣಕ್ಕೆ ದಲಿತ ಬಲಗೈ ಮತ್ತು ದಲಿತ ಎಡಗೈ ಸಮುದಾಯದ ನಾಯಕರ ಪ್ರತ್ಯೇಕ ಸಭೆಗಳು ನಡೆದಿದೆ. ಎರಡು ಸಮುದಾಯದ ನಾಯಕರು ಎಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ತಮ್ಮ ತಮ್ಮ ಆಹವಾಲು ಸಲ್ಲಿಸಿದ್ದು, ದಲಿತ ಎಡಗೈ ಸಮುದಾಯಕ್ಕೆ ನ್ಯಾಯ ಬದ್ಧವಾಗಿ ಸಿಗುವ ಒಳ ಮೀಸಲಾತಿಯನ್ನು 15% ಮೀಸಲಾತಿಯ ನೇಮಕಾತಿ ಸಂದರ್ಭದಲ್ಲಿ ನೀಡಲೇಬೇಕು ಎಂದು ಬಿಗಿಪಟ್ಟು ಹಿಡಿದಿದ್ದಾರೆ.

15 ಪರ್ಸೆಂಟ್ ಮೀಸಲಾತಿ ಹಂಚಿಕೆ ಸಂದರ್ಭದಲ್ಲಿ ಒಳ ಮೀಸಲಾತಿ ಹಂಚಿಕೆಗೆ ಸಮುದಾಯದ ನಾಯಕರಲ್ಲಿ ಇನ್ನು ಒಮ್ಮತದ ತೀರ್ಮಾನಕ್ಕೆ ಬರಲು ಸಾಧ್ಯವಾಗಿಲ್ಲ . ಸಚಿವ ಆರ್ ಬಿ ತಿಮ್ಮಾಪುರ್, ಕೆ ಎಚ್ ಮುನಿಯಪ್ಪ ಒಳ ಮೀಸಲಾತಿ ತಕ್ಷಣ ಜಾರಿ ಆಗಲೇಬೇಕು. 15 ಪರ್ಸೆಂಟ್ ಮೀಸಲಾತಿ ಹಂಚಿಕೆಯ ಸಂದರ್ಭದಲ್ಲಿ ಪಟ್ಟು ಹಿಡಿದು ಕೂತಿದ್ದಾರೆ. ಆದರೆ ದಲಿತ ಬಲಗೈ ಸಮುದಾಯದ ಸಚಿವರಿಗೆ ಒಳ ಮೀಸಲಾತಿ ಜಾರಿ ಸಂಬಂಧ ಯಾವ ನಿರ್ಣಯವನ್ನು ತೆಗೆದುಕೊಳ್ಳಬೇಕು ಎಂಬ ಬಗ್ಗೆ ಮುಕ್ತ ಅಭಿಪ್ರಾಯವನ್ನು ಹಂಚಿಕೊಂಡಿಲ್ಲ. ಇದು ಸಮುದಾಯದ ನಾಯಕರಲ್ಲಿ ಒಡಕು ಮೂಡಿಸಿದ್ದು ವಿರೋಧ ಪಕ್ಷಗಳಿಗೂ ಆಹಾರವಾದಂತಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಾಳೆ ಅಂದರೆ ಗುರುವಾರ ಸಂಜೆ ಸಚಿವ ಸಂಪುಟ ಸಭೆ ಕರೆಯಲಾಗಿದ್ದು, ಸಚಿವ ಸಂಪುಟ ಸಭೆಯಲ್ಲಿ ಒಳಮಿಸಲಾತಿ ಜಾರಿಗೆ ಆದೇಶ ಮಾಡಲೇಬೇಕು ಎಂದು  ಬಿಜೆಪಿ ಸಂಸದ ಗೋವಿಂದ ಕಾರಜೋಳ  ಆಗ್ರಹಿಸಿದ್ದಾರೆ. ಈ ಹಿನ್ನೆಲೆಯಲ್ಲಿ ದಲಿತ ಬಲಗೈ ಮತ್ತು ದಲಿತ ಎಡಗೈ ಸಮುದಾಯದ ನಾಯಕರ ಪ್ರತ್ಯೇಕ ಸಭೆಗಳು ತುರ್ತಾಗಿ ನಡೆದಿದೆ.  ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ದಲಿತ ಸಚಿವರಿಗೆ ಸಲಹೆ ನೀಡಿದ್ದು , ಒಂದು ಒಮ್ಮತದ ಅಭಿಪ್ರಾಯಕ್ಕೆ ಬರುವಂತೆ ಸೂಚಿಸಿದ್ದಾರೆ.

ಕಳೆದ ಕ್ಯಾಬಿನೆಟ್ ನಲ್ಲಿ ತೀರ್ಮಾನವಾದ ಪ್ರಕಾರ 50% ಮೀಸಲಾತಿಯನ್ನು ಆಧರಿಸಿ ನೇಮಕಾತಿಗೆ ಮಾರ್ಗಸೂಚಿ ಹೊರಡಿಸಲಾಗಿತ್ತು. ಆದರೆ ಅದರಲ್ಲಿ ಒಳ ಮೀಸಲಾತಿಯನ್ನು ಅನ್ವಯಿಸಿರಲಿಲ್ಲ. ಇದೀಗ ನಾಳೆ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಒಳಮಿಸಲಾತಿ ಜಾರಿ ಸಂಬಂಧ ಸರ್ಕಾರ ಯಾವ ತೀರ್ಮಾನಕ್ಕೆ ಬರುತ್ತೆ ಎಂಬುದು ಬಹಳ ಕುತೂಹಲ ಮೂಡಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 9:57 pm, Wed, 4 March 26

Source link

Leave a Reply

Your email address will not be published. Required fields are marked *