
ಬೆಂಗಳೂರು, ಮಾರ್ಚ್ 17: ರಾಜ್ಯದಲ್ಲಿ ಕಮರ್ಷಿಯಲ್ ಸಿಲಿಂಡರ್ಗಳ ಅಭಾವ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇರೋದು ಹೋಟೆಲ್ ಉದ್ಯಮವನ್ನು ನಷ್ಟದ ಕೂಪಕ್ಕೆ ತಳ್ಳುತ್ತಿದೆ. ಈಗಾಗಲೇ ಹಲವು ಹೋಟೆಲ್ಗಳು ಬಂದ್ ಆಗಿದ್ದರೆ, ಇನ್ನೊಂದಿಷ್ಟು ಮೆನುವಿನಲ್ಲಿ ಭಾರೀ ಕಡಿತದ ಜೊತೆ ಗ್ರಾಹಕರಿಗೆ ಸೇವೆ ನೀಡುತ್ತಿವೆ. ಸ್ಥಿತಿ ಹೀಗೆಯೇ ಮುಂದುವರಿದರೆ ಅವುಗಳೂ ಕ್ಲೋಸ್ ಆಗುವ ಆತಂಕ ಎದುರಾಗಿದೆ. ಈ ಬೆನ್ನಲ್ಲೇ ಬೆಂಗಳೂರು ಹೋಟೆಲ್ ಅಸೋಸಿಯೇಷನ್, ವಾಣಿಜ್ಯ ಬಳಕೆಯ ಸಿಲಿಂಡರ್ಗಳಿಗಾಗಿ ಹೈಕೋರ್ಟ್ ಕದ ತಟ್ಟಿದೆ.
ಹೈಕೋರ್ಟ್ಗೆ ರಿಟ್ ಅರ್ಜಿ
ಹೋಟೆಲ್ಗಳಿಗೆ ಗ್ಯಾಸ್ ಸಿಲಿಂಡರ್ ಕೋರಿ ಬೆಂಗಳೂರು ಹೋಟೆಲ್ ಅಸೋಸಿಯೇಷನ್ನಿಂದ ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಕೆಯಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳನ್ನು ಪ್ರತಿವಾದಿಯನ್ನಾಗಿಸಿ ಅರ್ಜಿ ಸಲ್ಲಿಸಲಾಗಿದ್ದು, ಹೋಟೆಲ್ ಮುಚ್ಚಿರುವುದರಿಂದ ಹಾಲು ಮತ್ತು ತರಕಾರಿ ಮಾರಾಟಗಾರರಿಗೂ ತೊಂದರೆ ಆಗಿದೆ. 40 ಸಾವಿರ ಹೋಟೆಲ್, 6 ಲಕ್ಷ ಕಾರ್ಮಿಕರಿಗೆ ಸಮಸ್ಯೆಯಾಗಿದೆ. ಹೀಗಾಗಿ ಗ್ಯಾಸ್ ಸಿಲಿಂಡರ್ ಪೂರೈಕೆಗೆ ನಿರ್ದೇಶನ ನೀಡುವಂತೆ ಆಗ್ರಹಿಸಿ ಅಸೋಸಿಯೇಷನ್ ಪರ ವಕೀಲ ಕೆ.ಸತೀಶ್ ಭಟ್ ಅರ್ಜಿ ಸಲ್ಲಿಸಿದ್ದಾರೆ.
ಇದನ್ನೂ ಓದಿ: LPG ಸಿಲಿಂಡರ್ ಸಮಸ್ಯೆಗೆ ತಲ್ಲಣಿಸಿದ ಹೋಟೆಲ್ ಉದ್ಯಮ; ಐದೇ ದಿನಗಳಲ್ಲಿ 100 ಕೋಟಿಗೂ ಅಧಿಕ ನಷ್ಟ!
ಹೋಟೆಲ್ ಉದ್ಯಮಕ್ಕೆ 1 ಸಾವಿರ ಸಿಲಿಂಡರ್ಗಳನ್ನು ಪೂರೈಸುವುದಾಗಿ ಸಚಿವ ಮುನಿಯಪ್ಪ ಹೇಳಿದ್ದರೂ, ಸಚಿವರ ಭರವಸೆ ಬಗ್ಗೆ ಬೆಂಗಳೂರಿನ ಹೋಟೆಲ್ ಮಾಲೀಕರು ಅಸಮಾಧಾನ ಹೊರಹಾಕಿದ್ದಾರೆ. 40 ಸಾವಿರ ಹೋಟೆಲ್ಗಳಿಗೆ ಒಂದು ಸಾವಿರ ಸಿಲಿಂಡರ್ ಕೊಡುವ ಬದಲು, ಕೊಡದೆ ಇರುವುದೇ ಒಳ್ಳೆಯದು. ಹೋಟೆಲ್ಗಳ ಮಾಲಕರು ಮಾತ್ರವಲ್ಲದೆ ಅಲ್ಲಿ ಕೆಲಸ ಮಾಡುವ ಲಕ್ಷಾಂತರ ಕಾರ್ಮಿಕರು ಮತ್ತು ಅವರ ಕುಟುಂಬದ ಬಗ್ಗೆಯೂ ಸರ್ಕಾರ ಗಮನ ಹರಿಸಬೇಕು ಎಂಬ ಆಗ್ರಹ ಕೇಳಿಬಂದಿದೆ. ಬೆಂಗಳೂರಿನಲ್ಲಿ ಸರಿ ಸುಮಾರು 40 ಸಾವಿರಕ್ಕೂ ಹೆಚ್ಚು ಹೋಟೆಲ್ಗಳಿದ್ದು, ಈ ಪೈಕಿ 4,500 ಹೋಟೆಲ್ಗಳು ರಿಜಿಸ್ಟರ್ ಆಗಿವೆ. ಇವೆಲ್ಲವೂ ಕೂಡ ಈಗ ವಾಣಿಜ್ಯ ಗ್ಯಾಸ್ ಸಿಲಿಂಡರ್ ಅಭಾವದ ಸಮಸ್ಯೆಗೆ ಸಿಲುಕಿದ್ದು, ನಷ್ಟ ಅನುಭವಿಸುತ್ತಿವೆ. ಹಲವೆಡೆ ರೆಸ್ಟೋರೆಂಟ್ಗಳು ಬಂದ್ ಆಗಿದ್ದರೆ, ಇನ್ನು ಕೆಲ ಹೋಟೆಲ್ಗಳು ನಷ್ಟದಲ್ಲಿಯೇ ಗ್ರಾಹಕರಿಗೆ ಸೇವೆ ಒದಗಿಸುತ್ತಿರುವ ಪರಿಣಾಮ ರಾಜ್ಯ ರಾಜಧಾನಿ ಬೆಂಗಳೂರೊಂದರಲ್ಲೇ ನೂರಾರು ಕೋಟಿ ರೂಪಾಯಿ ಹೋಟೆಲ್ ಉದ್ಯಮಕ್ಕೆ ನಷ್ಟ ಉಂಟಾಗಿದೆ ಎನ್ನಲಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.