
ಶಿವಮೊಗ್ಗ, ಏಪ್ರಿಲ್ 12: ಹುಲಿಕಲ್ ಘಾಟಿಯಲ್ಲಿ ಸುಮಾರು 5 ಅಡಿ ಅಗಲದವರೆಗೆ ಮತ್ತೊಮ್ಮೆ ಭೂಕುಸಿತ ಉಂಟಾದ ಹಿನ್ನೆಲೆ ತೀರ್ಥಹಳ್ಳಿ-ಕುಂದಾಪುರ ರಾಜ್ಯ ಹೆದ್ದಾರಿಯಲ್ಲಿ ವಾಹನ ಸಂಚಾರ ನಿಷೇಧಿಸಿ ಶಿವಮೊಗ್ಗ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಆದೇಶ ಹೊರಡಿಸಿದ್ದಾರೆ. ಕಾಂಕ್ರೀಟ್ ರಸ್ತೆಯಲ್ಲಿ ಅಲ್ಲಲ್ಲಿ ಬಿರುಕುಗಳು ಕಂಡು ಬಂದ ಹಿನ್ನೆಲೆ ಸುರಕ್ಷತಾ ದೃಷ್ಟಿಯಿಂದ ರಸ್ತೆಯು ವಾಹನಗಳ ಸಂಚಾರಕ್ಕೆ ಬ್ರೇಕ್ ಹಾಕಲಾಗಿದೆ. ಘಾಟ್ನ ಹೇರ್‌ಪಿನ್ ತಿರುವಿನಲ್ಲಿ ರಕ್ಷಣಾತ್ಮಕ ಕಾಮಗಾರಿಯೂ ಪೂರ್ಣಗೊಳ್ಳುವವರೆಗೆ ಈ ಮಾರ್ಗದಲ್ಲಿ ಸಂಚಾರಕ್ಕೆ ಅವಕಾಶ ಇರುವುದಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಎಲ್ಲಾ ಮಾದರಿಯ ವಾಹನಗಳ ಸಂಚಾರಕ್ಕೂ ಇದು ಅನ್ವಯವಾಗಲಿದೆ. ಪರ್ಯಾಯ ಮಾರ್ಗಗಳಲ್ಲಿ ತಾತ್ಕಾಲಿಕವಾಗಿ ಸಂಚರಿಸಲು ಸೂಚಿಸಲಾಗಿದೆ.
ಪರ್ಯಾಯ ಮಾರ್ಗಗಳು
- ತೀರ್ಥಹಳ್ಳಿ ಕಡೆಯಿಂದ ಕುಂದಾಪುರ ಕಡೆಗೆ ತೆರಳುವ ವಾಹನಗಳು, ತೀರ್ಥಹಳ್ಳಿ-ರಾವೆ-ಕಾನುಗೋಡು-ನಗರ-ಕೊಲ್ಲೂರು ಮೂಲಕ ಕುಂದಾಪುರಕ್ಕೆ ತೆರಳಬೇಕು.
- ತೀರ್ಥಹಳ್ಳಿಯಿಂದ ಯಡೂರು, ಹುಲಿಕಲ್ ಮಾರ್ಗವಾಗಿ ತೆರಳುವವರು ತೀರ್ಥಹಳ್ಳಿ-ಯಡೂರು, ಮಾಸ್ತಿಕಟ್ಟೆ- ಕಾನುಗೋಡು-ನಗರ-ಕೊಲ್ಲೂರು ಮೂಲಕ ಕುಂದಾಪುರಕ್ಕೆ ಸಂಚರಿಸಬೇಕು.
- ಶಿವಮೊಗ್ಗ/ಸಾಗರ ಕಡೆಯಿಂದ ಹೊಸನಗರ ಮೂಲಕ ತೆರಳುವವರು ಶಿವಮೊಗ್ಗ-ಹೊನ್ನಾವರ ರಾಷ್ಟ್ರೀಯ ಹೆದ್ದಾರಿಯಲ್ಲಿ ತೆರಳಿ ಭಟ್ಕಳ-ಬೈಂದೂರು ಮಾರ್ಗವಾಗಿ ಕುಂದಾಪುರಕ್ಕೆ ತೆರಳಬೇಕು.
ಇದನ್ನೂ ಓದಿ: ಗಂಡನ ಮನೆಯವರ ಕಿರುಕುಳಕ್ಕೆ ಜೀವಬಿಟ್ಟ 4 ತಿಂಗಳ ಗರ್ಭಿಣಿ: ಪತಿ ಮನೆಯವರಿಂದಲೇ ಕೊಲೆಯೆಂದು ಪೋಷಕರ ಆರೋಪ
ರಸ್ತೆ ಕಾಮಗಾರಿ ವೇಳೆ ಗುಡ್ಡ ಕುಸಿದು ಮೃತಪಟ್ಟಿದ್ದ ಮೂವರು
ಹುಲಿಕಲ್ ಘಾಟ್ನಲ್ಲಿ ರಸ್ತೆ ಕಾಮಗಾರಿ ವೇಳೆ ಗುಡ್ಡ ಕುಸಿದು ಓರ್ವ ಹೊರ ರಾಜ್ಯದ ಕಾರ್ಮಿಕ ಸೇರಿ ಮೂವರು ಮೃತಪಟ್ಟಿರುವ ಘಟನೆ ಮೊನ್ನೆ ಮೊನ್ನೆಯಷ್ಟೇ ನಡೆದಿತ್ತು. ಅವಘಡದಲ್ಲಿ ರಾಘವೇಂದ್ರ(37), ರಾಜು(30) ಮತ್ತು ಶಬ್ಬೀರ್(40) ಮೃತಪಟ್ಟಿದ್ದರು. ಸುಮಂತ ಮತ್ತು ಪರಮೇಶ್ ಸೇರಿ ನಾಲ್ವರಿಗೆ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಘಟನೆ ಮಾಸುವ ಮುನ್ನವೇ ರಸ್ತೆಯ ಕೆಲವೆಡೆ ಅಪಾಯದ ಮುನ್ಸೂಚನೆ ಸಿಕ್ಕ ಹಿನ್ನೆಲೆ ಜಿಲ್ಲಅಧಿಕಾರಿಗಳು ಮಹತ್ವದ ಆದೇಶ ಹೊರಡಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.