ಪತಿಯ ಎರಡನೇ ಮದುವೆ ತಡೆದ ಪತ್ನಿImage Credit source: Tv9 Kannada
ತುಮಕೂರು, ಫೆಬ್ರವರಿ 08: ತನಗೆ ವಿಚ್ಛೇದನ ನೀಡದೆ ಮತ್ತೊಂದು ಮದುವೆ ಮಾಡಿಕೊಳ್ಳಲು ಹೊರಟಿದ್ದ ಪತಿ ಇನ್ನೇನು ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿ ಕಲ್ಯಾಣ ಮಂಟಪಕ್ಕೆ ಪೊಲೀಸರ ಜೊತೆ ನುಗ್ಗಿ ಪತ್ನಿ ಭರ್ಜರಿ ಶಾಕ್ ಕೊಟ್ಟಿರುವ ಘಟನೆ ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಯಡೆಯೂರಿನಲ್ಲಿ ನಡೆದಿದೆ. ಥೇಟ್ ಸಿನಿಮಾ ಶೈಲಿಯ ದೃಶ್ಯ ನೆರೆದಿದ್ದವರನ್ನು ಅಚ್ಚರಿಗೊಳಿಸಿದ್ದು, ಪತ್ನಿಗೆ ಗೊತ್ತಾಗದಂತೆ ಮತ್ತೊಂದು ಮದುವೆ ಮಾಡಲಾಗ್ತಿತ್ತು ಎಂಬ ಆರೋಪ ಕೇಳಿಬಂದಿದೆ.
2014ರಲ್ಲಿ ಬೆಂಗಳೂರಿನ ರಾಜರಾಜೇಶ್ವರಿ ನಗರದ ಲೇಪಾಕ್ಷಿ ಎಂಬಾಕೆಯನ್ನ ಹರಿಪ್ರಸಾದ್ ಮದುವೆಯಾಗಿದ್ದರು. 8ನೇ ತರಗತಿಯಿಂದಲೇ ಇವರಿಬ್ಬರು ಪರಸ್ಪರ ಪ್ರಿತಿಸಿದ್ದರು ಎನ್ನಲಾಗಿದ್ದು, ಮದುವೆ ಬಳಿಕ 10 ವರ್ಷ ಸಂಸಾರವನ್ನೂ ನಡೆಸಿದ್ದರು. ಆ ಬಳಿಕ ಕೌಟುಂಬಿಕ ಕಲಹದ ಕಾರಣಕ್ಕೆ ದಂಪತಿ ಬೇರೆಯಾಗಿದ್ದರು. ಈ ನಡುವೆ ಲೇಪಾಕ್ಷಿಗೆ ಗೊತ್ತಾಗದಂತೆ ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ನಿಟ್ಟೂರು ಗ್ರಾಮದ ಯುವತಿಯ ಜೊತೆಗೆ ಮದುವೆಗೆ ಹರಿಪ್ರಸಾದ್ ಮುಂದಾಗಿದ್ದಾರೆ. ಅದರಂತೆ ಯಡೆಯೂರಿನ SLN ಕಲ್ಯಾಣ ಮಂಟಪದಲ್ಲಿ ಇಂದು ಬೆಳಗ್ಗೆ 8:15ರಿಂದ 8:40ರ ವರೆಗೆ ಇದ್ದ ಮುಹೂರ್ತದಲ್ಲಿ ನಡೆಯುತ್ತಿದ್ದ ವಿವಾಹ ಕಾರ್ಯಕ್ರಮಕ್ಕೆ ಕುಣಿಗಲ್ ತಾಲೂಕಿನ ಅಮೃತೂರು ಪೊಲೀಸರ ಜೊತೆ ಲೇಪಾಕ್ಷಿ ಎಂಟ್ರಿ ಕೊಟ್ಟಿದ್ದಾರೆ.
ಇದನ್ನೂ ಓದಿ: ವೇಶ್ಯಾವಾಟಿಕೆ ನಡೆಸುವಂತೆ ಅತ್ತೆಯಿಂದ ಒತ್ತಾಯ; 11 ತಿಂಗಳ ಮಗು ಬಿಟ್ಟು ಗೃಹಿಣಿ ಆತ್ಮಹತ್ಯೆ
ಇನ್ನು ಪತ್ನಿ ಕಂಡು ಹರಿಪ್ರಸಾದ್ ಕಕ್ಕಾಬಿಕ್ಕಿಯಾಗಿದ್ದರೆ, ನನಗೆ ಡಿವೋರ್ಸ್ ಕೊಡದೆ ಮೋಸ ಮಾಡಿದ್ದೀಯಾ ಅಂತ ಗಲಾಟೆ ತೆಗೆದ ಲೇಪಾಕ್ಷಿ ಕೊನೆಗೂ ಮದುವೆ ನಿಲ್ಲಿಸಿದ್ದಾರೆ. ಮತ್ತೊಂದು ಮದುವೆಯ ಆಸೆಯಲ್ಲಿ ಹಸೆಮಣೆ ಏರಿದ್ದ ಹರಿಪ್ರಸಾದ್, ತಾಳಿ ಕಟ್ಟದೆ ಪೊಲೀಸ್ ಠಾಣೆಗೆ ತೆರಳಿದ ಪ್ರಸಂಗ ನಡೆದಿದೆ. ಘಟನೆಯಿಂದಾಗಿ ಸ್ಥಳದಲ್ಲಿ ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿದ್ದರೆ, ಮತ್ತೊಂದೆಡೆ ಲೇಪಾಕ್ಷಿ ಕುಟುಂಬಸ್ಥರು ಹರೀಶ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಪ್ರೀತಿಸಿ ಮುದುವೆಯಾದಾಕೆಗೆ ವಿಚ್ಚೇದನವನ್ನೂ ನೀಡದೆ ಈಗ ಮತ್ತೊಬ್ಬಳಿಗೆ ತಾಳಿಕಟ್ಟಲು ಈತ ಹೋಗಿದ್ದಾನೆ ಅಂದ್ರೆ ಏನು ಸ್ವಾಮಿ ಎಂದು ಪ್ರಶ್ನಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On – 1:26 pm, Sun, 8 February 26