ಕೊಲೆಯಾದ SSLC ವಿದ್ಯಾರ್ಥಿ ಸಂಕೇತ್ ಸಮಾಧಿ ಧ್ವಂಸಗೊಳಿಸಿದ ಕಿಡಿಗೇಡಿಗಳು: ಪೋಷಕರಿಗೆ ಮತ್ತೆ ಆಘಾತ

ಕೊಲೆಯಾದ SSLC ವಿದ್ಯಾರ್ಥಿ ಸಂಕೇತ್ ಸಮಾಧಿ ಧ್ವಂಸಗೊಳಿಸಿದ ಕಿಡಿಗೇಡಿಗಳು: ಪೋಷಕರಿಗೆ ಮತ್ತೆ ಆಘಾತ

ಶಿವಮೊಗ್ಗ, ಏಪ್ರಿಲ್​ 01: ಆ ಬಾಲಕ ಸಾವನ್ನಪ್ಪಿದರೂ ಆತನ ಸಮಾಧಿಯನ್ನ ಮಾತ್ರ ಕಿಡಿಗೇಡಿಗಳು ಬಿಡುತ್ತಿಲ್ಲ. ಕಳೆದ ಫೆಬ್ರವರಿಯಲ್ಲಿ ಜಗಳ ಬಿಡಸಲು ಹೋದ ಅಮಾಯಕ ಬಾಲಕ ಸಂಕೇತ್​ನನ್ನ (Sanketh Murder Case) ಕಿಡಿಗೇಡಿ ಯುವಕರು ಹತ್ಯೆ ಮಾಡಿದ್ದರು. ಇದೀಗ ಆತನ ಸಮಾಧಿ ಸಿದ್ಧಪಡಿಸಿ ಎರಡು ದಿನ ಕಳೆದಿಲ್ಲ, ಅಷ್ಟರಲ್ಲೇ  ಸಮಾಧಿಯನ್ನೇ ಕೆಡವಲಾಗಿದೆ. ಯಾರೋ ದುಷ್ಕರ್ಮಿಗಳು ಸಮಾಧಿಯನ್ನು ಕೆಡವಿದ್ದಾರೆ. ಇದೀಗ ಮತ್ತೊಮ್ಮೆ ಸಮಾಧಿ ನಿರ್ಮಾಣ ಮಾಡಲಾಗಿದೆ.

ನಡೆದಿದ್ದೇನು? 

ಶಿವಮೊಗ್ಗ ಸೂಳೆಬೈಲು ಬಡಾವಣೆ ನಿವಾಸಿ ಎಸ್​ಎಸ್​ಎಲ್​ಸಿ ವಿದ್ಯಾರ್ಥಿ ಸಂಕೇತ್ ಕೊಲೆ ಕೇಸಿನಲ್ಲಿ ಈಗಾಗಲೇ ಅಪ್ರಾಪ್ತರು ಬಂಧಿಯಾಗಿ ಜೈಲು ಸೇರಿದ್ದು, ಸಂಕೇತ್ ಪೋಷಕರು ಇನ್ನು ಆ ದುಖಃದಿಂದ ಹೊರಬಂದಿಲ್ಲ. ಅಷ್ಟರಲ್ಲೇ ಮತ್ತೊಂದು ಅವಘಡ ನಡೆದಿದೆ. ಅದೇನೆಂದರೆ ಮೃತ ಸಂಕೇತ್​​ ಸಮಾಧಿಯನ್ನು ಕಿಡಿಗೇಡಿಗಳು ಧ್ವಂಸ ಮಾಡಿದ್ದಾರೆ.

ಇದನ್ನೂ ಓದಿ: ಶಿವಮೊಗ್ಗದಲ್ಲಿ SSLC ವಿದ್ಯಾರ್ಥಿ ಹತ್ಯೆ: ಕೊಲೆಗೆ ಸ್ಫೋಟಕ ಕಾರಣ ಬಿಚ್ಚಿಟ್ಟ ಎಸ್ಪಿ

ಶಿವಮೊಗ್ಗದ ಊರುಗಡೂರಿನ ಸೂಳೆಬೈಲಿನ ಸರ್ಕಾರಿ ಶಾಲೆ ಮುಂಭಾಗವೇ, ಗಲಾಟೆ ಬಿಡಿಸಲು ಹೋಗಿ ಕೊಲೆಯಾಗಿದ್ದ ಶಾಲಾ ಬಾಲಕ ಸಂಕೇತ್‌ನ ಸಮಾಧಿಗೆ ಹಾನಿ ಮಾಡಲಾಗಿದೆ. ಫೆ. 23 ರಂದು ವಿದ್ಯಾರ್ಥಿ ಸಂಕೇತ್‌ ಹತ್ಯೆಯಾಗಿತ್ತು. ಬಳಿಕ ಸಮೀಪದ ಗುಡ್ಡೆಮರಡಿಯ ಹಿಂದೂ ರುದ್ರಭೂಮಿಯಲ್ಲಿ ಸಂಕೇತ್‌ನ ಅಂತ್ಯಕ್ರಿಯೆ ನೆರವೇರಿಸಲಾಗಿತ್ತು. ಕಳೆದೆರೆಡು ದಿನಗಳ ಹಿಂದೆಯಷ್ಟೇ, ಆತನ ಸಮಾಧಿಗೆ ಕಟ್ಟೆ ನಿರ್ಮಿಸಿ ಫೋಟೋ ಸಹ ಅಳವಡಿಸಲಾಗಿತ್ತು. ಮಂಗಳವಾರ ಸಂಜೆ ಸಮಾಧಿಯ ಒಂದು ಭಾಗ ಒಡೆದಿರುವುದು ಗೊತ್ತಾಗಿದೆ. ಇದರಿಂದ ಬೇಸರ ಮತ್ತು ಆಕ್ರೋಶಗೊಂಡ ಸಂಕೇತ್‌ನ ಪೋಷಕರು ತುಂಗಾ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.

ಕಿಡಿಗೇಡಿಗಳ ವರ್ತನೆಗೆ ಶಾಸಕ ಚನ್ನಬಸಪ್ಪ ಆಕ್ರೋಶ

ಇನ್ನು ಮಾ. 26 ರಂದಷ್ಟೇ ನಿರ್ಮಿಸಲಾಗಿರುವ ಮೃತ ಸಂಕೇತ್ ಸಮಾಧಿಯನ್ನು ಕಲ್ಲಿನಿಂದ ಜಜ್ಜಿದ್ದಾರೆ. ಹಿಂದೆ ಹಾಕಿದ್ದ ಗ್ರಾನೈಟ್ ಒಡೆದು ಹಾಕಿದ್ದಾರೆ. ಪ್ರತಿದಿನ ಸಂಜೆ ಸಮಾಧಿ ಸ್ಥಳಕ್ಕೆ ಹೋಗಿ ಪೋಷಕರು ಪೂಜೆ ಮಾಡಿ ಬರುತ್ತಿದ್ದರು. ಮೊದಲೇ ಸಂಕೇತ್‌ನ ಸಾವಿನ ಬಳಿಕ ಅವರ ಮನೆಯಲ್ಲಿ ನೆಮ್ಮದಿ ಇಲ್ಲವಾಗಿದೆ. ಈಗ ಇಂತಹ ಘಟನೆ ನಡೆದಿರುವುದು ಸಂಕೇತ್ ಪೋಷಕರಿಗೆ ಮತ್ತಷ್ಟು ಆಘಾತ ತಂದಿದೆ. ಈ ವಿಚಾರದ ಬಗ್ಗೆ ಶಾಸಕ ಚನ್ನಬಸಪ್ಪ ಆಕ್ರೋಶ ಹೊರಹಾಕಿದ್ದು, ಕಿಡಿಗೇಡಿಗಳ ವರ್ತನೆ ವಿರುದ್ಧ ಕಿಡಿಕಾರಿದ್ದಾರೆ.

ಇದನ್ನೂ ಓದಿ: ಶಿವಮೊಗ್ಗ ಎಸ್​ಎಸ್​ಎಲ್​ಸಿ ವಿದ್ಯಾರ್ಥಿ ಕೊಲೆ ಪ್ರಕರಣ: 15 ಲಕ್ಷ ರೂ. ಪರಿಹಾರ ಘೋಷಿಸಿದ ಸರ್ಕಾರ

ತಮ್ಮಿಂದ ಬಹುಬೇಗನೇ ಅಗಲಿರುವ ಪ್ರೀತಿಯ ಪುತ್ರನನ್ನು ನೆನೆದು, ಕಟ್ಟೆ ಕಟ್ಟಿಸಿದ್ದ ಪೋಷಕರು, ಮುಂಭಾಗದಲ್ಲಿ ದೀಪ ಇಡಲು ವ್ಯವಸ್ಥೆ ಮಾಡಿದ್ದರು. ಆದರೆ ಕಿರಾತಕರು, ಸಮಾಧಿಯಲ್ಲೂ ಸಂಕೇತ್​ಗೆ ನೆಮ್ಮದಿಯಾಗಿರಲು ಬಿಡದೇ ಸತಾಯಿಸಿಸುತ್ತಿರುವುದು ಬೇಸರದ ಸಂಗತಿಯೇ ಸರಿ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

Leave a Reply

Your email address will not be published. Required fields are marked *