ದರೋಡೆಕೋರರ ಸಿನಿಮೀಯವಾಗಿ ಕಾರಲ್ಲಿ ಚೇಸ್ ಮಾಡಿದ ಸ್ಥಳೀಯರುImage Credit source: tv9
ತುಮಕೂರು, ಫೆಬ್ರವರಿ 24: ಸಿನಿಮಾ ಕಥೆಯನ್ನೇ ಮೀರಿಸುವ ರೋಚಕ ಚೇಸಿಂಗ್ ದೃಶ್ಯಕ್ಕೆ ತುಮಕೂರು (Tumakuru) ಜಿಲ್ಲೆ ಸೋಮವಾರ ಸಾಕ್ಷಿಯಾಗಿದೆ. ಶಿರಾ ತಾಲ್ಲೂಕಿನ ಕಳ್ಳಂಬೆಳ್ಳದ ಬೆಂಚೆಗೇಟ್ ಬಳಿ ಇರುವ ಜಗದಂಬಾ ಜ್ಯುವೆಲರಿ ಅಂಗಡಿಯಲ್ಲಿ ನಡೆದ ದರೋಡೆ ಪ್ರಕರಣವನ್ನು ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದು, ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಆದರೆ, ಪೊಲೀಸರು ಎಂಟ್ರಿಯಾಗುವುದಕ್ಕೂ ಮುನ್ನ ಸ್ಥಳೀಯರೇ ಆರೋಪಿಗಳ ಬೆನ್ನಟ್ಟಿರುವುದು ಗಮನ ಸೆಳೆದಿದೆ.
ಫೆಬ್ರವರಿ 22ರಂದು ಮಧ್ಯಾಹ್ನ ಸುಮಾರು 2 ಗಂಟೆ ಸುಮಾರಿಗೆ ಮೂವರು ಅಪರಿಚಿತರು ಅಂಗಡಿಗೆ ನುಗ್ಗಿ, ಅಲ್ಲಿದ್ದ ಯುವಕ ಮತ್ತು ವೃದ್ಧೆಯ ಮೇಲೆ ಮೆಣಸಿನಕಾಯಿ ಪುಡಿ ಎರಚಿ ಚಿನ್ನ, ರೋಲ್ಡ್ ಗೋಲ್ಡ್ ಹಾಗೂ ಬೆಳ್ಳಿ ಆಭರಣಗಳನ್ನು ದೋಚಿಕೊಂಡು ಕೇವಲ 10 ನಿಮಿಷಗಳಲ್ಲಿ ಬೊಲೇರೋ ಕಾರಿನಲ್ಲಿ ಪರಾರಿಯಾಗಿದ್ದರು. ಈ ಕೃತ್ಯ ರಾಜಸ್ಥಾನ ಮೂಲದ ಅರವಿಂದ್ ಮತ್ತು ಆತನ ಗ್ಯಾಂಗ್ ನಡೆಸಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ.
ಸ್ಥಳೀಯರ ಸಾಹಸಮಯ ಚೇಸಿಂಗ್
ಅಂಗಡಿಯಿಂದ ದರೋಡೆಕೋರರು ಪರಾರಿಯಾಗುವ ದೃಶ್ಯವನ್ನು ಕಣ್ಣಾರೆ ಕಂಡ ಸ್ಥಳೀಯರು ತಕ್ಷಣವೇ ತಮ್ಮ ಕಾರಿನಲ್ಲಿ ಬೆನ್ನಟ್ಟಿದ್ದಾರೆ. ಸುಮಾರು 8 ರಿಂದ 10 ನಿಮಿಷಗಳ ಕಾಲ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಕಾರು ಚೇಸಿಂಗ್ ಸಿನಿಮಾವನ್ನೇ ಮೀರಿಸುವಂತಿತ್ತು. ದರೋಡೆಕೋರರ ಬೊಲೇರೋ ಕಾರನ್ನು ಸ್ಥಳೀಯರು ಹಿಂಬಾಲಿಸಿ ಅಡ್ಡಗಟ್ಟಿದ್ದು, ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪೊಲೀಸರ ಎಂಟ್ರಿ, ಖದೀಮರು ಕಾಡಿಗೆ ಪರಾರಿ
ಪೊಲೀಸರು ಸ್ಥಳಕ್ಕೆ ಆಗಮಿಸುತ್ತಿದ್ದಂತೆಯೇ ಆರೋಪಿಗಳು ವಾಹನ ಬಿಟ್ಟು ಸಮೀಪದ ಕಾಡಿನತ್ತ ಓಡಿ ಪರಾರಿಯಾಗಿದ್ದರು. ರಾತ್ರೋರಾತ್ರಿ ಕಾಡಿನಲ್ಲಿ ಕುಂಬಿಂಗ್ ಕಾರ್ಯಾಚರಣೆ ನಡೆಸಿದ ಶಿರಾ ಪೊಲೀಸರು ನಾಲ್ವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ: ತುಮಕೂರು ಜ್ಯುವೆಲರಿ ಶಾಪ್ ದರೋಡೆ: ಕಳ್ಳರು ಸಿಕ್ಕಿಬಿದ್ದ ರೋಚಕತೆ ಬಿಚ್ಚಿಟ್ಟ ಎಸ್ಪಿ
ಈ ಸಂಬಂಧ ಕಳ್ಳಂಬೆಳ್ಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಳವು ಮಾಡಿದ ಚಿನ್ನಾಭರಣಗಳನ್ನು ಬಂಧಿತರಿಂದ ವಶಪಡಿಸಿಕೊಳ್ಳಲಾಗಿದೆ. ಜಿಲ್ಲೆಯಲ್ಲೇ ಸಂಚಲನ ಮೂಡಿಸಿದ್ದ ಈ ಪ್ರಕರಣವನ್ನು ವೇಗವಾಗಿ ಭೇದಿಸಿದ ಪೊಲೀಸರ ಕಾರ್ಯಕ್ಷಮತೆಗೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.