ಮಂತ್ರಾಲಯದಲ್ಲಿ ಗುರುವೈಭವೋತ್ಸವ ಕಾರ್ಯಕ್ರಮ ನಡೆದಿದೆ. ಇದೇ ಉತ್ಸವದ ವೇದಿಕೆಯಲ್ಲಿ ಹಲವು ಗಣ್ಯರಿಗೆ ಸನ್ಮಾನ ಮಾಡಲಾಗಿದೆ. ನಟ ರಾಘವೇಂದ್ರ ರಾಜ್ಕುಮಾರ್ (Raghavendra Rajkumar) ಅವರಿಗೆ ಗೌರವ ಡಾಕ್ಟರೇಟ್ ನೀಡಿ ಸನ್ಮಾನಿಸಲಾಗಿದೆ. ಮಂತ್ರಾಲಯದ ಪೀಠಾಧಿಪತಿ ಸುಬುಧೇಂದ್ರ ತೀರ್ಥರಿಂದ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು. ಇದೇ ವೇಳೆ ರಾಘವೇಂದ್ರ ರಾಜ್ಕುಮಾರ್ ಅವರಿಗೆ ರಾಯರ ಅನುಗೃಹ ಪ್ರಶಸ್ತಿ ಕೂಡ ನೀಡಿ ಗೌರವಿಸಲಾಯಿತು. ಅಮೆರಿಕದ ಫ್ಲೋರಿಡಾದ ಯೋಗ ಸಂಸ್ಕೃತಂ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ (Honorary Doctorate) ನೀಡಲಾಗಿದೆ. ಈ ಕಾರ್ಯಕ್ರಮದಲ್ಲಿ ರಾಘವೇಂದ್ರ ರಾಜ್ಕುಮಾರ್ ಅವರು ಕುಟುಂಬ ಸಮೇತರಾಗಿ ಭಾಗಿಯಾಗಿದ್ದರು.
ಗುರುವೈಭವೋತ್ಸವ ಕಾರ್ಯಕ್ರಮದಲ್ಲಿ ಗೌರವ ಡಾಕ್ಟರೇಟ್ ಸ್ವೀಕರಿಸಿದ ಬಳಿಕ ರಾಘವೇಂದ್ರ ರಾಜ್ಕುಮಾರ್ ಅವರು ಮಾತನಾಡಿದರು. ಡಾಕ್ಟರೇಟ್ ಪದವಿ ಸಿಕ್ಕಿದ್ದು ಪುಣ್ಯ. ಅದನ್ನ ರಾಘವೇಂದ್ರ ಸ್ವಾಮಿಗಳ ಪಾದಕ್ಕೆ ಅರ್ಪಿಸುವೆ. ನಾನು ಹುಟ್ಟಿದಾಗ ತಂದೆ ಅವರು ಮಂತ್ರಾಲಯ ಸಿನಿಮಾ ಮಾಡುತ್ತಿದ್ದರು. ಆಗ ನನಗೆ ರಾಘವೇಂದ್ರ ಅಂತ ನನಗೆ ಹೆಸರು ಇಟ್ಟಿದ್ರು. ಅದು ರಾಘವೇಂದ್ರ ರಾಜ್ಕುಮಾರ್ ಆಗಿ ಬೆಳೆದು ಬಂದಿದೆ’ ಎಂದು ಅವರು ಹೇಳಿದರು.
‘ನನಗೆ ಈಗ ಡಾಕ್ಟರೇಟ್ ಪದವಿ ಕೊಟ್ಟಿದ್ದಾರೆ. ಇದರಿಂದ ಜವಾಬ್ದಾರಿ, ಭಯ ಜಾಸ್ತಿ ಆಗ್ತಿದೆ. ಏನು ಸಾಧನೆ ಮಾಡದೇ ಇರುವವನಿಗೆ ಯಾಕೆ ಕೊಟ್ಟರು ಎನಿಸುತ್ತದೆ. ದೇವರ ಆಶೀರ್ವಾದದಿಂದ ಬಂದಿದೆ. ಇನ್ಮೇಲೆ ನಾನು ಸಮಾಜ ಸೇವೆ ಮಾಡಿಕೊಂಡು ಜನರ ಜೊತೆ ಬೆರೆತು ಕೆಲಸ ಮಾಡುತ್ತೇನೆ. ತಂದೆ-ತಾಯಿ ಆಶೀರ್ವಾದ ಮಾಡಿ ಈ ಗೌರವ ಕೊಡಿಸಿರೋ ಥರ ಆಗಿದೆ. ಇದನ್ನು ರಾಘವೇಂದ್ರ ಸ್ವಾಮಿಗಳ ಪಾದಕ್ಕೆ ಅರ್ಪಿಸುತ್ತಿದ್ದೇನೆ’ ಎಂದು ರಾಘವೇಂದ್ರ ರಾಜ್ಕುಮಾರ್ ಅವರು ಹೇಳಿದರು.
ಸೆಲ್ಫಿಗಾಗಿ ಫ್ಯಾನ್ಸ್ ತಳ್ಳಾಟ: ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಯುವ ರಾಜ್ಕುಮಾರ್ ಮತ್ತು ವಿನಯ್ ರಾಜ್ಕುಮಾರ್ ಜೊತೆ ಸೆಲ್ಫಿ ತೆಗೆದುಕೊಳ್ಳಲು ಅಭಿಮಾನಿಗಳು ಮುಗಿಬಿದ್ದರು. ಕಾರು ಹತ್ತಲು ಬಿಡದೇ ಸೆಲ್ಫಿಗಾಗಿ ನೂಕಾಟ, ತಳ್ಳಾಟ ನಡೆಯಿತು. ಕೊನೆಗೂ ಅಭಿಮಾನಿಗಳಿಗೆ ಸೆಲ್ಫಿ ನೀಡಿ ಅವರಿಬ್ಬರು ತೆರಳಿದರು.
ಇದನ್ನೂ ಓದಿ: ಎದೆಯೊಳಗಿದ್ದ ಅಪ್ಪುವನ್ನು ಎದೆಯ ಮೇಲೆ ಹಚ್ಚೆಯಾಗಿ ಹಾಕಿಸಿಕೊಂಡ ರಾಘವೇಂದ್ರ ರಾಜ್ಕುಮಾರ್
ರಾಘವೇಂದ್ರ ರಾಜ್ಕುಮಾರ್ ಅವರಿಗೆ ಈಗ 60 ವರ್ಷ ವಯಸ್ಸು. 1988ರಿಂದಲೂ ಅವರು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಹಲವು ಸಿನಿಮಾಗಳಲ್ಲಿ ನಾಯಕನಾಗಿ ನಟಿಸಿ ಜನರನ್ನು ರಂಜಿಸಿದ್ದಾರೆ. ನಿರ್ಮಾಪಕನಾಗಿ ಸಾಕಷ್ಟು ಸಿನಿಮಾಗಳನ್ನು ನಿರ್ಮಿಸಿದ್ದಾರೆ. 2004ರ ಬಳಿಕ ಸತತ 15 ವರ್ಷಗಳ ಕಾಲ ಅವರು ನಟನೆಯಿಂದ ಬ್ರೇಕ್ ತೆಗೆದುಕೊಂಡಿದ್ದರು. ಈಗ ಹಲವು ಸಿನಿಮಾಗಳಲ್ಲಿ ಪೋಷಕ ಪಾತ್ರಗಳನ್ನು ಮಾಡುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.