
ಮೈಸೂರು, ಮಾರ್ಚ್ 08: ಟಿ.ನರಸೀಪುರದ ಸಿಲ್ಕ್ ಫ್ಯಾಕ್ಟರಿ ಜಾಗದಲ್ಲಿ ಕ್ರೀಡಾಂಗಣ ನಿರ್ಮಾಣ ವಿಚಾರವಾಗಿ ರೈತರು ಸಿಡಿದೆದಿದ್ದಾರೆ. ಟಿ.ನರಸೀಪುರದ ಸಿಲ್ಕ್ ಫ್ಯಾಕ್ಟರಿ ಜಾಗದಲ್ಲಿ ಕ್ರೀಡಾಂಗಣ ನಿರ್ಮಾಣ ಮಾಡಬಾರದು ಒತ್ತಾಯಿಸಿ ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಸದಸ್ಯರು ಇತ್ತೀಚೆಗೆ ಮೈಸೂರಿನಲ್ಲಿ ಪ್ರತಿಭಟಿಸಿದ್ದರು. ಈ ವಿಚಾರವಾಗಿ ರಾಜಮಾತೆ ಪ್ರಮೋದಾದೇವಿ ಒಡೆಯರ್ (pramoda devi wadiyar) ಅವರು ಸಚಿವ ಹೆಚ್.ಸಿ.ಮಹದೇವಪ್ಪ ಭೇಟಿ ಮಾಡಿದ್ದಾರೆ. ಈ ವೇಳೆ ಟಿ.ನರಸೀಪುರದ ಕೆಎಸ್ಐಸಿ ಕಾರ್ಖಾನೆ ಮುಚ್ಚುವುದಿಲ್ಲವೆಂದು ಸಚಿವ ಮಹದೇವಪ್ಪ ಭರವಸೆ ನೀಡಿದ್ದಾರೆ.
ಇನ್ನು ಸಚಿವರ ಸಕಾರಾತ್ಮಕ ಸ್ಪಂದನೆಗೆ ರಾಜಮಾತೆ ಪ್ರಮೋದಾದೇವಿ ಒಡೆಯರ್ ಕೃತಜ್ಞತೆ ಸಲ್ಲಿಸಿದ್ದು, ಈ ಬಗ್ಗೆ ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ. ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಸ್ಥಾಪಿಸಿದ ಮೈಸೂರು ಸಿಲ್ಕ್ ಇಂದು ವಿಶ್ವಪ್ರಸಿದ್ಧ. ಮೈಸೂರು ಸಿಲ್ಕ್ ಸೀರೆ ಮತ್ತು ಪಂಚೆಗೆ ಜಿಯೋಗ್ರಾಫಿಕಲ್ ಇಂಡಿಕೇಷನ್ (GI) ಟ್ಯಾಗ್ ಅದರ ವಿಶಿಷ್ಟತೆ ಹಾಗೂ ಗುಣಮಟ್ಟಕ್ಕೆ ಮುದ್ರೆ.
ಇದನ್ನೂ ಓದಿ: ಯೂನಿಟಿ ಮಾಲ್ ನಿರ್ಮಾಣ ವಿವಾದ: ಪತ್ರಿಕಾ ಪ್ರಕಟಣೆ ಮೂಲಕ ಪ್ರಮೋದಾ ದೇವಿ ಸ್ಪಷ್ಟನೆ
ಭಾರತದ ಸಮೃದ್ಧ ವಸ್ತ್ರ ಪರಂಪರೆಯ ಪ್ರತೀಕವಾಗಿ ಮೈಸೂರು ಸಿಲ್ಕ್ ಗುರುತಿಸಿಕೊಂಡಿದೆ. ಪರಂಪರೆ, ಕೈಚಳಕ, ವೈಶಿಷ್ಟ್ಯ ಹಾಗೂ ಐತಿಹಾಸಿಕ ಮಹತ್ವದಿಂದ ಮೈಸೂರು ಸಿಲ್ಕ್ ಪೀಳಿಗೆಯಿಂದ ಪೀಳಿಗೆಗೆ ಸಾಗುತ್ತಿರುವ ಅಮೂಲ್ಯ ಪರಂಪರೆ. ಜಾಗತಿಕ ಫ್ಯಾಷನ್ ಕ್ಷೇತ್ರದಲ್ಲಿ ಪರಂಪರೆಯ ಹಾಗೂ ಪರಿಸರ ಸ್ನೇಹಿ ವಸ್ತ್ರಗಳಿಗೆ ಹೆಚ್ಚುತ್ತಿರುವ ಬೇಡಿಕೆಯಲ್ಲಿ ಮೈಸೂರು ಸಿಲ್ಕ್ ಪ್ರಮುಖ ಸ್ಥಾನ ಪಡೆದಿದೆ.
ಇದನ್ನೂ ಓದಿ: ಸಿದ್ದಯ್ಯನಪುರ: ಊರೇ ಖಾಲಿ ಮಾಡಬೇಕಾದ ಭೀತಿಯಲ್ಲಿ ಗ್ರಾಮಸ್ಥರು, ಆಸ್ತಿ ಖಾತೆ ಮಾಡುವಂತೆ ಪ್ರಮೋದಾದೇವಿ ಪತ್ರದ ಬೆನ್ನಲ್ಲೇ ಆತಂಕ
ಟಿ.ನರಸೀಪುರ ಪ್ರದೇಶದ ಹವಾಮಾನ, ಭೌಗೋಳಿಕ ಪರಿಸ್ಥಿತಿ ಹಾಗೂ ನೀರಿನ ಲಭ್ಯತೆ ರೇಷ್ಮೆ ಬೆಳೆಗೆ ಅತ್ಯಂತ ಸೂಕ್ತ. ಪರಿಸ್ಥಿತಿಯಲ್ಲಿ ಯಾವುದೇ ಬದಲಾವಣೆ ನಡೆದರೆ ರೇಷ್ಮೆಯ ಗುಣಮಟ್ಟಕ್ಕೆ ಧಕ್ಕೆಯಾಗುವ ಸಾಧ್ಯತೆ ಇದೆ. ಟಿ.ನರಸೀಪುರದಲ್ಲಿರುವ ಕೆಎಸ್ಐಸಿ ಕಾರ್ಖಾನೆ ಭವಿಷ್ಯದ ಬಗ್ಗೆ ಮೈಸೂರು ಮತ್ತು ಬೆಂಗಳೂರು ಜನರಿಂದ ಆತಂಕ ವ್ಯಕ್ತವಾಗಿದೆ. ಈ ವೇಳೆ ಮೈಸೂರು ಸಿಲ್ಕ್ ಸ್ಥಾಪನೆಗೆ ಕಾರಣವಾದ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೂ ಗೌರವ ಸಮರ್ಪಣೆ ಎಂದಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.