ಕೊಲೆಯಾದ ಯೋಗೀಶ್ ಗೌಡ ಕುಟುಂಬದಲ್ಲಿ ಆಸ್ತಿ ಕಲಹ: ಸಹೋದರಿಯರ ಮೇಲೆ ರಾಡ್, ವೈರ್‌ನಿಂದ ಹಲ್ಲೆ ಆರೋಪ

ಕೊಲೆಯಾದ ಯೋಗೀಶ್ ಗೌಡ ಕುಟುಂಬದಲ್ಲಿ ಆಸ್ತಿ ಕಲಹ: ಸಹೋದರಿಯರ ಮೇಲೆ ರಾಡ್, ವೈರ್‌ನಿಂದ ಹಲ್ಲೆ ಆರೋಪ

ಧಾರವಾಡ, ಏ.11: ಸಾರ್ವಜನಿಕ ವಲಯದಲ್ಲಿ ಭಾರಿ ಕುತೂಹಲ ಮೂಡಿಸಿರುವ ಮಾಜಿ ಜಿ.ಪಂ. ಸದಸ್ಯ ಯೋಗೀಶ್ ಗೌಡ ಕೊಲೆ ಪ್ರಕರಣದ ತೀರ್ಪು ಹೊರಬೀಳುವ ಹಂತದಲ್ಲಿದೆ. ಆದರೆ, ಇತ್ತ ಯೋಗೀಶ್ ಗೌಡ ಅವರ ಕುಟುಂಬದಲ್ಲಿ ಆಸ್ತಿ ವಿಚಾರವಾಗಿ ದೊಡ್ಡ ಮಟ್ಟದ ಕಿತ್ತಾಟ ಶುರುವಾಗಿದ್ದು, ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಧಾರವಾಡ ತಾಲೂಕಿನ ಗೋವನಕೊಪ್ಪ ಗ್ರಾಮದ ತೋಟದ ಮನೆಯಲ್ಲಿ ಆಸ್ತಿ ಹಂಚಿಕೆ ವಿಚಾರವಾಗಿ ಯೋಗೀಶ್ ಗೌಡ ಅವರ ಸಹೋದರ ಗುರುನಾಥ ಗೌಡ ಮತ್ತು ಸಹೋದರಿಯರ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಗುರುನಾಥ ಗೌಡ ಮತ್ತು ಅವರ ಪತ್ನಿ ಜ್ಯೋತಿ ಗೌಡ ಅವರು ಕಬ್ಬಿಣದ ರಾಡ್ ಹಾಗೂ ವೈರ್‌ನಿಂದ ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಸಹೋದರಿಯರು ಆರೋಪಿಸಿದ್ದಾರೆ. ಸಹೋದರಿಯರಾದ ಜಗದೀಶ್ವರಿ ಮತ್ತು ಅಕ್ಕಮಹಾದೇವಿ ಅವರು ಈ ಘಟನೆಯ ಬಗ್ಗೆ ಧಾರವಾಡ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಗುರುನಾಥ ಗೌಡ ಅವರು ಅವಾಚ್ಯ ಶಬ್ದಗಳಿಂದ ನಿಂದಿಸಿ, ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಕಿತ್ತಾಟದ ಆಡಿಯೋ ಸಂಭಾಷಣೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪ್ರಕರಣಕ್ಕೆ ಹೊಸ ತಿರುವು ನೀಡಿದೆ. ಗ್ರಾಮಾಂತರ ಪೊಲೀಸರು ಗುರುನಾಥ ಗೌಡ ಹಾಗೂ ಅವರ ಪತ್ನಿ ಜ್ಯೋತಿ ಗೌಡ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಯೋಗೀಶ್ ಗೌಡ ಕೊಲೆ ಪ್ರಕರಣದ ಅಂತಿಮ ಹಂತದಲ್ಲಿ ಕುಟುಂಬದ ಈ ಆಂತರಿಕ ಕಲಹ ಸಾರ್ವಜನಿಕವಾಗಿ ಚರ್ಚೆಗೆ ಗ್ರಾಸವಾಗಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *