
ಬೆಂಗಳೂರು, ಏಪ್ರಿಲ್ 13: ನಗರದಲ್ಲಿ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ನಡೆದ ಹಲ್ಲೆ ಪ್ರಕರಣವು ಇದೀಗ ಕೊಲೆ (Murder) ಪ್ರಕರಣವಾಗಿ ಮಾರ್ಪಟ್ಟಿದೆ. ಮಣಿಕಿರಣ್ ಎಂಬಾತ ತನ್ನ ಹೆಂಡತಿಯನ್ನು ಬಲವಂತವಾಗಿ ತವರು ಮನೆಯಿಂದ ಕರೆದುಕೊಂಡು ಹೋಗಲು ಮುಂದಾದಾಗ ಮಧ್ಯ ಬಂದ ಮಾಗೇಶ್ವರಿ ಎಂಬಾಕೆಯ ಮೇಲೆ ಹಲ್ಲೆ ನಡೆಸಲಾಗಿತ್ತು. ಈ ಹಿನ್ನೆಲೆ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಆಕೆ, ಭಾನುವಾರ ಬೆಳಗಿನ ಜಾವ ಕೊನೆಯುಸಿರೆಳೆದಿದ್ದಾರೆ.
ಹೆಂಡತಿ ಬರಲ್ಲ ಅಂದರೂ ಬಲವಂತವಾಗಿ ಕರೆದೊಯ್ಯಲು ಮುಂದಾದ ಪತಿ
ಮಣಿಕಿರಣ್ ಹಾಗೂ ಆತನ ಹೆಂಡತಿ ಚಾರುಲತಾಳ ನಡುವೆ ಜಗಳವಾದ ಕಾರಣ ಆಕೆ ಆಡುಗೋಡಿಯಲ್ಲಿರುವ ತವರು ಮನೆಗೆ ಬಂದಿದ್ದಳು. ಅಲ್ಲಿ ತನ್ನ ಅಜ್ಜಿ ಮತ್ತು ಚಿಕ್ಕಮ್ಮ ಮಾಗೇಶ್ವರಿ ಜೊತೆಗೆ ವಾಸವಾಗಿದ್ದಳು. ಆಕೆಯ ಮನವೊಲಿಸಿ ತನ್ನ ಮನೆಗೆ ಕರೆದುಕೊಂಡು ಹೋಗಲು ಮಣಿಕಿರಣ್ ಸಾಕಷ್ಟು ಬಾರಿ ಪ್ರಯತ್ನಪಟ್ಟಿದ್ದ. ಆದರೆ ಆಕೆ ಒಪ್ಪಿರಲಿಲ್ಲ. ಹಾಗಾಗಿ ಮಣಿ ತನ್ನ ತಂದೆ ಮಣಿವಣ್ಣನ್ ಹಾಗೂ ಸಹಚರರಾದ ಮಣಿರಾಜ್ ಅಲಿಯಾಸ್ ಸ್ಟೀಫನ್ ಮತ್ತು ಅಭಿಷೇಕ್ ಎಲ್ಲರನ್ನೂ ಕರೆದುಕೊಂಡು ಮತ್ತೊಮ್ಮೆ ಚಾರುಲತಾ ತವರಿಗೆ ಬಂದಿದ್ದ. ಈ ವೇಳೆ ಆಕೆಯನ್ನು ಬಲವಂತವಾಗಿ ಕರೆದುಕೊಂಡು ಹೋಗಲು ಪ್ರಯತ್ನಿಸಿದ್ದ. ಆಗ ಮಧ್ಯ ಪ್ರವೇಶಿಸಿದ ಮಾಗೇಶ್ವರಿ ಮೇಲೆ ಕಬ್ಬಿಣದ ರಾಡ್ನಿಂದ ಹಲ್ಲೆ ಮಾಡಿ, ನಂತರ ಕಾಲಿಗೆ ಚೂರಿಯಿಂದ ಹಲವು ಬಾರಿ ಇರಿದಿದ್ದ ಎಂದು ಹೇಳಲಾಗಿದೆ.
ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆ ಸಾವು
ಈ ವೇಳೆ ಮಾಗೇಶ್ವರಿ ತೀವ್ರವಾಗಿ ಗಾಯಗೊಂಡಿದ್ದು, ಮೊದಲಿಗೆ ಆಕೆಯನ್ನು ಸೇಂಟ್ ಜಾನ್ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿನ ವೈದ್ಯರು ಮೊದಲಿಗೆ ಆಕೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಹೇಳಿದರೂ ಆರ್ಥಿಕ ಸಂಕಷ್ಟದಿಂದ ಕುಟುಂಬಸ್ಥರು ಅವರನ್ನು ವಿಕ್ಟೂರಿಯಾ ಆಸ್ಪತ್ರೆಗೆ ಹಾಗೂ ಬಳಿಕ ಮತ್ತೊಂದು ಆಸ್ಪತ್ರೆಗೆ ಸ್ಥಳಾಂತರಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ 45 ವರ್ಷದ ಮಾಗೇಶ್ವರಿ ಭಾನುವಾರ ಮುಂಜಾನೆ ಮೃತಪಟ್ಟಿದ್ದಾರೆ.
ಇದನ್ನೂ ಓದಿ ಎರಡು ಬೆಕ್ಕುಗಳ ಮಿಲನ, ನಾಲ್ಕು ಮರಿ ಜನನ: ಮಾಲೀಕರ ಕಿತ್ತಾಟ ಜೋರಾದ ಬೆನ್ನಲ್ಲೇ ಪೊಲೀಸ್ ಎಂಟ್ರಿ!
ಆಕೆಯ ಮೇಲೆ ಹಲ್ಲೆ ಮಾಡಿದ್ದ ಮಣಿಕಿರಣ್ ಹಾಗೂ ಸಹಚರರ ಮೇಲೆ ಮೊದಲಿಗೆ ಹಲ್ಲೆ ಮಾಡಿದ ಆರೋಪದಡಿ ಕೇಸ್ ದಾಖಲಾಗಿತ್ತು. ಅದೇ ಈಗ ಕೊಲೆ ಕೇಸ್ ಆಗಿ ಮಾರ್ಪಾಡಾಗಿದ್ದು, ಮಣಿಕಿರಣ್ ಸೇರಿದಂತೆ ನಾಲ್ವರನ್ನು ಪೊಲೀದರು ಬಂಧಿಸಿದ್ದಾರೆ. ಆರೋಪಿಗಳು ಎಲ್ಲರೂ ಕೂಲಿ ಕಾರ್ಮಿಕರಾಗಿದ್ದು, ಅವರನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗ್ರಹದಲ್ಲಿ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.