ನವದೆಹಲಿ, ಫೆಬ್ರುವರಿ 26: ರೈತರಿಗೆ ವರ್ಷಕ್ಕೆ 6,000 ರೂ ನೀಡುವ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ (PM Kisan Yojana) ಶುರುವಾಗಿ ಮೊನ್ನೆಗೆ (ಫೆ. 24) ಏಳು ವರ್ಷ ಪೂರ್ಣವಾಗಿದೆ. 2019ರ ಫೆಬ್ರುವರಿ 24ರಂದು ಈ ಯೋಜನೆ ಆರಂಭವಾಯಿತು. ವರ್ಷಕ್ಕೆ ಮೂರು ಕಂತುಗಳಲ್ಲಿ 6,000 ರೂ ಹಣವನ್ನು ರೈತರಿಗೆ ನೀಡುವ ಸ್ಕೀಮ್ ಇದು. ಈ ಏಳು ವರ್ಷದಲ್ಲಿ ಇಲ್ಲಿಯವರೆಗೆ 21 ಕಂತುಗಳಲ್ಲಿ ಕೋಟ್ಯಂತರ ರೈತರಿಗೆ ಹಣ ಬಿಡುಗಡೆ ಮಾಡಲಾಗಿದೆ.
21ನೇ ಕಂತಿನ ಹಣವನ್ನು 2025ರ ನವೆಂಬರ್ 19ರಂದು ಬಿಡುಗಡೆ ಮಾಡಲಾಗಿತ್ತು. 22ನೇ ಕಂತಿನ ಹಣಕ್ಕಾಗಿ ರೈತರು ಕಾಯುತ್ತಿದ್ದಾರೆ. ಸರ್ಕಾರ ಯಾವಾಗ ಬೇಕಾದರೂ ಕಂತಿನ ಹಣ ಬಿಡುಗಡೆ ಮಾಡಬಹುದು. ಫೆಬ್ರುವರಿ ಮುಗಿಯಲು 2 ದಿನ ಬಾಕಿ ಇದೆ. ಈ ಎರಡು ದಿನದಲ್ಲಿ ಹಣ ಬರಬಹುದು. ಇಲ್ಲದಿದ್ದರೆ ಮಾರ್ಚ್ ಮೊದಲಾರ್ಧದಲ್ಲಿ ಹಣ ಬಿಡುಗಡೆ ಆಗಬಹುದು ಎನ್ನಲಾಗುತ್ತಿದೆ.
ಇದನ್ನೂ ಓದಿ: ಅನಿಲ್ ಅಂಬಾನಿಗೆ ಇನ್ನಷ್ಟು ಸಂಕಷ್ಟ; ನಿನ್ನೆ 3,716 ಕೋಟಿ ರೂ ಆಸ್ತಿ ಮುಟ್ಟುಗೋಲು; ಈಗ ಸಿಬಿಐನಿಂದ ಹೊಸ ಕೇಸ್ ದಾಖಲು
ಏನಿದು ಪಿಎಂ ಕಿಸಾನ್ ಯೋಜನೆ?
ಕೃಷಿ ಜಮೀನು ಹೊಂದಿರುವ ರೈತರಿಗೆ ವ್ಯವಸಾಯಕ್ಕೆ ಅನುಕೂಲವಾಗಲೆಂದು ಕೇಂದ್ರ ಸರ್ಕಾರ ವರ್ಷಕ್ಕೆ ಮೂರು ಕಂತುಗಳಲ್ಲಿ 6,000 ರೂ ಹಣದ ನೆರವು ಬಿಡುಗಡೆ ಮಾಡುತ್ತದೆ. ಪ್ರತೀ ಕಂತಿನಲ್ಲಿ 2,000 ರೂ ಹಣ ಕೊಡಲಾಗುತ್ತದೆ.
ಸ್ವಂತ ಕೃಷಿ ಭೂಮಿ ಹೊಂದಿರಬೇಕು. ಆದಾಯ ತೆರಿಗೆ ಪಾವತಿಸುವಷ್ಟು ಹಣವಂತನಾಗಿರುವಂತಿಲ್ಲ. ಸರ್ಕಾರಿ ನೌಕರರು, ವೃತ್ತಿಪರರು, ಶಾಸಕರು ಇತ್ಯಾದಿ ಹುದ್ದೆ ಹೊಂದಿರುವವರು ಕೃಷಿ ಭೂಮಿ ಇದ್ದಾಗ್ಯೂ ಪಿಎಂ ಕಿಸಾನ್ ಯೋಜನೆಯ ಫಲಾನುಭವಿಯಾಗಲು ಅರ್ಹರಿರುವುದಿಲ್ಲ.
ಒಂದು ಕುಟುಂಬದಲ್ಲಿ ಒಬ್ಬ ಮಾತ್ರ ಫಲಾನುಭವಿಯಾಗಬಹುದು. 2019ರ ನಂತರ ಕೃಷಿ ಭೂಮಿ ಖರೀದಿಸಿದವರಿಗೂ ಯೋಜನೆಗೆ ನೊಂದಾಯಿಸಲು ಆಗುವುದಿಲ್ಲ. ಆದರೆ ಭೂಮಾಲೀಕರು ಸಾವನ್ನಪ್ಪಿ ಅವರಿಂದ ವಾರಸುದಾರರಿಗೆ ಜಮೀನು ವರ್ಗಾವಣೆ ಆಗಿದ್ದರೆ ಅಂಥವರು ಫಲಾನುಭವಿಗಳಾಗಬಹುದು.
ಇದನ್ನೂ ಓದಿ: ಕಂಟೆಂಟ್ ಕ್ರಿಯೇಟರ್ಸ್ಗೆ ಸರಿಯಾಗಿ ಆದಾಯ ಹಂಚಿಕೆ ಮಾಡಿ: ಡಿಜಿಟಲ್ ಪ್ಲಾಟ್ಫಾರ್ಮ್ಗಳಿಗೆ ಸಚಿವ ವೈಷ್ಣವ್ ಸೂಚನೆ
ನಿಮ್ಮ ಹೆಸರು ಫಲಾನುಭವಿಗಳ ಪಟ್ಟಿಯಲ್ಲಿ ಇದೆಯಾ?
- ಪಿಎಂ ಕಿಸಾನ್ ಯೋಜನೆಯ ವೆಬ್ಸೈಟ್ಗೆ ಹೋಗಿ: pmkisan.gov.in/
- ಮುಖ್ಯಪುಟದಲ್ಲಿ ತುಸು ಕೆಳಗೆ ಸ್ಕ್ರೋಲ್ ಮಾಡಿ ಫಾರ್ಮರ್ಸ್ ಕಾರ್ನರ್ನಲ್ಲಿರುವ ಬೆನಿಫಿಶಿಯರಿ ಲಿಸ್ಟ್ ಕ್ಲಿಕ್ ಮಾಡಿ
- ಇಲ್ಲಿ ನಿಮ್ಮ ರಾಜ್ಯ, ಜಿಲ್ಲ, ತಾಲೂಕು, ಊರನ್ನು ಆಯ್ಕೆ ಮಾಡಿಕೊಳ್ಳಿ.
- ಆ ಊರಿನಲ್ಲಿರುವ ಎಲ್ಲಾ ಫಲಾನುಭವಿಗಳ ಪಟ್ಟಿ ಕಾಣಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ