ಪಿಎನ್​ಜಿ ಗ್ಯಾಸ್​ಗೂ ಎಲ್​ಪಿಜಿಗೂ ಏನು ವ್ಯತ್ಯಾಸ? ನೀವು ಪಿಎನ್​ಜಿ ಕನೆಕ್ಷನ್ ಪಡೆಯುವುದು ಹೇಗೆ?

ಪಿಎನ್​ಜಿ ಗ್ಯಾಸ್​ಗೂ ಎಲ್​ಪಿಜಿಗೂ ಏನು ವ್ಯತ್ಯಾಸ? ನೀವು ಪಿಎನ್​ಜಿ ಕನೆಕ್ಷನ್ ಪಡೆಯುವುದು ಹೇಗೆ?

ನವದೆಹಲಿ, ಮಾರ್ಚ್ 16: ಭಾರತದಲ್ಲಿ ಎಲ್​ಪಿಜಿಗೆ (LPG) ತುಸು ಹಾಹಾಕಾರ ನಡೆಯುತ್ತಿದೆ. ಸರ್ಕಾರ ಎಲ್​ಪಿಜಿ ಪೂರೈಕೆ ಸರಿಯಾಗಿ ಇದೆ ಎಂದು ಹೇಳಿದರೂ ಸಿಲಿಂಡರ್ ಬುಕಿಂಗ್ ಆಗದೇ ಇರುವುದು, ಡೆಲಿವರಿ ವಿಳಂಬ ಆಗುತ್ತಿರುವುದು ಇತ್ಯಾದಿ ಸಮಸ್ಯೆ ಇದೆ. ಇದೇ ವೇಳೆ, ಪೈಪ್ಡ್ ಗ್ಯಾಸ್ ಅಥವಾ ಪಿಎನ್​ಜಿ ಬಳಕೆದಾರರಿಗೆ (PNG users) ಗ್ಯಾಸ್ ಪೂರೈಕೆ ನಿಂತಿಲ್ಲ. ಪ್ರಧಾನಿಗಳು ಇತ್ತೀಚೆಗೆ, ಪಿಎನ್​ಜಿ ಬಳಕೆ ಮಾಡುವಂತೆ ಜನರಿಗೆ ಕರೆ ಕೂಡ ಮಾಡಿದ್ದಾರೆ. ಹಾಗಾದರೆ, ಪಿಎನ್​ಜಿ ಗ್ಯಾಸ್ ಮತ್ತು ಎಲ್​ಪಿಜಿ ನಡುವೆ ವ್ಯತ್ಯಾಸವೇನು?

ಎಲ್​ಪಿಜಿ ಮತ್ತು ಪಿಎನ್​ಜಿ ನಡುವೆ ವ್ಯತ್ಯಾಸವೇನು?

ಎಲ್​ಪಿಜಿ ಎಂಬುದು ಪೆಟ್ರೋಲಿಯಂ ಉತ್ಪನ್ನ. ಇದು ಕಚ್ಚಾ ತೈಲದಿಂದ ಸಿಗುವ ಒಂದು ಉಪ ಉತ್ಪನ್ನ. ಗ್ಯಾಸ್ ಅನ್ನು ದ್ರವೀಕರಿಸಿ ಸಿಲಿಂಡರ್​ನಲ್ಲಿ ತುಂಬಿಸಿ ಸರಬರಾಜು ಮಾಡಲಾಗುತ್ತದೆ.

ಪಿಎನ್​ಜಿ ಎಂಬುದು ಪೈಪ್ಡ್ ನ್ಯಾಚುರಲ್ ಗ್ಯಾಸ್. ಇದು ನೈಸರ್ಗಿಕ ಅನಿಲ. ನೀರನ್ನು ನಲ್ಲಿ ಮೂಲಕ ಸರಬರಾಜು ಮಾಡಲಾಗುವಂತೆ, ಪಿಎನ್​ಜಿಯನ್ನು ಕೊಳವೆ ಮೂಲಕ ಮನೆ ಮನೆಗಳಿಗೆ ಪೂರೈಕೆ ಮಾಡಲಾಗುತ್ತದೆ.

ಇದನ್ನೂ ಓದಿ: ಪ್ಲೇಸ್ಟೋರ್​ನಲ್ಲಿ ಚ್ಯಾಟ್​ಜಿಪಿಟಿ, ಫ್ಲಿಪ್​ಕಾರ್ಟ್ ಅನ್ನು ಮೀರಿಸಿದ ಎಲ್​ಪಿಜಿ ಬುಕಿಂಗ್ ಆ್ಯಪ್

ದೇಶದಲ್ಲಿ ಹೆಚ್ಚಿನ ಮನೆಗಳಲ್ಲಿ ಎಲ್​ಪಿಜಿ ಸಂಪರ್ಕ ಇದೆ. 32 ಕೋಟಿಗೂ ಅಧಿಕ ಮನೆಗಳು ಎಲ್​ಪಿಜಿ ಗ್ಯಾಸ್ ಸೌಲಭ್ಯ ಪಡೆದಿವೆ. ಆದರೆ, ಪಿಎನ್​ಜಿ ಸಂಪರ್ಕ ಹೊಂದಿರುವ ಮನೆಗಳ ಸಂಖ್ಯೆ ಒಂದೂವರೆ ಕೋಟಿಗಿಂತ ತುಸು ಹೆಚ್ಚು. ಈಗೀಗ ಇದರ ಬಳಕೆ ಮತ್ತು ಸಂಪರ್ಕ ಜಾಲ ಹೆಚ್ಚುತ್ತಿದೆ.

ಪಿಎನ್​ಜಿ ಪೂರೈಕೆಯಲ್ಲಿ ಹೆಚ್ಚು ವ್ಯತ್ಯಯ ಆಗದಿರುವುದು ಯಾಕೆ?

ಭಾರತಕ್ಕೆ ಬೇಕಾದ ಎಲ್​ಪಿಜಿಯಲ್ಲಿ ಶೇ. 60ಕ್ಕಿಂತ ಹೆಚ್ಚಿನ ಭಾಗವನ್ನು ಆಮದು ಮಾಡಿಕೊಳ್ಳಲಾಗುತ್ತದೆ. ಆಮದು ಮಾಡಿಕೊಳ್ಳಲಾಗುತ್ತಿರುವ ಎಲ್​ಪಿಜಿಯಲ್ಲಿ ಶೇ. 80ಕ್ಕಿಂತ ಹೆಚ್ಚಿನಷ್ಟನ್ನು ಕೊಲ್ಲಿ ರಾಷ್ಟ್ರಗಳಿಂದ ಪಡೆಯಲಾಗುತ್ತಿದೆ. ಹೀಗಾಗಿ, ಇರಾನ್ ಯುದ್ಧದ ಪರಿಣಾಮವಾಗಿ ಎಲ್​ಪಿಜಿ ಪೂರೈಕೆಯಲ್ಲಿ ಗಣನೀಯವಾದ ತೊಂದರೆ ಆಗಿದೆ.

ಆದರೆ, ನೈಸರ್ಗಿಕ ಅನಿಲ ಭಾರತದಲ್ಲೂ ಲಭ್ಯ ಇದೆ. ಭಾರತಕ್ಕೆ ಬೇಕಾದ ಪಿಎನ್​ಜಿಯಲ್ಲಿ ಅರ್ಧದಷ್ಟು ಭಾರತದಲ್ಲೇ ಲಭ್ಯ ಇದೆ. ಉಳಿದವನ್ನು ಆಮದು ಮಾಡಿಕೊಳ್ಳಲಾಗುತ್ತದೆ. ಆದರೆ, ಆಮದು ಮಾಡಿಕೊಳ್ಳಲು ಒಂದು ಪ್ರದೇಶದ ಮೇಲೆ ಅವಲಂಬಿತವಾಗದೆ, ಅಮೆರಿಕ, ಆಸ್ಟ್ರೇಲಿಯಾ ಇತ್ಯಾದಿ ಹಲವಾರು ರಾಷ್ಟ್ರಗಳಿಂದ ಅದನ್ನು ಪಡೆಯಲಾಗುತ್ತಿದೆ. ಹೀಗಾಗಿ, ಪಿಎನ್​ಜಿ ಪೂರೈಕೆಯಲ್ಲಿ ಭಾರತಕ್ಕೆ ಅಷ್ಟೇನೂ ತೊಂದರೆ ಆಗದಿರಬಹುದು.

ಇದನ್ನೂ ಓದಿ: ಸರ್ಕಾರದಿಂದ ಎಲ್​ಪಿಜಿ ಪೂರೈಕೆ ನಿಯಮದಲ್ಲಿ ಬದಲಾವಣೆ; ಈ ಕುಟುಂಬಗಳಿಗೆ ಎಲ್​ಪಿಜಿ ಗ್ಯಾಸ್ ಸಿಗಲ್ಲ

ಭಾರತದಲ್ಲಿ ಪಿಎನ್​ಜಿ ಸಂಪರ್ಕ ಪಡೆಯುವುದು ಹೇಗೆ?

ಭಾರತದಲ್ಲಿ ಬಹುತೇಕ ಎಲ್ಲಾ ರಾಜ್ಯಗಳಲ್ಲಿ ಪಿಎನ್​ಜಿ ಸಂಪರ್ಕ ಸೌಲಭ್ಯ ಇದೆ. ಇಂಡಿಯನ್ ಆಯಿಲ್, ಬಿಪಿಸಿಎಲ್, ಅದಾನಿ ಟೋಟಲ್ ಗ್ಯಾಸ್, ಜಿಎಐಎಲ್ ಇತ್ಯಾದಿ ಸಂಸ್ಥೆಗಳು ಪಿಎನ್​ಜಿ ಸೌಲಭ್ಯ ನೀಡುತ್ತವೆ. ಐಜಿಎಲ್, ಎಂಜಿಎಲ್, ಆವಂತಿಕಾ ಗ್ಯಾಸ್, ಜಿಜಿಎಲ್ ಇತ್ಯಾದಿ ಇನ್ನೂ ಅನೇಕ ಸಂಸ್ಥೆಗಳು ಈ ಸೇವೆ ನೀಡುತ್ತವೆ. ಬೆಂಗಳೂರಿನಲ್ಲಿ ಜಿಎಐಎಲ್ ಸಂಸ್ಥೆ ಪಿಎನ್​ಜಿ ಸಂಪರ್ಕ ನೀಡುತ್ತದೆ. ಜಿಎಐಎಲ್​ನ ಅಧಿಕೃತ ವೆಬ್​ಸೈಟ್​ಗೆ ಹೋಗಿ ನೀವಿರುವ ಪ್ರದೇಶದ ಸಮೀಪ ಪಿಎನ್​ಜಿ ಜಾಲ ಇದ್ದರೆ ಪರಿಶೀಲಿಸಿ, ಕನೆಕ್ಷನ್​ಗೆ ಅರ್ಜಿ ಸಲ್ಲಿಸಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *