ತಮಿಳಿನ ದಿಗ್ಗಜ ನಟ, ಮಾಜಿ ಸಿಎಂ ಎಂಜಿಆರ್​​ ಬಗ್ಗೆ ತೆಲುಗು ಹಿರಿಯ ನಟನ ಕೀಳು ಹೇಳಿಕೆ

ತಮಿಳಿನ ದಿಗ್ಗಜ ನಟ, ಮಾಜಿ ಸಿಎಂ ಎಂಜಿಆರ್​​ ಬಗ್ಗೆ ತೆಲುಗು ಹಿರಿಯ ನಟನ ಕೀಳು ಹೇಳಿಕೆ

ಚಿತ್ರರಂಗದಲ್ಲಿ (Movie Industry) ಒಬ್ಬರನ್ನು ಇನ್ನೊಬ್ಬರ ಜೊತೆ ಹೋಲಿಸಿ ನೋಡುವುದು ಸಾಮಾನ್ಯ. ಆದರೆ ಈ ಹೋಲಿಕೆಯ ಸಂದರ್ಭದಲ್ಲಿ ನಟರನ್ನು ತುಚ್ಛೀಕರಿಸಿ ಮಾತನಾಡುವುದು ಇತ್ತೀಚೆಗೆ ಹೆಚ್ಚಾಗುತ್ತಿದೆ. ಇದೀಗ ಪದ್ಮಶ್ರೀ ಪುರಸ್ಕೃತ ತೆಲುಗು ಚಿತ್ರರಂಗದ ಹಿರಿಯ ನಟರೊಬ್ಬರು, ಘನತೆ ಮರೆತು, ತಮಿಳಿನ ಸೂಪರ್ ದಿಗ್ಗಜ ನಟ, ಮಾಜಿ ಸಿಎಂ ಸಹ ಆಗಿದ್ದ ಎಂಜಿಆರ್ ಬಗ್ಗೆ ತೀರ ಕೀಳಾಗಿ ಮಾತನಾಡಿದ್ದಾರೆ. ತೆಲುಗಿನ ಹಿರಿಯ ನಟರೊಬ್ಬರನ್ನು ಹೊಗಳಲೆಂದು ತಮಿಳಿನ ಲಿಜೆಂಡರಿ ನಟರೊಬ್ಬರ ಬಗ್ಗೆ ಕೀಳಾಗಿ ಮಾತನಾಡಿರುವುದರನ್ನು ನೆಟ್ಟಗರು ತೀವ್ರವಾಗಿ ಟೀಕಿಸಿದ್ದಾರೆ.

ಟಾಲಿವುಡ್‌ನ ಹಿರಿಯ ನಟ ‘ನಟಕಿರೀಟಿ’ ಎಂದು ಅಭಿಮಾನಿಗಳಿಂದ ಬಿರುದು ಪಡೆದಿರುವ ರಾಜೇಂದ್ರ ಪ್ರಸಾದ್ ಆಗಾಗ್ಗೆ ತಮ್ಮ ಮಾತುಗಳಿಂದ ವಿವಾದಕ್ಕೆ ಈಡಾಗುತ್ತಲೇ ಇರುತ್ತಾರೆ. ಇದೀಗ ಮತ್ತೊಮ್ಮೆ ತಮ್ಮ ಹೇಳಿಕೆಯಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೈದರಾಬಾದ್‌ನಲ್ಲಿ ಇತ್ತೀಚೆಗೆ ನಡೆದ ‘ಕಲಾಪ್ರಪೂರ್ಣ ಕಾಂತಾರಾವ್ ರಾಷ್ಟ್ರೀಯ ಪ್ರಶಸ್ತಿ’ ಪ್ರದಾನ ಸಮಾರಂಭದಲ್ಲಿ ಅವರು ಮಾಡಿದ ಭಾಷಣ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ತಮಿಳು ಸಿನಿಮಾ ಪ್ರೇಮಿಗಳು ರಾಜೇಂದ್ರ ಪ್ರಸಾದ್ ಬಗ್ಗೆ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.

ತೆಲುಗು ಚಿತ್ರರಂಗದ ದಿವಂಗತ ನಟ ಕಾಂತಾರಾವ್ ಅವರ ನಟನಾ ಕೌಶಲ್ಯ ಮತ್ತು ಅವರ ಜನಪದ ಚಿತ್ರಗಳ ವೈಭವವನ್ನು ಕೊಂಡಾಡುವ ಸಂದರ್ಭದಲ್ಲಿ ರಾಜೇಂದ್ರ ಪ್ರಸಾದ್ ಅವರು ಎಂಜಿಆರ್ ಅವರ ಹೆಸರನ್ನು ಎಳೆದು ತಂದಿದ್ದಾರೆ. ಕಾಂತಾರಾವ್ ಅವರ ನಟನೆಯನ್ನು ನೋಡಿ ಎಂಜಿಆರ್ ಭಯಪಡುತ್ತಿದ್ದರು ಮತ್ತು ‘ಕಾಂತಾರಾವ್ ನಟನೆ ನೋಡಿ ಭಯದಿಂದ ಎಂಜಿಆರ್ ಮೂತ್ರ ವಿಸರ್ಜನೆ ಮಾಡಿಕೊಳ್ಳುತ್ತಿದ್ದರು’ ಎಂದು ರಾಜೇಂದ್ರ ಪ್ರಸಾದ್ ಹೇಳಿದ್ದಾರೆ. ‘ಈ ಕಾಂತಾರಾವ್ ಯಾರು? ಭಾರತೀಯ ಸಿನಿಮಾವನ್ನು ಎಲ್ಲಿಗೋ ತೆಗೆದುಕೊಂಡು ಹೋಗುತ್ತಿದ್ದಾನಲ್ಲ’ ಎಂದು ಎಂಜಿಆರ್ ನಡುಗುತ್ತಿದ್ದರು ಎಂದು ಅವರು ಹಗುರವಾಗಿ ಮಾತನಾಡಿದ್ದಾರೆ. ತಮ್ಮ ಭಾಷಣದಲ್ಲಿ ಹಲವು ಬಾರಿ ಅವರು ಎಂಜಿಆರ್ ಬಗ್ಗೆ ಕೀಳಾಗಿ ಮತ್ತು ಏಕವಚನ ಬಳಸಿ ಮಾತನಾಡಿದ್ದಾರೆ.

ಇದನ್ನೂ ಓದಿ:ಕಂಗನಾ ರನೌತ್ ಮುಂದಿನ ಸಿನಿಮಾಕ್ಕೆ ಆ ಕರಾಳ ಘಟನೆ ಸ್ಪೂರ್ತಿ

ರಾಜೇಂದ್ರ ಪ್ರಸಾದ್ ಅವರ ಈ ಮಾತುಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ತಮಿಳು ಹಾಗೂ ತೆಲುಗು ಅಭಿಮಾನಿಗಳು ಸಹ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಒಬ್ಬ ಸಾಧಕ ನಟನನ್ನು ಹೊಗಳುವ ಭರದಲ್ಲಿ ಕೋಟ್ಯಂತರ ಜನರು ಆರಾಧಿಸುವ ಮತ್ತೊಬ್ಬ ದಿಗ್ಗಜ ನಟ ಹಾಗೂ ಜನನಾಯಕನನ್ನು ಈ ರೀತಿ ಅವಮಾನಿಸುವುದು ಸರಿಯಲ್ಲ’ ಎಂದು ನೆಟ್ಟಿಗರು ಕಿಡಿಕಾರಿದ್ದಾರೆ. ಪದ್ಮಶ್ರೀ ಪುರಸ್ಕೃತ ನಟರೊಬ್ಬರು ಸಾರ್ವಜನಿಕ ವೇದಿಕೆಯಲ್ಲಿ ಇಂತಹ ಸಂಸ್ಕಾರಹೀನ ಪದಗಳನ್ನು ಬಳಸುವುದು ಅವರಿಗೆ ಶೋಭೆ ತರುವುದಿಲ್ಲ ಎಂದು ಅನೇಕರು ಟೀಕಿಸಿದ್ದಾರೆ.

ಈ ಹಿಂದೆ ಕೂಡ ರಾಜೇಂದ್ರ ಪ್ರಸಾದ್ ಅವರು ಹಾಸ್ಯ ನಟರಾದ ಬ್ರಹ್ಮಾನಂದಂ ಮತ್ತು ಅಲಿ ಅವರ ಬಗ್ಗೆ ಸಾರ್ವಜನಿಕವಾಗಿ ಕೀಳಾಗಿ ಮಾತನಾಡಿ ವಿವಾದ ಸೃಷ್ಟಿಸಿದ್ದರು, ಅದರ ಬಳಿಕ ತೆಲುಗು ಸಿನಿಮಾ ಒಂದರಲ್ಲಿ ನಟಿಸಿದ್ದ ಕ್ರಿಕೆಟಿಗ ಡೇವಿಡ್ ವಾರ್ನರ್ ಬಗ್ಗೆಯೂ ಕೀಳಾಗಿ ಮಾತನಾಡಿದ್ದು ಸುದ್ದಿ ಆಗಿತ್ತು. ರಾಜೇಂದ್ರ ಪ್ರಸಾದ್ ಕ್ಷಮೆ ಕೇಳಬೇಕು ಎಂದು ತಮಿಳು ಸಿನಿಮಾ ಪ್ರೇಮಿಗಳು ಸಾಮಾಜಿಕ ಜಾಲತಾಣದಲ್ಲಿ ಒತ್ತಾಯಿಸಿದ್ದು, ರಾಜೇಂದ್ರ ಪ್ರಸಾದ್ ಪ್ರತಿಕ್ರಿಯೆ ಹೇಗಿರುತ್ತದೆ ಕಾದು ನೋಡಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *