ಶಿವಮೊಗ್ಗ, ಮಾರ್ಚ್ 04: ನಗರದಲ್ಲಿ ಗಾಂಜಾ ಹಾವಳಿ ಮತ್ತೆ ಮುನ್ನೆಲೆಗೆ ಬಂದಿದ್ದು, ಮಾದಕ ವಸ್ತುವಿನ ಅಮಲಿನಲ್ಲಿ ದುಷ್ಕರ್ಮಿಗಳು ಹೊಸ ಕಾರನ್ನು ಜಖಂಗೊಳಿಸಿರುವ ಘಟನೆ ಶರಾವತಿ ನಗರದ ಹಂದಿಜೋಗಿ ಕ್ಯಾಂಪ್ನಲ್ಲಿ ನಿನ್ನೆ ತಡರಾತ್ರಿ ನಡೆದಿದೆ. ಬೈಕ್ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಮನೆ ಮುಂದೆ ನಿಲ್ಲಿಸಿದ್ದ ಕಾರಿನ ಗ್ಲಾಸ್ಗಳನ್ನು ಪುಡಿಪುಡಿ ಮಾಡಿದ್ದಾರೆ. ಕಾರಿನ ಮಾಲೀಕ ಸುರೇಶ್ ಅವರು ಕೇವಲ ನಾಲ್ಕು ತಿಂಗಳ ಹಿಂದೆ ಈ ಕಾರನ್ನು ಖರೀದಿಸಿದ್ದರು ಎನ್ನಲಾಗಿದೆ. ಈ ಪ್ರದೇಶದಲ್ಲಿ ಗಾಂಜಾ ಸೇದುವುದು, ಕುಡಿಯುವುದು, ಗಲಾಟೆ ಮಾಡುವುದು, ಹಾಗೂ ಜನರಿಗೆ ತೊಂದರೆ ನೀಡುವುದು ಸಾಮಾನ್ಯವಾಗಿದೆ. ಬೈಕ್ಗಳನ್ನು ಜಖಂಗೊಳಿಸುವುದು, ಪೆಟ್ರೋಲ್ ಕಳವು ಮಾಡುವುದು ಸೇರಿದಂತೆ ಹಲವು ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ. ಈ ಪುಂಡರ ಹಾವಳಿಯಿಂದ ಬೇಸತ್ತ ಸ್ಥಳೀಯ ನಿವಾಸಿಗಳು ತಮಗೂ ಮತ್ತು ತಮ್ಮ ಆಸ್ತಿಪಾಸ್ತಿಗಳಿಗೂ ರಕ್ಷಣೆ ನೀಡುವಂತೆ ಪೊಲೀಸ್ ಇಲಾಖೆಗೆ ಮನವಿ ಮಾಡಿದ್ದಾರೆ. ಇಂದು ಕಾರುಗಳಿಗೆ ಹಾನಿ ಮಾಡಿರುವ ಇವರು ನಾಳೆ ತಮ್ಮ ಕುಟುಂಬಗಳಿಗೂ ತೊಂದರೆ ನೀಡಬಹುದೆಂಬ ಆತಂಕ ವ್ಯಕ್ತಪಡಿಸಿದ್ದಾರೆ. ಈ ಘಟನೆ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.