Headlines

ಕ್ರಿಶ್ಚಿಯನ್ ಧರ್ಮಕ್ಕೆ ಸೇರಿದ ಹಿಂದೂ ಪತ್ನಿ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ ಪತಿ: ಭದ್ರಾವತಿಯಲ್ಲೊಂದು ವಿಚಿತ್ರ ಕೇಸ್ – Kannada News | A Husband complaint against wife Who forced conversion To Christian from Hindu at Shivamogga

ಶಿವಮೊಗ್ಗ, (ಫೆಬ್ರವರಿ 08): ಮಹಿಳೆಯೊಬ್ಬರು ಹಿಂದೂ ಧರ್ಮವನ್ನು ತೊರೆದು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದು, ಬಳಿಕ ಪತಿ ಹಾಗೂ ಮಕ್ಕಳನ್ನೂ ಸಹ ಮತಾಂತರಗೊಳ್ಳುವಂತೆ ಮಾನಸಿಕ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದೆ. ಈ ಸಂಬಂಧ ಭದ್ರಾವತಿಯ ಬೊಮ್ಮನಕಟ್ಟೆ ನಿವಾಸಿಯಾದ ಬಿ. ವಿನಯ್ ಎಂಬುವವರು ತಮ್ಮ ಪತ್ನಿ ಪ್ರಿಯತಾ ಆರ್. ವಿರುದ್ಧ ಪೇಪರ್ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನನ್ನ ಪತ್ನಿ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದಾಳೆ. ಈಗ ನನ್ನನ್ನೂ ಹಾಗೂ ನನ್ನ ಇಬ್ಬರು ಅಪ್ರಾಪ್ತ ಹೆಣ್ಣು ಮಕ್ಕಳನ್ನೂ ಮತಾಂತರಗೊಳ್ಳುವಂತೆ ಒತ್ತಾಯಿಸಿ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾಳೆ ಎಂದು ಆರೋಪಿಸಿದ್ದಾರೆ.

ವಿನಯ್ ಅವರು 2011ರಲ್ಲಿ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಹಳೇಬೀಡು ಬನಶಂಕರಿ ಕಲ್ಯಾಣ ಮಂಟಪದಲ್ಲಿ ಪ್ರಿಯತಾ ಆರ್. ಅವರನ್ನು ಲಿಂಗಾಯತ ಕುಂಬಾರ ಸಂಪ್ರದಾಯದಂತೆ ಶಾಸ್ತ್ರೋಕ್ತವಾಗಿ ವಿವಾಹವಾಗಿದ್ದರು. ಈ ದಂಪತಿಗೆ  ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಆರಂಭದಲ್ಲಿ ಸುಖವಾಗಿದ್ದ ಇವರ ಸಂಸಾರದಲ್ಲಿ ಬಿರುಕು ಮೂಡಿದ್ದು 2015ರ ನಂತರ ಎಂದು ವಿನಯ್ ದೂರಿನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಜ್ಯೋತಿಷಿ ಕಮಲಾಕರ್‌‌ ಭಟ್‌‌, ಸುಚಿತ್ರಾಳ ಸ್ಫೋಟಕ ಆಡಿಯೋ ವೈರಲ್‌: ಅಸಲಿ ಮುಖ ಬಯಲು

ಕ್ರೈಸ್ತ ಧರ್ಮದ ಕಡೆಗೆ ಆಕರ್ಷಿತರಾಗಿದ್ಹೇಗೆ?

2015ರಲ್ಲಿ ಶಿವಮೊಗ್ಗದ ಪ್ರತಿಷ್ಠಿತ ಪೋದಾರ್ ಇಂಟರ್ನ್ಯಾಷನಲ್ ಶಾಲೆಯಲ್ಲಿ ಪ್ರಿಯತಾ ಶಿಕ್ಷಕಿಯಾಗಿ ಕೆಲಸಕ್ಕೆ ಸೇರಿದ್ದರು. ಅಲ್ಲಿ ಅದೇ ಶಾಲೆಯಲ್ಲಿದ್ದ ಮರಿಯಾ ಪ್ರಿಯದರ್ಶಿನಿ ಎಂಬ ಸಹೋದ್ಯೋಗಿಯ ಸಂಪರ್ಕ ಬೆಳೆದಿದೆ. ಮರಿಯಾ ಅವರ ಪ್ರಭಾವದಿಂದ ಪ್ರಿಯತಾ ಹಿಂದೂ ಧರ್ಮದ ಆಚರಣೆಗಳನ್ನು ಬಿಟ್ಟು ಕ್ರೈಸ್ತ ಧರ್ಮದ ಕಡೆಗೆ ಆಕರ್ಷಿತರಾಗಿದ್ದಾರೆ. ಕ್ರಮೇಣ ಅವರು ಸಂಪೂರ್ಣವಾಗಿ ಮತಾಂತರಗೊಂಡಿದ್ದಾರೆ ಎಂದು ಪತಿ ವಿನಯ್ ಆರೋಪಿಸಿದ್ದಾರೆ.

ಮತಾಂತರಗೊಂಡ ನಂತರ ಪ್ರಿಯತಾ ಅವರ ವರ್ತನೆಯಲ್ಲಿ ಭಾರೀ ಬದಲಾವಣೆ ಕಂಡುಬಂದಿದೆ. ಅವರು ನಿಯಮಿತವಾಗಿ ಚರ್ಚ್‌ಗೆ ಹೋಗಲಾರಂಭಿಸಿದರು. ಮನೆಯಲ್ಲಿಯೇ ಬೈಬಲ್ ತಂದು ಇಟ್ಟುಕೊಂಡು ಓದುವುದು, ಯೇಸುಕ್ರಿಸ್ತನನ್ನು ಪೂಜಿಸುವುದನ್ನು ರೂಢಿಸಿಕೊಂಡರು. ಪತಿ ಎಷ್ಟೇ ಬುದ್ಧಿವಾದ ಹೇಳಿದರೂ, ‘ನಾನು ಕ್ರೈಸ್ತ ಧರ್ಮ ಪಾಲಿಸುತ್ತಿದ್ದೇನೆ, ನೀವೂ ಅದನ್ನೇ ಪಾಲಿಸಿ’ ಎಂದು ಒತ್ತಾಯಿಸಿದ್ದಾರೆ.

ಕೇವಲ ಪತಿಯನ್ನು ಮಾತ್ರವಲ್ಲದೆ, ತಮ್ಮ ಹಿರಿಯ ಮಗಳಿಗೂ ಕ್ರೈಸ್ತ ಧರ್ಮವನ್ನೇ ಪಾಲಿಸುವಂತೆ ಪ್ರಿಯತಾ ಒತ್ತಾಯಿಸುತ್ತಿದ್ದರು ಎಂದು ವಿನಯ್ ದೂರಿದ್ದಾರೆ. ಕ್ರೈಸ್ತ ಧರ್ಮಕ್ಕೆ ಸೇರಿದ ವೆಬ್‌ಸೈಟ್‌ಗಳನ್ನು ಫಾಲೋ ಮಾಡುವುದು, ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಪ್ರಾರ್ಥನೆ ಸಲ್ಲಿಸುವುದು ಮತ್ತು ಪ್ರತಿ ತಿಂಗಳು ಧಾರ್ಮಿಕ ಚಟುವಟಿಕೆಗಳಿಗೆ ಹಣ ಪಾವತಿಸುವುದನ್ನು ಅಭ್ಯಾಸ ಮಾಡಿಕೊಂಡಿದ್ದರು.

ತವರು ಮನೆ ಸೇರಿದ ಪತ್ನಿ

ಮತಾಂತರದ ವಿಚಾರವಾಗಿ ಮನೆಯಲ್ಲಿ ನಿತ್ಯ ಜಗಳವಾಗುತ್ತಿತ್ತು. 2019ರಲ್ಲಿ ಒಮ್ಮೆ ತವರು ಮನೆಗೆ ಹೋಗಿದ್ದ ಪತ್ನಿಯನ್ನು, ಮಕ್ಕಳ ಭವಿಷ್ಯದ ದೃಷ್ಟಿಯಿಂದ ವಿನಯ್ ಅವರು 2020ರಲ್ಲಿ ಮನವೊಲಿಸಿ ಕರೆತಂದಿದ್ದರು. ಆದರೆ, 2024ರ ವೇಳೆಗೆ ಅವರ ವರ್ತನೆ ಮತ್ತಷ್ಟು ತೀವ್ರವಾಯಿತು. ‘ನನ್ನ ಮಾತನ್ನು ನೀವು ಕೇಳದಿದ್ದರೆ ನಾನು ಮನೆಯಲ್ಲಿ ಇರುವುದಿಲ್ಲ’ ಎಂದು ಹಠ ಹಿಡಿದ ಪ್ರಿಯತಾ, ಪತಿ ಮತ್ತು ಮಕ್ಕಳು ಮತಾಂತರಗೊಳ್ಳಲು ಒಪ್ಪದ ಕಾರಣ 2025ರಲ್ಲಿ ಗಂಡ-ಮಕ್ಕಳನ್ನು ಬಿಟ್ಟು ತವರು ಮನೆಗೆ ತೆರಳಿದ್ದಾರೆ. ಸ್ನೇಹಿತರ ಮೂಲಕ ಸಂಧಾನಕ್ಕೆ ಪ್ರಯತ್ನಿಸಿದಾಗ, ‘ನೀವು ಮತ್ತು ಮಕ್ಕಳು ಮತಾಂತರಗೊಂಡರೆ ಮಾತ್ರ ನಾನು ವಾಪಸ್ ಬರುತ್ತೇನೆ’ ಎಂದು ಕಡಾಖಂಡಿತವಾಗಿ ಹೇಳಿದ್ದಾರೆ ಎಂದು ವಿನಯ್ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಕರ್ನಾಟದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *