Headlines

‘ಜನ ನಾಯಗನ್’ ಮೇಲಿನ ಆಸೆ ಬಿಟ್ಟ ಕೆವಿಎನ್, ಗಮನವೆಲ್ಲ ‘ಟಾಕ್ಸಿಕ್’ ಮೇಲೆ

‘ಜನ ನಾಯಗನ್’ ಮೇಲಿನ ಆಸೆ ಬಿಟ್ಟ ಕೆವಿಎನ್, ಗಮನವೆಲ್ಲ ‘ಟಾಕ್ಸಿಕ್’ ಮೇಲೆ

ಜನ ನಾಯಗನ್’ (Jana Nayagan) ಸಿನಿಮಾಕ್ಕೆ ಬಂದಿರುವ ಪರಿಸ್ಥಿತಿ ಬಲು ಶೋಚನೀಯ ಮಾತ್ರವಲ್ಲದೆ, ರಾಜಕೀಯ ಹೇಗೆ ಸಿನಿಮಾರಂಗವನ್ನು, ಸಿನಿಮಾವನ್ನು ನಿಯಂತ್ರಿಸುತ್ತದೆ ಎಂಬುದಕ್ಕೆ ಸ್ಪಷ್ಟ ಉದಾಹರಣೆ. ಒಂದೆಡೆ ಘೋರಾತಿ ಘೋರ ಹಿಂಸೆ ಇರುವ ಸಿನಿಮಾಗಳಿಗೆ ಸುಲಭವಾಗಿ ಸೆನ್ಸಾರ್ ಸಿಕ್ಕು ಬಿಡುಗಡೆ ಆಗುತ್ತಿದ್ದರೆ, ‘ಜನ ನಾಯಗನ್’ ಸಿನಿಮಾ ಅನ್ನು ತಿಂಗಳುಗಳ ಕಾಲ ಕ್ಷುಲ್ಲಕ ಕಾರಣಗಳನ್ನು ನೀಡಿ ತಡೆ ಹಿಡಿಯಲಾಗಿದೆ. ‘ಜನ ನಾಯಗನ್’ ದಳಪತಿ ವಿಜಯ್ ಅವರ ಕೊನೆಯ ಸಿನಿಮಾ ಎನ್ನಲಾಗಿದ್ದು, ಈ ಸಿನಿಮಾ ಬಿಡುಗಡೆ ಆದರೆ ಅವರಿಗೆ ರಾಜಕೀಯವಾಗಿ ಸಹಾಯ ಆಗುತ್ತದೆ ಎಂಬ ಕಾರಣಕ್ಕೆ ಸಿನಿಮಾವನ್ನು ರಾಜಕೀಯ ಪ್ರಭಾವ ಬಳಸಿ ತಡೆ ಹಿಡಿದಿರುವುದು ಸ್ಪಷ್ಟ. ಆದರೆ ಇದರಿಂದ ಬೇಸತ್ತಿರುವ ನಿರ್ಮಾಣ ಸಂಸ್ಥೆಯಾದ ಕೆವಿಎನ್, ‘ಜನ ನಾಯಗನ್’ ಮೇಲೆ ಆಸೆಯನ್ನೇ ಬಿಟ್ಟಿದೆಯಂತೆ.

ಇದೀಗ ತಮಿಳುನಾಡಿನಲ್ಲಿ ವಿಧಾನಸಭೆ ಚುನಾವಣೆಗಳು ಘೋಷಣೆ ಆಗಿದ್ದು ಚುನಾವಣೆ ಮುಗಿವ ವರೆಗೆ ಅಂದರೆ ಮೇ 6 ರವರೆಗೆ ಸಿನಿಮಾ ಬಿಡುಗಡೆ ಮಾಡುವಂತಿಲ್ಲ. ಅದಾದ ಬಳಿಕವಷ್ಟೆ ಸಿನಿಮಾವನ್ನು ಬಿಡುಗಡೆ ಮಾಡಬೇಕಿದೆ. ಆದರೆ ‘ಜನ ನಾಯಗನ್’ ಸುತ್ತುವರೆದಿರುವ ರಾಜಕೀಯದಿಂದ ಬೇಸತ್ತಿರುವ ಕೆವಿಎನ್ ನಿರ್ಮಾಣ ಸಂಸ್ಥೆ ಸಿನಿಮಾದ ಮೇಲೆ ಆಸೆಯನ್ನೇ ಕೈಬಿಟ್ಟಿದ್ದು, ಅದರ ಬದಲಿಗೆ ‘ಟಾಕ್ಸಿಕ್’ ಸಿನಿಮಾ ಮೇಲೆ ಗಮನ ಹರಿಸಿದೆ.

ತಮಿಳುನಾಡಿನಲ್ಲಿ ಏಪ್ರಿಲ್ 23 ರಂದು ಮತದಾನ ನಡೆಯಲಿದ್ದು, ಮೇ 4ಕ್ಕೆ ಫಲಿತಾಂಶ ಮತ್ತು ಮೇ 6ಕ್ಕೆ ಚುನಾವಣಾ ನೀತಿ ಸಂಹಿತೆ ಅಂತ್ಯವಾಗಲಿದೆ. ಏಪ್ರಿಲ್ 23 ರಂದು ಮತದಾನ ಮುಗಿದ ಕೂಡಲೇ ಸಿನಿಮಾವನ್ನು ಬಿಡುಗಡೆ ಮಾಡುವ ಆಲೋಚನೆಯೂ ಕೆವಿಎನ್​​ಗೆ ಇದೆ. ಒಂದೊಮ್ಮೆ ಫಲಿತಾಂಶ ಬಂದ ಬಳಿಕ ಸಿನಿಮಾ ಬಿಡುಗಡೆ ಮಾಡಿದರೆ, ಫಲಿತಾಂಶದಲ್ಲಿ ವಿಜಯ್​​ ಪಕ್ಷಕ್ಕೆ ಹಿನ್ನಡೆ ಆಗಿದ್ದರೆ, ಅದರ ಪ್ರಭಾವ ಸಿನಿಮಾದ ಮೇಲೂ ಬೀಳಲಿದೆ. ಹಾಗಾಗಿ ಫಲಿತಾಂಶ ಬರುವ ಮೊದಲೇ ಸಿನಿಮಾವನ್ನು ಬಿಡುಗಡೆ ಮಾಡುವುದು ಕೆವಿಎನ್​​ನ ಯೋಚನೆ. ಅಲ್ಲದೆ, ಇದರಿಂದ ‘ಟಾಕ್ಸಿಕ್’ ಮತ್ತು ‘ಜನ ನಾಯಗನ್’ ಬಿಡುಗಡೆ ಮಧ್ಯೆ ತುಸು ಹೆಚ್ಚು ಗ್ಯಾಪ್ ದೊರೆತಂದೆ ಆಗಲಿದೆ.

ಇದನ್ನೂ ಓದಿ;ಮಾರ್ಚ್ 9ಕ್ಕೆ ನಿರ್ಧಾರವಾಗಲಿದೆ ‘ಜನ ನಾಯಗನ್’ ಭವಿಷ್ಯ: ಆತಂಕದಲ್ಲಿ ಕೆವಿಎನ್

‘ಟಾಕ್ಸಿಕ್’ ಸಿನಿಮಾ ಜೂನ್ 04ರಂದು ಬಿಡುಗಡೆ ಆಗಲಿದೆ. ‘ಜನ ನಾಯಗನ್’ಗೆ ಹೋಲಿಸಿದರೆ ‘ಟಾಕ್ಸಿಕ್​​’ಗೆ ಬ್ಲಾಕ್ ಬಸ್ಟರ್ ಆಗುವ ಸಾಮರ್ಥ್ಯ ಹೆಚ್ಚಿದೆಯಂತೆ. ಹಾಗಾಗಿ ತನ್ನ ಗಮನವನ್ನು ‘ಜನ ನಾಯಗನ್’ ಬದಲಿಗೆ ‘ಟಾಕ್ಸಿಕ್’ ಮೇಲೆ ಹರಿಸಲಿದೆ ಕೆವಿಎನ್. ‘ಟಾಕ್ಸಿಕ್’ ಸಿನಿಮಾಕ್ಕೆ ಭರ್ಜರಿ ಪ್ರಚಾರ ನೀಡಿ, ಭಾರಿ ಅದ್ಧೂರಿಯಾಗಿ ಸಿನಿಮಾವನ್ನು ಬಿಡುಗಡೆ ಮಾಡುವ ಆಲೋಚನೆಯಲ್ಲಿ ಚಿತ್ರತಂಡ ಇದೆ.

ಕೆವಿಎನ್ ನಿರ್ಮಾಣ ಸಂಸ್ಥೆ ಪ್ರಸ್ತುತ ಮೂರು ದೊಡ್ಡ ಸಿನಿಮಾಗಳ ಮೇಲೆ ಬಂಡವಾಳ ಹೂಡಿದ್ದು, ಮೂರೂ ಸಿನಿಮಾಗಳು ಒಂದಲ್ಲ ಒಂದು ರೀತಿಯ ಸಂಕಷ್ಟಕ್ಕೆ ಸಿಲುಕಿವೆ. ‘ಜನ ನಾಯಗನ್’ ಸಿನಿಮಾಕ್ಕೆ ರಾಜಕೀಯ ಸಂಕಷ್ಟ ಎದುರಾಗಿದೆ. ‘ಟಾಕ್ಸಿಕ್’ ಸಿನಿಮಾಕ್ಕೆ ಮಧ್ಯ ಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದಿಂದ ಸಮಸ್ಯೆ ಆಗಿದೆ. ಇನ್ನು ಧ್ರುವ ಸರ್ಜಾ ನಟನೆಯ ‘ಕೆಡಿ’ ಸಿನಿಮಾಕ್ಕೆ ಹಾಡಿನ ಸಂಕಷ್ಟ ಎದುರಾಗಿದೆ. ಅಂದಹಾಗೆ ‘ಕೆಡಿ’ ಸಿನಿಮಾ ಏಪ್ರಿಲ್ 30ಕ್ಕೆ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *