ಗೂಗಲ್ ಪೇಯಲ್ಲಿ ‘ಪಾಕೆಟ್ ಮನಿ’ ಆಪ್ಷನ್ ಕ್ಲಿಕ್​​ ಮಾಡಿದ್ರೆ ಹಣ ಹೋಗುತ್ತಾ? ಯಾರಿಗಾಗಿ ಈ ಆಯ್ಕೆ? ಇಲ್ಲಿದೆ ನೋಡಿ

ಗೂಗಲ್ ಪೇಯಲ್ಲಿ ‘ಪಾಕೆಟ್ ಮನಿ’ ಆಪ್ಷನ್ ಕ್ಲಿಕ್​​ ಮಾಡಿದ್ರೆ ಹಣ ಹೋಗುತ್ತಾ? ಯಾರಿಗಾಗಿ ಈ ಆಯ್ಕೆ? ಇಲ್ಲಿದೆ ನೋಡಿ

ಸಾಮಾಜಿಕ ಜಾಲತಾಣದಲ್ಲಿ ಗೂಗಲ್ ಪೇಯಲ್ಲಿ ನೀಡಿರುವ ‘ಪಾಕೆಟ್ ಮನಿ’ ಆಪ್ಷನ್ ಬಗ್ಗೆ ಭಾರೀ ಚರ್ಚೆಗಳು ಆಗುತ್ತಿದೆ. ಈ ಆಪ್ಷನ್ ಕ್ಲಿಕ್ ಮಾಡಿದ್ರೆ ಹಣ ಎಲ್ಲವೂ ಹೋಗುತ್ತದೆ, ಇದೊಂದು ರೀತಿ ಸ್ಕ್ಯಾಮ್ ಎಂದು ಹೇಳುತ್ತಿದ್ದಾರೆ. ಇದೀಗ ಈ ಬಗ್ಗೆ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವ್ಯಾಪಕವಾಗಿ ವೈರಲ್​ ಆಗುತ್ತಿದೆ. ಅಷ್ಟಕ್ಕೂ ಇದರ ಹಿಂದೆ ಇರುವ ನಿಜವಾದ ತಂತ್ರ ಏನು? ಎಂಬ ಬಗ್ಗೆ ತಿಳಿಯಬೇಕಿದೆ. ಅಷ್ಟಕ್ಕೂ ಗೂಗಲ್​​ ಪೇಯಲ್ಲಿ ಇಂತಹ ಸ್ಕ್ಯಾಮ್​​​ಗಳು ನಡೆಯಲು ಸಾಧ್ಯವೇ? ಇಷ್ಟು ದೊಡ್ಡ ಸಂಸ್ಥೆ ಸೆಕ್ಯುರಿಟಿ ವಿಚಾರದಲ್ಲಿ ಅಪಾಯ ತಂದುಕೊಳ್ಳಲು ಸಾಧ್ಯವೇ ಇಲ್ಲ ಎಂಬುದು ವಾದವಾಗಿದೆ. ಇನ್ನು ಗೂಗಲ್ ಪೇಯಲ್ಲಿ ‘ಪಾಕೆಟ್ ಮನಿ’ ಆಪ್ಷನ್ ನೀಡಿರುವದರಿಂದ ಆಗುವ ಲಾಭಗಳೇನು? ಯಾಕಾಗಿ ಇದನ್ನು ನೀಡಿದ್ದಾರೆ ಎಂಬೆಲ್ಲ ವರದಿ ಇಲ್ಲಿದೆ ನೋಡಿ.

ಡಿಜಿಟಲ್ ಪಾವತಿ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಗೂಗಲ್ ಪೇ, ಕುಟುಂಬದ ಸದಸ್ಯರು ಮತ್ತು ಮಕ್ಕಳಿಗಾಗಿ ‘ಪಾಕೆಟ್ ಮನಿ’ ಎಂಬ ಹೊಸ ಫೀಚರ್ ಅನ್ನು ಬಿಡುಗಡೆ ಮಾಡಿದೆ. ಇದು ಪೋಷಕರು ತಮ್ಮ ಬ್ಯಾಂಕ್ ಖಾತೆಯನ್ನು ಬಳಸಿಕೊಂಡು ಮಕ್ಕಳಿಗೆ ಪಾವತಿ ಮಾಡಲು ಅವಕಾಶ ನೀಡುತ್ತದೆ, ಆದರೆ ಅದರ ಸಂಪೂರ್ಣ ನಿಯಂತ್ರಣ ಪೋಷಕರ ಕೈಯಲ್ಲೇ ಇರುತ್ತದೆ.

ಏನಿದು ‘ಪಾಕೆಟ್ ಮನಿ’ ವೈಶಿಷ್ಟ್ಯ?

ಇದು ಗೂಗಲ್ ಪೇನ ‘UPI Circle’ ಫ್ರೇಮ್‌ವರ್ಕ್ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಮೂಲಕ ಪೋಷಕರು ತಮ್ಮ ಮಕ್ಕಳಿಗೆ ಅಥವಾ ಅವಲಂಬಿತರಿಗೆ ಡಿಜಿಟಲ್ ಹಣವನ್ನು ಬಳಸಲು ಅನುಮತಿಸಬಹುದು. ಇದಕ್ಕಾಗಿ ದ್ವಿತೀಯ ಬಳಕೆದಾರರಿಗೆ (ಮಕ್ಕಳಿಗೆ) ಪ್ರತ್ಯೇಕ ಬ್ಯಾಂಕ್ ಖಾತೆಯ ಅಗತ್ಯವಿರುವುದಿಲ್ಲ. ಪೋಷಕರು ತಿಂಗಳಿಗೆ ಗರಿಷ್ಠ 15,000 ರೂ. ವರೆಗೆ ಖರ್ಚು ಮಾಡುವ ಮಿತಿಯನ್ನು ನಿಗದಿಪಡಿಸಬಹುದು. ಈ ಮಿತಿಯೊಳಗೆ ಮಕ್ಕಳು ಸ್ವತಂತ್ರವಾಗಿ ಪಾವತಿ ಮಾಡಬಹುದು.

ಈ ಆಯ್ಕೆಯನ್ನು ಆರಿಸಿಕೊಂಡರೆ, ಮಗು ಪ್ರತಿ ಬಾರಿ ಪೇಮೆಂಟ್ ಮಾಡಲು ಪ್ರಯತ್ನಿಸಿದಾಗ ಪೋಷಕರ ಫೋನ್‌ಗೆ ವಿನಂತಿ ಬರುತ್ತದೆ. ಪೋಷಕರು ಓಕೆ ಅಂದರಷ್ಟೇ ಹಣ ವರ್ಗಾವಣೆಯಾಗುತ್ತದೆ. ಒಬ್ಬ ಪ್ರಾಥಮಿಕ ಬಳಕೆದಾರನು ಇದರಲ್ಲಿ ಗರಿಷ್ಠ ಐವರು ಸದಸ್ಯರನ್ನು ಸೇರಿಸಬಹುದು. ಭದ್ರತೆಯ ದೃಷ್ಟಿಯಿಂದ, ಪೋಷಕರು ತಮ್ಮ ಮತ್ತು ಮಕ್ಕಳ ಸಂಬಂಧದ ಬಗ್ಗೆ ಸರ್ಕಾರಿ ಗುರುತಿನ ಚೀಟಿ ನೀಡಿ ಕೆವೈಸಿ ಮಾಡುವುದು ಕಡ್ಡಾಯವಾಗಿದೆ. ಇದರಿಂದ ಮಕ್ಕಳ ಬಳಿ ಬ್ಯಾಂಕ್ ಖಾತೆ ಇಲ್ಲದಿದ್ದರೂ, ಶಾಲಾ-ಕಾಲೇಜುಗಳ ಕ್ಯಾಂಟೀನ್ ಅಥವಾ ಸಣ್ಣ ಪುಟ್ಟ ಶಾಪಿಂಗ್‌ಗೆ ಡಿಜಿಟಲ್ ಪಾವತಿ ಮಾಡಲು ಈ ಫೀಚರ್ ಸಹಕಾರಿ.ಪೋಷಕರು ಹಣ ಎಲ್ಲಿ ಮತ್ತು ಎಷ್ಟು ಖರ್ಚಾಗುತ್ತಿದೆ ಎಂಬುದನ್ನು ತಮ್ಮ ಫೋನ್ ಮೂಲಕವೇ ಟ್ರ್ಯಾಕ್ ಮಾಡಬಹುದು.

ಗೂಗಲ್ ಪೇ ‘ಪಾಕೆಟ್ ಮನಿ’ ಸೆಟಪ್ ಮಾಡುವುದು ಹೇಗೆ? ಇಲ್ಲಿದೆ ಸ್ಟೆಪ್-ಬೈ-ಸ್ಟೆಪ್ ಗೈಡ್!

ಹಂತ 1: ಯುಪಿಐ ಸರ್ಕಲ್‌ಗೆ ಭೇಟಿ ನೀಡಿ

ನಿಮ್ಮ ಫೋನ್‌ನಲ್ಲಿ ಗೂಗಲ್ ಪೇ ಅಪ್ಲಿಕೇಶನ್ ತೆರೆಯಿರಿ. ಮೇಲೆ ಬಲಭಾಗದಲ್ಲಿರುವ ನಿಮ್ಮ ‘ಪ್ರೊಫೈಲ್’ (Profile) ಚಿತ್ರದ ಮೇಲೆ ಕ್ಲಿಕ್ ಮಾಡಿ. ಅಲ್ಲಿ ಕಾಣಿಸುವ ಮೆನುವಿನಲ್ಲಿ ‘UPI Circle’ ಎಂಬ ವಿಭಾಗವನ್ನು ಆಯ್ಕೆ ಮಾಡಿ.

ಹಂತ 2: ಸದಸ್ಯರನ್ನು ಸೇರಿಸಿ

‘ಪಾಕೆಟ್ ಮನಿ’ ಸೆಟಪ್ ಮಾಡುವ ಆಯ್ಕೆಯನ್ನು ಆರಿಸಿ. ನಿಮ್ಮ ಕಾಂಟ್ಯಾಕ್ಟ್ ಲಿಸ್ಟ್‌ನಿಂದ ನೀವು ಯಾರನ್ನು (ಮಕ್ಕಳು ಅಥವಾ ಅವಲಂಬಿತರು) ದ್ವಿತೀಯ ಬಳಕೆದಾರರನ್ನಾಗಿ ಸೇರಿಸಲು ಬಯಸುತ್ತೀರೋ ಅವರ ಹೆಸರನ್ನು ಆರಿಸಿ. ನೆನಪಿಡಿ, ಅವರು ಈಗಾಗಲೇ ಗೂಗಲ್ ಪೇ ಇನ್‌ಸ್ಟಾಲ್ ಮಾಡಿರಬೇಕು.

ಹಂತ 3: QR ಕೋಡ್ ಸ್ಕ್ಯಾನಿಂಗ್

ಈಗ ಪ್ರಾಥಮಿಕ ಬಳಕೆದಾರರು (ಪೋಷಕರು), ದ್ವಿತೀಯ ಬಳಕೆದಾರರ (ಮಕ್ಕಳ) ಗೂಗಲ್ ಪೇನಲ್ಲಿರುವ UPI Circle QR ಕೋಡ್ ಅನ್ನು ಸ್ಕ್ಯಾನ್ ಮಾಡಬೇಕು. ಇದು ಇಬ್ಬರ ನಡುವೆ ಸುರಕ್ಷಿತ ಸಂಪರ್ಕವನ್ನು ಏರ್ಪಡಿಸುತ್ತದೆ.

ಹಂತ 4: ಪಾವತಿ ವಿಧಾನದ ಆಯ್ಕೆ

ಇಲ್ಲಿ ನಿಮಗೆ ಎರಡು ಪ್ರಮುಖ ಆಯ್ಕೆಗಳು ಸಿಗುತ್ತವೆ:

ಪೂರ್ಣ ನಿಯೋಗ (Full Delegation): ಇಲ್ಲಿ ನೀವು ಮಾಸಿಕ ಖರ್ಚು ಮಿತಿಯನ್ನು (ಗರಿಷ್ಠ ₹15,000) ನಿಗದಿಪಡಿಸಬಹುದು. ಈ ಮಿತಿಯೊಳಗೆ ಮಕ್ಕಳು ನಿಮ್ಮ ಅನುಮತಿ ಇಲ್ಲದೆ ನೇರವಾಗಿ ಪಾವತಿ ಮಾಡಬಹುದು.

ಅನುಮೋದನೆ ಆಧಾರಿತ (Approve Each Payment): ಪ್ರತಿ ಬಾರಿ ಮಗು ಪಾವತಿ ಮಾಡುವಾಗಲೂ ನಿಮ್ಮ ಫೋನ್‌ಗೆ ನೋಟಿಫಿಕೇಶನ್ ಬರುತ್ತದೆ. ನೀವು ಅದನ್ನು ಅನುಮೋದಿಸಿದರೆ ಮಾತ್ರ ಹಣ ವರ್ಗಾವಣೆಯಾಗುತ್ತದೆ.

ಹಂತ 5: KYC ಮತ್ತು ದೃಢೀಕರಣ

ಕೊನೆಯದಾಗಿ, ನಿಮ್ಮ ಮತ್ತು ದ್ವಿತೀಯ ಬಳಕೆದಾರರ ನಡುವಿನ ಸಂಬಂಧವನ್ನು ನಮೂದಿಸಿ ಮತ್ತು ಅಗತ್ಯವಿರುವ ಸರ್ಕಾರಿ ಐಡಿ (Government ID) ವಿವರಗಳನ್ನು ಒದಗಿಸಿ KYC ಪ್ರಕ್ರಿಯೆ ಪೂರ್ಣಗೊಳಿಸಿ. ಸೆಟಪ್ ಖಚಿತಪಡಿಸಲು ನಿಮ್ಮ UPI PIN ನಮೂದಿಸಿದರೆ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ.

ಇದನ್ನೂ ಓದಿ: ಸ್ಮಾರ್ಟ್ ಆಗಿ ಪ್ಲಾನ್ ಮಾಡಿ; ಈ 4 ಹಣಕಾಸು ತಪ್ಪುಗಳನ್ನು ಮಾಡದಿರಿ

ಗೂಗಲ್ ಪೇ ಪಾಕೆಟ್ ಮನಿ: ವಹಿವಾಟು ನಡೆಸುವುದು ಹೇಗೆ?

ಹಂತ 1: ಪಾವತಿ ವಿಧಾನವನ್ನು ಆರಿಸಿ

ಸೆಟಪ್ ಪ್ರಕ್ರಿಯೆ ಮತ್ತು ಕೆವೈಸಿ (KYC) ಪೂರ್ಣಗೊಂಡ ನಂತರ, ದ್ವಿತೀಯ ಬಳಕೆದಾರರು (ಮಕ್ಕಳು) ಸಾಮಾನ್ಯ ಯುಪಿಐ ಬಳಕೆದಾರರಂತೆ ಪಾವತಿ ಆರಂಭಿಸಬಹುದು.

ಅಂಗಡಿಗಳಲ್ಲಿ: ಯಾವುದೇ ಅಂಗಡಿಯ QR ಕೋಡ್ ಸ್ಕ್ಯಾನ್ ಮಾಡಬಹುದು ಅಥವಾ ಮೊಬೈಲ್ ಸಂಖ್ಯೆ ನಮೂದಿಸಬಹುದು.

ಆನ್‌ಲೈನ್‌ನಲ್ಲಿ: ಯಾವುದೇ ಆಪ್ ಅಥವಾ ವೆಬ್‌ಸೈಟ್‌ನಲ್ಲಿ ಚೆಕ್‌ಔಟ್ ಮಾಡುವಾಗ ‘UPI’ ಆಯ್ಕೆ ಮಾಡಿ, ಅಲ್ಲಿ ಗೂಗಲ್ ಪೇ ಮೂಲಕ ಪಾವತಿ ಪೂರ್ಣಗೊಳಿಸಬಹುದು.

ಹಂತ 2: ಪಾವತಿ ಪ್ರಕ್ರಿಯೆ

ಪೋಷಕರು ಸೆಟಪ್ ಸಮಯದಲ್ಲಿ ಆರಿಸಿಕೊಂಡಿರುವ ಆಯ್ಕೆಯ ಆಧಾರದ ಮೇಲೆ ಪಾವತಿ ನಡೆಯುತ್ತದೆ:

ಪೂರ್ಣ ನಿಯೋಗ: ಪೋಷಕರು ನಿಗದಿಪಡಿಸಿದ ಮಾಸಿಕ ಮಿತಿಯೊಳಗೆ (ಉದಾಹರಣೆಗೆ ₹2,000) ಮಗು ಪಾವತಿ ಮಾಡಿದರೆ, ಅದು ಯಾವುದೇ ಹೆಚ್ಚಿನ ಅನುಮತಿ ಇಲ್ಲದೆ ತಕ್ಷಣವೇ ಪೂರ್ಣಗೊಳ್ಳುತ್ತದೆ.

ಅನುಮೋದನೆ ಮೋಡ್ : ಮಗು ಪಾವತಿ ಮಾಡಲು ಮುಂದಾದಾಗ, ಪ್ರಾಥಮಿಕ ಬಳಕೆದಾರರಿಗೆ (ಪೋಷಕರಿಗೆ) ತಕ್ಷಣವೇ ಅಧಿಸೂಚನೆ (Notification) ಹೋಗುತ್ತದೆ. ಪೋಷಕರು ನಿಗದಿತ ಸಮಯದೊಳಗೆ ಅದನ್ನು ಪರಿಶೀಲಿಸಿ ‘Approve’ ಮಾಡಿದರೆ ಮಾತ್ರ ಪಾವತಿ ಸಫಲವಾಗುತ್ತದೆ.

ಹಂತ 3: ವಹಿವಾಟು ಇತಿಹಾಸ

ಪಾರದರ್ಶಕತೆಗಾಗಿ, ನಡೆದ ಎಲ್ಲಾ ವಹಿವಾಟುಗಳ ವಿವರಗಳು ಪೋಷಕರು ಮತ್ತು ಮಕ್ಕಳು ಇಬ್ಬರ ಗೂಗಲ್ ಪೇ ಆಪ್‌ನ ‘Transaction History’ ವಿಭಾಗದಲ್ಲಿ ಲಭ್ಯವಿರುತ್ತದೆ. ಇದರಿಂದ ಹಣ ಎಲ್ಲಿ ಖರ್ಚಾಗಿದೆ ಎಂಬುದನ್ನು ನಿಖರವಾಗಿ ತಿಳಿಯಬಹುದು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *