
ನವದೆಹಲಿ, ಏಪ್ರಿಲ್ 7: ಪಶ್ಚಿಮ ಏಷ್ಯನ್ ಬಿಕ್ಕಟ್ಟಿನಿಂದ ಭಾರತದ ಹಲವು ಕ್ಷೇತ್ರಗಳು ಬಾಧಿತವಾಗಿವೆ. ಈ ಸಂಕಷ್ಟದ ಸಂದರ್ಭದಲ್ಲಿ ಬಾಧಿಕ ಕ್ಷೇತ್ರಗಳೆಲ್ಲವಕ್ಕೂ ನೆರವು ನೀಡಲು ಕೇಂದ್ರ ಸರ್ಕಾರ ಸಾಲ ಖಾತ್ರಿ ಯೋಜನೆ ಆರಂಭಿಸಲು ಯೋಜಿಸಿದೆ. ಕೋವಿಡ್ ಸಂದರ್ಭದಲ್ಲಿ ಬಿಡುಗಡೆ ಮಾಡಿದ ಪ್ಯಾಕೇಜ್ ಮಾದರಿಯಲ್ಲಿ ಇರುವ ಈ ಕ್ರೆಡಿಟ್ ಗ್ಯಾರಂಟಿ ಸ್ಕೀಮ್ನ (Credit Guarantee scheme) ಒಟ್ಟು ಮೊತ್ತ 2.5 ಲಕ್ಷ ಕೋಟಿ ರೂ ಇರುವ ಅಂದಾಜು ಇದೆ ಎಂದು ಮನಿಕಂಟ್ರೋಲ್ನಲ್ಲಿ ವರದಿ ಮಾಡಲಾಗಿದೆ. ಇಬ್ಬರು ಅಧಿಕಾರಿಗಳ ಮೂಲಗಳಿಂದ ಈ ಮಾಹಿತಿ ಸಿಕ್ಕಿದೆ.
2020ರಲ್ಲಿ ಕೋವಿಡ್ ಬಂದಾಗ ಲಾಕ್ಡೌನ್ ಕಾರಣದಿಂದ ಆರ್ಥಿಕತೆ ಸ್ಥಗಿತಗೊಂಡಿತ್ತು. ಬಹುತೇಕ ಎಲ್ಲಾ ಉದ್ಯಮಗಳು ನಲುಗಿದ್ದವು. ಅದರಲ್ಲೂ ಎಂಎಸ್ಎಂಇಗಳು ವಿಪರೀತ ಹೊಡೆತ ತಿಂದಿದ್ದವು. ಅವುಗಳಿಗೆ ಚೇತರಿಕೆ ನೀಡುವ ಸಲುವಾಗಿ ಸರ್ಕಾರವು ಇಸಿಜಿಎಲ್ಎಸ್ ಅಥವಾ ತುರ್ತು ಸಾಲ ಖಾತ್ರಿ ಯೋಜನೆ ಹಾಕಿತ್ತು. ಈಗ ಸರ್ಕಾರ ಯೋಜಿಸಿರುವುದು ಆ ಯೋಜನೆಯ ವಿಸ್ತೃತ ರೂಪವಾಗಿದೆ.
ಇದನ್ನೂ ಓದಿ: ಅಮೆರಿಕ, ಜಪಾನ್, ಜರ್ಮನಿಗೂ ಸಾಧ್ಯವಾಗದ ಅಡ್ವಾನ್ಸ್ಡ್ ರಿಯಾಕ್ಟರ್ ಸಾಧಿಸಿದ ಭಾರತ; ದೇಶದ ಇಂಧನ ಭವಿಷ್ಯ ಸುರಕ್ಷಿತ?
ಉದ್ದಿಮೆಗಳಿಗೆ ಸರ್ಕಾರದಿಂದ ಸಾಲ ಖಾತ್ರಿ
ವಿವಿಧ ಉದ್ದಿಮೆಗಳು ಸಾಲ ಪಡೆಯಲು ಸಾಧ್ಯವಾಗುವಂತೆ ನ್ಯಾಷನಲ್ ಕ್ರೆಡಿಟ್ ಕ್ಯಾರಂಟಿ ಟ್ರಸ್ಟೀ ಕಂಪನಿಯಿಂದ ಶೇ. 90ರಷ್ಟು ಕ್ರೆಡಿಟ್ ಗ್ಯಾರಂಟಿ ಒದಗಿಸುವ ಉದ್ದೇಶ ಈ ಸ್ಕೀಮ್ನದ್ದಾಗಿದೆ. ಒಂದು ವೇಳೆ, ಸಾಲ ತೆಗೆದುಕೊಂಡವರು ತೀರಿಸಲು ವಿಫಲರಾದಲ್ಲಿ ಸರ್ಕಾರವು ಆ ಸಾಲವನ್ನು ಭರಿಸುತ್ತದೆ.
ಕೋವಿಡ್ ಸಂದರ್ಭದಲ್ಲಿ ಜಾರಿಗೊಳಿಸಲಾದ ಸಾಲ ಖಾತ್ರಿ ಸ್ಕೀಮ್ನಲ್ಲಿ ಬಡ್ಡಿದರ ಹೆಚ್ಚಾಗದಂತೆ ಮಿತಿ ಹಾಕಲಾಗಿತ್ತು. ಬ್ಯಾಂಕುಗಳು ಈ ಸ್ಕೀಮ್ನಲ್ಲಿ ನೀಡುವ ಸಾಲಗಳಿಗೆ ವಿಧಿಸುವ ಬಡ್ಡಿ ದರ ಶೇ. 9.25 ಮೀರಬಾರದು, ಮತ್ತು ಎನ್ಬಿಎಫ್ಸಿಗಳು ಶೇ. 14ಕ್ಕಿಂತ ಹೆಚ್ಚು ಬಡ್ಡಿ ವಿಧಿಸಬಾರದು ಎಂದು ಸರ್ಕಾರ ಒಂದು ಮಿತಿ ಹಾಕಿತ್ತು. ಹಾಗೆಯೇ, ಒಂದು ವರ್ಷ ಅಸಲು ಹಣ ಪಾವತಿಸುವ ಅವಶ್ಯಕತೆ ಇಲ್ಲದೆ, ಕೇವಲ ಬಡ್ಡಿ ಮಾತ್ರ ಕಟ್ಟಿಕೊಂಡು ಹೋಗುವ ಅವಕಾಶ ನೀಡಲಾಗಿತ್ತು.
ಇದನ್ನೂ ಓದಿ: ಐದು ಕಿಲೋ ಎಲ್ಪಿಜಿ ಸಿಲಿಂಡರ್ ಹಂಚಿಕೆ ಎರಡು ಪಟ್ಟು ಹೆಚ್ಚಳ; ವಲಸೆ ಕಾರ್ಮಿಕರಿಗೆ ನಿರಾಳ
ಈ ಸ್ಕೀಮ್ ಅಡಿಯಲ್ಲಿ ಒಟ್ಟು ನೀಡಿದ ಕ್ರೆಡಿಟ್ ಗ್ಯಾರಂಟಿಗಳ ಸಂಖ್ಯೆ 1.19 ಕೋಟಿ. ಈ ಪೈಕಿ ಎಂಎಸ್ಎಂಇಗಳಿಗೆ ನೀಡಿದ್ದು 1.13 ಕೋಟಿ ಗ್ಯಾರಂಟಿಗಳು. ಆ ಸಂದರ್ಭದಲ್ಲಿ ಬಾಧಿತ ಉದ್ದಿಮೆಗಳಿಗೆ ಈ ಸಾಲ ಬಹಳ ಉಪಯೋಗಕ್ಕೆ ಬಂದಿದ್ದು ಗಮನಾರ್ಹ. ಹೀಗಾಗಿ, ಅದೇ ಮಾದರಿಯಲ್ಲಿ ಇನ್ನೂ ವಿಸ್ತೃತವಾದ ಸ್ಕೀಮ್ ಅನ್ನು ಈಗ ರೂಪಿಸಲು ಸರ್ಕಾರ ಮುಂದಾಗಿದೆ ಎಂದು ಮನಿಕಂಟ್ರೋಲ್ ವರದಿಯಲ್ಲಿ ಹೇಳಲಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ