
ಬೆಳಗಾವಿ, ಏಪ್ರಿಲ್ 10: ಸರತಿ ಸಾಲಿನಲ್ಲಿ ಆಟೋ ನಿಲ್ಲಿಸುವ ವಿಚಾರಕ್ಕೆ ನಡೆದ ಜಗಳ ಓರ್ವನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಬೆಳಗಾವಿ ಜಿಲ್ಲೆ ಕಾಗವಾಡ ತಾಲೂಕಿನ ಮಂಗಸೂಳಿ ಗ್ರಾಮದಲ್ಲಿ ನಡೆದಿದೆ. ಆಟೋ ಚಾಲಕ ಅಶೋಕ ವಡ್ಡರ್(27) ಕೊಲೆಯಾದ ವ್ಯಕ್ತಿಯಾಗಿದ್ದು, ಆರೋಪಿಗಳಾದ ಶಿವಾ ವಡ್ಡರ್, ಸಾಗರ್ ವಡ್ಡರ್ ಮತ್ತು ವಿನೋದ್ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನು 20 ದಿನದಲ್ಲಿ ಮದುವೆಯಾಗಬೇಕಿದ್ದ ಅಶೋಕ ಹಸೆಮಣೆ ಏರುವ ಬದಲು ಭೀಕರವಾಗಿ ಹತ್ಯೆಯಾಗಿದ್ದಾರೆ.
ಮೊನ್ನೆ ದಿನ ಊರಲ್ಲಿ ದೇವರ ಜಾತ್ರೆ ನಡೆದ ಕಾರಣ, ಭಕ್ತರ ಸಂಖ್ಯೆ ಹೆಚ್ಚಿತ್ತು. ಹೀಗಾಗಿ ಪ್ರತಿನಿತ್ಯ ಸರತಿ ಸಾಲಲ್ಲಿ ನಿಲ್ಲುತ್ತಿದ್ದ ಆಟೋಗಳು ಅಂದು ಈ ನಿಯಮ ಉಲ್ಲಂಘಿಸಿ ಜನ ಬಂದಂತೆ ಅವರನ್ನು ಬಸ್ ನಿಲ್ದಾಣದಿಂದ ದೇವಸ್ಥಾನಕ್ಕೆ ಕರೆದುಕೊಂಡು ಹೋಗೋದು, ಬರೋದು ಮಾಡಿದ್ದಾರೆ. ಅದರಂತೆ ತನ್ನ ಆಟೋ ಹಿಂದಿದ್ರೂ ಇಬ್ಬರು ಪ್ಯಾಸೆಂಜರ್ ಬಂದ ಕಾರಣ ಅವರನ್ನು ಕರೆದುಕೊಂಡು ಅಶೋಕ ಹೋಗಿದ್ದಾರೆ. ಇದನ್ನ ಗಮನಿಸಿದ್ದ ಮತ್ತೊಬ್ಬ ಆಟೋ ಚಾಲಕ ಶಿವಾ ವಡ್ಡರ್, ಅಶೋಕ ವಾಪಸ್ ಬಂದಿದ್ದೇ ತಡ ಜಗಳ ತೆಗೆದಿದ್ದಾನೆ. ಸಾಲದ್ದಕ್ಕೆ ಮತ್ತಿಬ್ಬರು ಸ್ನೇಹಿತರು ಸೇರಿಕೊಂಡು ಅಶೋಕ್ ಮೇಲೆ ಮನಬಂದಂತೆ ಹಲ್ಲೆ ಮಾಡಿದ್ದಾರೆ. ಬಳಿಕ ಸಾಯಿಸಿ ಆತನ ಬಳಿ ಇದ್ದ ಹಣ ಕಿತ್ತುಕೊಂಡು ಆಟೋದ ಹಿಂಬದಿ ಸೀಟ್ನಲ್ಲಿ ಆತನನ್ನ ಮಲಗಿಸಿ ಅಲ್ಲಿಂದ ಎಸ್ಕೇಪ್ ಆಗಿದ್ದಾರೆ.
ಇದನ್ನೂ ಓದಿ: ಬೆಳಗಾವಿ ಸಿದ್ದೇಶ್ವರ ಜಾತ್ರೆಯಲ್ಲಿ ರಕ್ತದೊಕುಳಿ; ಮನೆ ಮುಂದೆ ಕುಣಿದಿದ್ದಕ್ಕೆ ವ್ಯಕ್ತಿಯ ಬರ್ಬರ ಹತ್ಯೆ
ಇನ್ನು ಅಶೋಕನ ಮೇಲೆ ಹಲ್ಲೆ ಮಾಡೋದನ್ನ ನೋಡಿರುವ ಬೇರೆ ಆಟೋ ಚಾಲಕರು ಅವರ ಸಹೋದರನಿಗೆ ವಿಚಾರವನ್ನ ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಕುಟುಂಬಸ್ಥರು ಅಶೋಕನನ್ನ ಅದೇ ಆಟೋದಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಬಲವಾದ ಏಟಿನಿಂದ ಅದಾಗಲೇ ಅಶೋಕ ಮೃತಪಟ್ಟಿರೋದಾಗಿ ವೈದ್ಯರು ತಿಳಿಸಿದ್ದಾರೆ. ಕಾಗವಾಡ ಠಾಣೆ ಪೊಲೀಸರಿಗೆ ಕುಟುಂಬಸ್ಥರು ವಿಷಯ ತಿಳಿಸಿದ್ದು, ಸ್ಥಳಕ್ಕೆ ಬಂದ ಪೊಲೀಸರು ಕೊಲೆ ಕೇಸ್ ದಾಖಲಿಸಿಕೊಂಡು ತನಿಖೆ ಶುರು ಮಾಡಿದ್ದಾರೆ. ತಲೆ ಮರೆಸಿಕೊಂಡಿದ್ದ ಶಿವಾ ವಡ್ಡರ್, ಸಾಗರ್ ವಡ್ಡರ್, ವಿನೋದ್ ವಡ್ಡರ್ ಮೂವರನ್ನ ಬಂಧಿಸಿ ಜೈಲಿಗಟ್ಟಲಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.