Headlines

ಪಾಕಿಸ್ತಾನಕ್ಕೆ ವಿಶ್ವಕಪ್ ಪಂದ್ಯವನ್ನು ಬಹಿಷ್ಕರಿಸಲು ಅವಕಾಶವಿದೆಯೇ? – Kannada News | Can Pakistan boycott ICC T20 World Cup 2026 match?

ಪಾಕಿಸ್ತಾನ್ ತಂಡಕ್ಕೆ ವಿಶ್ವಕಪ್ ಪಂದ್ಯವನ್ನು ಬಹಿಷ್ಕರಿಸಲು ಅವಕಾಶವಿದೆಯೇ? ಇಂತಹದೊಂದು ಪ್ರಶ್ನೆ ಹುಟ್ಟಿಕೊಳ್ಳಲು ಮುಖ್ಯ ಕಾರಣ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್​ನ ಇತ್ತೀಚಿನ ನಿರ್ಧಾರ. ಮುಂಬರುವ ಟಿ20 ವಿಶ್ವಕಪ್​ನಲ್ಲಿ ಭಾರತದ ವಿರುದ್ಧ ಕಣಕ್ಕಿಳಿಯುವುದಿಲ್ಲ ಎಂದು ಪಿಸಿಬಿ ತಿಳಿಸಿದೆ. ಇದರ ಬೆನ್ನಲ್ಲೇ ಹೀಗೆ ಒಂದು ಪಂದ್ಯವನ್ನು ಬಹಿಷ್ಕರಿಸಲು ಅವಕಾಶವಿದೆಯೇ? ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಈ ಪ್ರಶ್ನೆಗೆ ಉತ್ತರ… ಖಂಡಿತವಾಗಿಯೂ ಇದೆ.

ಏಕೆಂದರೆ ಐಸಿಸಿ ವಿಶ್ವಕಪ್​​ನಲ್ಲಿ 4 ಪಂದ್ಯಗಳು ಹೀಗೆ ಕಾರಣಾಂತರಗಳಿಂದ ರದ್ದಾಗಿವೆ. ಹೀಗೆ ರದ್ದಾಗಲು ಮುಖ್ಯ ಕಾರಣ ಪಂದ್ಯವನ್ನು ಬಹಿಷ್ಕರಿಸಿರುವುದು. ನಿರ್ದಿಷ್ಟ ಕಾರಣಗಳನ್ನು ಮುಂದಿಟ್ಟು ಈ ಹಿಂದೆ ಇಂಗ್ಲೆಂಡ್, ನ್ಯೂಝಿಲೆಂಡ್, ಆಸ್ಟ್ರೇಲಿಯಾ ಮತ್ತು ವೆಸ್ಟ್ ಇಂಡೀಸ್ ಪಂದ್ಯವಾಡಲು ನಿರಾಕರಿಸಿದೆ.

ಇದೇ ರೀತಿ ಇದೀಗ ಪಾಕಿಸ್ತಾನ್ ಕೂಡ ಭಾರತದ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸುವುದಾಗಿ ಬೆದರಿಕೆಯೊಡ್ಡಿದೆ. ಅತ್ತ ಈ ಹಿಂದೆ ನಾಲ್ಕು ತಂಡಗಳು ಐಸಿಸಿ ಟೂರ್ನಿಯ ಪಂದ್ಯಗಳನ್ನು ಬಹಿಷ್ಕರಿಸಿರುವ ಇತಿಹಾಸ ಹೊಂದಿರುವುದೇ ಪಾಕಿಸ್ತಾನ್ ಪಾಲಿಗೆ ಪ್ಲಸ್ ಪಾಯಿಂಟ್ ಎನ್ನಬಹುದು.

ಏಕೆಂದರೆ ಈ ಹಿಂದೆ ಪಂದ್ಯ ಬಹಿಷ್ಕರಿಸಿದ ರಾಷ್ಟ್ರಗಳ ವಿರುದ್ಧ ಐಸಿಸಿ ಯಾವುದೇ ಕಠಿಣ ಕ್ರಮ ಕೈಗೊಂಡಿರಲಿಲ್ಲ. ಇದೇ ಭಂಡ ಧೈರ್ಯದಲ್ಲೇ ಪಾಕಿಸ್ತಾನ್ ಕೂಡ ಭಾರತದ ವಿರುದ್ಧ ಕಣಕ್ಕಿಳಿಯುವುದಿಲ್ಲ ಎಂದು ತಿಳಿಸಿದೆ. ಆದರೆ ಈ ಬಾರಿ ಐಸಿಸಿ ತನ್ನ ನಿರ್ಧಾರವನ್ನು ಬದಲಿಸುವ ಸಾಧ್ಯತೆ ಹೆಚ್ಚಿದೆ. ಏಕೆಂದರೆ ಭಾರತ ಮತ್ತು ಪಾಕಿಸ್ತಾನ್ ನಡುವಣ ಪಂದ್ಯ ನಡೆಯದೇ ಇದ್ದರೆ ಐಸಿಸಿ ಟೂರ್ನಿಗೆ ಆರ್ಥಿಕ ಹೊಡೆತ ಬೀಳಲಿದೆ.

ಹೀಗಾಗಿ ಫೆಬ್ರವರಿ 15 ರಂದು ಭಾರತದ ವಿರುದ್ಧ ಪಾಕಿಸ್ತಾನ್ ತಂಡ ಕಣಕ್ಕಿಳಿಯದೇ ಇದ್ದರೆ ಕಠಿಣ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ. ಈಗಾಗಲೇ ಪಾಕಿಸ್ತಾನ್ ಕ್ರಿಕೆಟ್ ಮಂಡಳಿಗೆ ಈ ಬಗ್ಗೆ ಎಚ್ಚರಿಕೆ ನೀಡಲಾಗಿದ್ದು, ತನ್ನ ನಿರ್ಧಾರವನ್ನು ಮರುಪರಿಶೀಲಿಸುವಂತೆ ಕೇಳಿಕೊಳ್ಳಲಾಗಿದೆ. ಹೀಗಾಗಿ ಅಂತಿಮವಾಗಿ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಯಾವ ನಿರ್ಧಾರ ತೆಗೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.

 ವಿಶ್ವಕಪ್ ಬಾಯ್ಕಾಟ್ ಪಂದ್ಯಗಳ ಪಟ್ಟಿ:

ವರ್ಷ ಪಂದ್ಯಾವಳಿ ಪಂದ್ಯ ಕಾರಣ ಫಲಿತಾಂಶ
1996 ಏಕದಿನ ವಿಶ್ವಕಪ್ ಆಸ್ಟ್ರೇಲಿಯಾ vs ಶ್ರೀಲಂಕಾ ಭದ್ರತೆಯ ಕಾರಣ (ಕೊಲಂಬೊ ಬಾಂಬ್ ಸ್ಫೋಟ) ಶ್ರೀಲಂಕಾಗೆ ವಾಕ್‌ಓವರ್
1996 ಏಕದಿನ ವಿಶ್ವಕಪ್ ವೆಸ್ಟ್ ಇಂಡೀಸ್ vs ಶ್ರೀಲಂಕಾ ಭದ್ರತೆಯ ಕಾರಣ (ಕೊಲಂಬೊ ಬಾಂಬ್ ಸ್ಫೋಟ) ಶ್ರೀಲಂಕಾಗೆ ವಾಕ್‌ಓವರ್
2003 ಏಕದಿನ ವಿಶ್ವಕಪ್ ಇಂಗ್ಲೆಂಡ್ vs ಝಿಂಬಾಬ್ವೆ ರಾಜಕೀಯ ಕಾರಣ (ಮುಗಾಬೆ ಆಡಳಿತದ ವಿರುದ್ಧ) ಝಿಂಬಾಬ್ವೆಗೆ ವಾಕ್‌ಓವರ್
2003 ಏಕದಿನ ವಿಶ್ವಕಪ್ ನ್ಯೂಝಿಲೆಂಡ್ vs ಕೀನ್ಯಾ ಭದ್ರತೆಯ ಕಾರಣ (ಭಯೋತ್ಪಾದನೆಯ ಭೀತಿ) ಕೀನ್ಯಾಗೆ ವಾಕ್‌ಓವರ್
2026 ಟಿ20 ವಿಶ್ವಕಪ್ ಪಾಕಿಸ್ತಾನ್ vs ಭಾರತ ರಾಜಕೀಯ ಮತ್ತು ಬಾಂಗ್ಲಾದೇಶ್​ ಬೆಂಬಲಕ್ಕಾಗಿ ಬಹಿಷ್ಕಾರದ ಘೋಷಣೆ

ಪ್ರಮುಖ ಮಾಹಿತಿ:

  • 1996: ಆಸ್ಟ್ರೇಲಿಯಾ ಮತ್ತು ವೆಸ್ಟ್ ಇಂಡೀಸ್ ತಂಡಗಳು ಭದ್ರತೆಯ ಕಾರಣ ಕೊಲಂಬೊದಲ್ಲಿ ಆಡಲು ನಿರಾಕರಿಸಿದವು. ಅಂಕಗಳನ್ನು ಕಳೆದುಕೊಂಡರೂ ಈ ಎರಡೂ ತಂಡಗಳು ನಾಕೌಟ್ ಹಂತಕ್ಕೆ ತಲುಪಿದ್ದವು.
  • 2003: ಇಂಗ್ಲೆಂಡ್ ತಂಡವು ಝಿಂಬಾಬ್ವೆಯ ಮಾನವ ಹಕ್ಕುಗಳ ಉಲ್ಲಂಘನೆಯನ್ನು ಪ್ರತಿಭಟಿಸಿ ಪಂದ್ಯವನ್ನು ಬಹಿಷ್ಕರಿಸಿತು. ಇದರಿಂದಾಗಿ ಇಂಗ್ಲೆಂಡ್ ಟೂರ್ನಿಯಿಂದ ಬೇಗನೆ ಹೊರಬರಬೇಕಾಯಿತು.
  • 2026 (ಪ್ರಸ್ತುತ): ಫೆಬ್ರವರಿ 1, 2026 ರಂದು ಪಾಕಿಸ್ತಾನ ಸರ್ಕಾರವು ಫೆಬ್ರವರಿ 15 ರಂದು ನಡೆಯಲಿರುವ ಭಾರತದ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸುವುದಾಗಿ ಘೋಷಿಸಿದೆ.
  • ಐಸಿಸಿ ನಿಯಮಗಳ ಪ್ರಕಾರ, ಯಾವುದೇ ತಂಡವು ಪಂದ್ಯವನ್ನು ಬಹಿಷ್ಕರಿಸಿದರೆ ಎದುರಾಳಿ ತಂಡಕ್ಕೆ ಜಯ (ವಾಕ್‌ಓವರ್) ನೀಡಲಾಗುತ್ತದೆ. ಅಲ್ಲದೆ ಬಹಿಷ್ಕರಿಸಿದ ತಂಡಕ್ಕೆ ಭಾರಿ ಆರ್ಥಿಕ ದಂಡ ವಿಧಿಸಲಾಗುತ್ತದೆ.

Source link

Leave a Reply

Your email address will not be published. Required fields are marked *