
ರಣ್ವೀರ್ ಸಿಂಗ್ (Ranveer Singh) ನಟನೆಯ ‘ಧುರಂಧರ್ 2’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಸಿನಿಮಾನಲ್ಲಿ ಭಾರತದ ಕೇಂದ್ರ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರ ಪಾತ್ರವು ಭಾರತೀಯ ಸೈನಿಕನೊಬ್ಬನ ಪಾಕಿಸ್ತಾನಕ್ಕೆ ಗೂಢಚಾರಿಯಾಗಿ ಕಳಿಸಿ ಉಗ್ರರನ್ನು ಮಟ್ಟ ಹಾಕುವ ಕತೆಯನ್ನು ಒಳಗೊಂಡಿದೆ. ಸಿನಿಮಾನಲ್ಲಿ ಪಾಕಿಸ್ತಾನದ ನಿಜ ಉಗ್ರರ ಪಾತ್ರಗಳನ್ನು ತೋರಿಸಲಾಗಿದೆ. ಪ್ರಧಾನಿ ಮೋದಿ ಸೇರಿದಂತೆ ಭಾರತದ ಕೆಲ ರಾಜಕೀಯ ನಾಯಕರು, ಪಕ್ಷಗಳ ಉಲ್ಲೇಖ ಸಹ ಇದೆ. ಸಿನಿಮಾದ ನೈಜತೆಯ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಹಲವು ವಿಡಿಯೋಗಳು ಹರಿದಾಡುತ್ತಿವೆ. ಮಾಜಿ ಉಪ ರಾಷ್ಟ್ರೀಯ ಭದ್ರತಾ ಸಲಹೆಗಾರ ಪಂಕಜ್ ಸರನ್ ಅವರು ‘ಧುರಂಧರ್’ ಮತ್ತು ‘ಧುರಂಧರ್ 2’ ಸಿನಿಮಾ ವೀಕ್ಷಿಸಿ ಸಿನಿಮಾದ ನೈಜತೆ ಇನ್ನಿತರೆ ವಿಷಯಗಳ ಬಗ್ಗೆ ಮಾತನಾಡಿದ್ದಾರೆ.
ಸಿನಿಮಾದ ಮೇಕಿಂಗ್, ಗುಣಮಟ್ಟ ಇನ್ನಿತರೆಗಳನ್ನು ಕೊಂಡಾಡಿರುವ ಮಾಜಿ ಉಪ ರಾಷ್ಟ್ರೀಯ ಭದ್ರತಾ ಸಲಹೆಗಾರ ಪಂಕಜ್ ಸರನ್, ‘ಈ ಸಿನಿಮಾ ಭಾರತೀಯ ಚಿತ್ರರಂಗಕ್ಕೆ ಒಂದು ಹೊಸ ಮಾನದಂಡವನ್ನು ನಿಗದಿಪಡಿಸಿದೆ. ಈ ಚಿತ್ರವನ್ನು ಹಾಲಿವುಡ್ನ ಯುದ್ಧ ಆಧಾರಿತ ಸಿನಿಮಾಗಳಿಗೆ ಹೋಲಿಸಿರುವ ಅವರು, ಚಿತ್ರದ ಮೇಕಿಂಗ್ ಮತ್ತು ಗುಣಮಟ್ಟವು ಅತ್ಯಂತ ವೃತ್ತಿಪರವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸಿನಿಮಾದಲ್ಲಿ ತೋರಿಸಲಾದ ಘಟನೆಗಳು ಮತ್ತು ಪಾತ್ರಗಳು ನೈಜ ಘಟನೆಗಳಿಂದ ಪ್ರೇರಿತವಾಗಿದ್ದು, ಜಾಗತಿಕ ಮಟ್ಟದ ಚಿತ್ರನಿರ್ಮಾಣದ ಗುಣಮಟ್ಟಕ್ಕೆ ಸಿನಿಮಾ ಸರಿಸಾಟಿಯಾಗಿದೆ. ಚಿತ್ರದಲ್ಲಿನ ಹಿಂಸಾಚಾರ ಸ್ವಲ್ಪ ಮಟ್ಟಿಗೆ ಹೆಚ್ಚಾಗಿದೆ ಎನಿಸಿದರೂ, ಗುಣಮಟ್ಟದ ನಿರ್ಮಾಣ ಮತ್ತು ತಾಂತ್ರಿಕ ಕೌಶಲದ ದೃಷ್ಟಿಯಿಂದ ಈ ಸಿನಿಮಾವನ್ನು ಮೀರಿಸುವುದು ಇತರರಿಗೆ ಕಷ್ಟ’ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ:‘ಧುರಂಧರ್’, ‘ಕೇರಳ ಸ್ಟೋರಿ’ ಸುಳ್ಳು ಎಂದವರ ವಿರುದ್ಧ ನರೇಂದ್ರ ಮೋದಿ ಗರಂ
ಸಿನಿಮಾನಲ್ಲಿ ನೈಜತೆಯ ಅಂಶದ ಬಗ್ಗೆ ಮಾತನಾಡಿರುವ ಅವರು, ‘ಹಾಲಿವುಡ್ನ ಹಲವು ಯುದ್ಧ ಸಿನಿಮಾಗಳು ನಾಜಿಗಳನ್ನು, ರಷ್ಯರನ್ನು ವಿಲನ್ಗಳಂತೆ ತೋರಿಸಿದ್ದಾರೆ. ಅದನ್ನ ನಾವು ಒಪ್ಪಿಕೊಂಡಿದ್ದೇವೆ. ನಿರ್ದೇಶಕರು ಕಲಾತ್ಮಕ ಸ್ವಾತಂತ್ರ್ಯವನ್ನು ಬಳಸಿದಾಗ ಉತ್ಪ್ರೇಕ್ಷಿತ ಕತೆಯನ್ನು ನಾವು ಪ್ರಶ್ನೆ ಮಾಡಲಾಗದು. ಸಿನಿಮಾ ನೈಕ ಘಟನೆಗಳನ್ನು ಆಧರಿಸಿದೆ, ಆದರೆ ಉತ್ಪ್ರೇಕ್ಷೆಗೆ ಯಾವುದೇ ಸಮರ್ಥನೆಯನ್ನು ನಿರ್ದೇಶಕರು ಅಥವಾ ಚಿತ್ರತಂಡ ನೀಡಬೇಕಿಲ್ಲ ಏಕೆಂದರೆ ಅದು ಅವರ ಕಲಾತ್ಮಕ ಸ್ವಾತಂತ್ರ್ಯ’ ಎಂದು ಅವರು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಸಹ ‘ಧುರಂಧರ್’ ಸಿನಿಮಾದ ಬಗ್ಗೆ ಇಂದು ಮಾತನಾಡಿದ್ದು, ಪ್ರತಿ ಪಕ್ಷಗಳು ಅಥವಾ ಬಿಜೆಪಿ ವಿರೋಧಿಗಳು ‘ಕೇರಳ ಸ್ಟೋರಿ’, ‘ಕಾಶ್ಮೀರ್ ಫೈಲ್ಸ್’ ಈಗ ಬಿಡುಗಡೆ ಆಗಿರುವ ‘ಧುರಂಧರ್’ ಸಿನಿಮಾವನ್ನ ಸುಳ್ಳು ಎಂದು ಹೇಳುತ್ತಿದ್ದಾರೆ ಎಂದಿದ್ದಾರೆ. ಆ ಮೂಲಕ ಆ ಸಿನಿಮಾಗಳು ಸತ್ಯದಿಂದ ಕೂಡಿವೆ ಎಂದು ಹೇಳಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ