ಹಾಸನ, (ಫೆಬ್ರವರಿ 25): ಹೆರಿಗೆ ನಂತರ ಬಾಣಂತಿ ಸಾವನ್ನಪ್ಪಿರುವ ಘಟನೆ ಹಾಸನದ (Hassan) ಹಿಮ್ಸ್ ಆಸ್ಪತ್ರೆಯಲ್ಲಿ ನಡೆದಿದೆ. ಶೃತಿ ಎನ್ನುವ ಮಹಿಳೆ ಹೆರಿಗೆಗೆಂದು ಹಾಸನದ ಹಿಮ್ಸ್ ಆಸ್ಪತ್ರೆ (Hims Hospital) ದಾಖಲಾಗಿದ್ದರು. ಆದ್ರೆ, ಮಗುವಿಗೆ ಜನ್ಮ ನೀಡಿದ ಬಳಿಕ ಬಾಣಂತಿ ಶೃತಿ (30) ಸಾವನ್ನಪ್ಪಿದ್ದಾರೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಬಾಣಂತಿ ಶೃತಿ ಸಾವಿಗೆ ಹಿಮ್ಸ್ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಶೃತಿ ಸಂಬಂಧಿಕರು ಹಾಗೂ ಪತಿ ಆರೋಪಿಸಿದ್ದಾರೆ. ಇನ್ನು ಈ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ ನೇತೃತ್ವದಲ್ಲಿ ನಡೆದ ಹಾಸನ ಕೆಡಿಪಿ ಸಭೆಯಲ್ಲೂ ಚರ್ಚೆಯಾಗಿದೆ. ಈ ವೇಳೆ ವೈದ್ಯಾಧಿಕಾರಿಗಳು ಸಚಿವರಿಗೆ ಶೃತಿ ಸಾವಿನ ಬಗ್ಗೆ ಮಾಹಿತಿ ನೀಡಿದರು.
ಇನ್ನು ಹಾಸನದ ಜಿಲ್ಲಾ ಪಂಚಾಯಿತಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ ಅವರನ್ನು ಭೇಟಿ ಮಾಡಿ ದೂರು ನೀಡಿದರು. ಅರೋಗ್ಯವಾಗಿದ್ದ ಪತ್ನಿಗೆ ಸರಿಯಾಗಿ ಚಿಕಿತ್ಸೆ ಕೊಟ್ಟಿಲ್ಲ. ನನ್ನ ಪತ್ನಿ ಸಾವಿಗೆ ವೈದ್ಯರ ನಿರ್ಲಕ್ಷ್ಯ ಕಾರಣ ಎಂದು ಸಚಿವರ ಎದುರು ಪತಿ ಪುನೀತ್ ಕಣ್ಣೀರಿಟ್ಟರು. ಈ ವೇಳೆ ಸಚಿವರು ಮೃತ ಮಹಿಳೆ ಕುಟುಂಬ ಸದಸ್ಯರ ಸಮಸ್ಯೆ ಆಲಿಸಿ ಸಾಂತ್ವನ ಹೇಳಿದ್ದು, ಘಟನೆ ಸಂಬಂಧ ಸೂಕ್ತ ತನಿಖೆ ನಡೆಯಲಿದೆ ಎಂದು ಭರವಸೆ ನೀಡಿದರು.
ಶೃತಿ ಪತಿ ಪುನೀತ್, ಸಚಿವ ಕೃಷ್ಣಬೈರೇಗೌಡ ಕಣ್ಣೀರಿಟ್ಟು ಗೋಳಾಡಿದ್ದು,ಈ ಪ್ರಸಂಗ ಅಲ್ಲಿದ್ದವರ ಕಣ್ಣು ಒದ್ದೆಯಾಗುವಂತೆ ಮಾಡಿತು.