Headlines

ಫಲಕೊಟ್ಟ ವಯಸ್ಕರ ಶಿಕ್ಷಣ ಅಭಿಯಾನ: ಉಡುಪಿ ಶೀಘ್ರವೇ ಪೂರ್ಣ ಸಾಕ್ಷರ ಜಿಲ್ಲೆ; ಘೋಷಣೆಯೊಂದೇ ಬಾಕಿ

ಫಲಕೊಟ್ಟ ವಯಸ್ಕರ ಶಿಕ್ಷಣ ಅಭಿಯಾನ: ಉಡುಪಿ ಶೀಘ್ರವೇ ಪೂರ್ಣ ಸಾಕ್ಷರ ಜಿಲ್ಲೆ; ಘೋಷಣೆಯೊಂದೇ ಬಾಕಿ

ಉಡುಪಿ, ಮಾರ್ಚ್​​ 31: ಕರ್ನಾಟಕದ ಸಾಕ್ಷರತಾ ಪ್ರಮಾಣ ಶೇ. 82.7ರಷ್ಟಿರುವ ನಡುವೆ ಕರಾವಳಿ ಜಿಲ್ಲೆಗಳು ಪೂರ್ಣ ಸಾಕ್ಷರ ಜಿಲ್ಲೆಗಳಾಗುವತ್ತ ದಾಪುಗಾಲಿಟ್ಟಿವೆ. ಆ ಪೈಕಿ ಉಡುಪಿ ಶೀಘ್ರದಲ್ಲೇ ಪೂರ್ಣ ಸಾಕ್ಷರ ಜಿಲ್ಲೆಯಾಗಿ ಘೋಷಣೆಯಾಗಲಿದ್ದು, ಇದನ್ನು ಜಿಲ್ಲೆಯ ವಯಸ್ಕರ ಶಿಕ್ಷಣ ಅಭಿಯಾನದಲ್ಲಿನ ಮಹತ್ವದ ಮೈಲಿಗಲ್ಲೆಂದೇ ಪರಿಗಣಿಸಲಾಗಿದೆ. ಕಳೆದ ವರ್ಷ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಅಕ್ಷರಾಸಕ್ತರ ಗುರುತಿಸುವಿಕೆ ಹಾಗೂ ಶಿಕ್ಷಣ ನೀಡುವ ಕಾರ್ಯ ಆರಂಭವಾಗಿತ್ತು. ವಯಸ್ಕರ ಶಿಕ್ಷಣ ಇಲಾಖೆಯ ಮೂಲಗಳ ಪ್ರಕಾರ, ಕಾಪು, ಕಾರ್ಕಳ, ಹೆಬ್ರಿ, ಬ್ರಹ್ಮಾವರ ಮತ್ತು ಬೈಂದೂರು ತಾಲೂಕುಗಳಿಂದ ಪೂರ್ಣ ಸಾಕ್ಷರತೆ ಘೋಷಣೆಗಳು ಈಗಾಗಲೇ ಲಭಿಸಿವೆ. ಉಡುಪಿ ಮತ್ತು ಕುಂದಾಪುರ ತಾಲೂಗಳಿಂದ ಈ ಕುರಿತ ಹೇಳಿಕೆ ಬಾಕಿ ಇದ್ದು, ಆ ಬಳಿಕ ಜಿಲ್ಲಾ ಪಂಚಾಯಿತಿ ಉಡುಪಿಯನ್ನು ಪೂರ್ಣ ಸಾಕ್ಷರ ಜಿಲ್ಲೆ ಎಂದು ಅಧಿಕೃತವಾಗಿ ಘೋಷಿಸಲಿದೆ.

ಕೇಂದ್ರ ಸರ್ಕಾರದ ಮಾನದಂಡಗಳ ಪ್ರಕಾರ, ಶೇ.95 ಅಥವಾ ಅದಕ್ಕಿಂತ ಹೆಚ್ಚು ಸಾಕ್ಷರತೆ ಪಡೆದ ಪ್ರದೇಶವನ್ನು ಸಂಪೂರ್ಣ ಸಾಕ್ಷರ ಎಂದು ಪರಿಗಣಿಸಲಾಗುತ್ತದೆ. ಈ ಪ್ರಮಾಣವನ್ನು ಶೇ.100ರ ಸಾಕ್ಷರತೆಗೆ ಸಮಾನವಾಗಿ ಪರಿಗಣಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಒಟ್ಟು 158 ಗ್ರಾಮ ಪಂಚಾಯಿತಿಗಳಿದ್ದು, ಎಲ್ಲವೂ ಸಂಪೂರ್ಣ ಸಾಕ್ಷರತೆ ಸಾಧಿಸಿರುವುದಾಗಿ ವರದಿಗಳನ್ನು ಸಲ್ಲಿಸಿವೆ. ಅಂತಿಮ ಹಂತದಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು (ಇಒ) ಈ ಘೋಷಣೆಗಳನ್ನು ಸಂಗ್ರಹಿಸಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ಸಲ್ಲಿಸಲಿದ್ದಾರೆ.

ಇದನ್ನೂ ಓದಿ: ಮದ್ವೆಯಾದ ಒಂದೇ ತಿಂಗಳಲ್ಲಿ ವಿರಸ; ಮೇಕಪ್ ಆರ್ಟಿಸ್ಟ್​​ನ ವಿವಾಹವಾಗಿದ್ದ ಉದ್ಯಮಿ ದುರಂತ ಸಾವು

ಈ ಸಾಧನೆಗೆ ವಯಸ್ಕರ ಶಿಕ್ಷಣ ಇಲಾಖೆ ನಡೆಸಿದ ವಿಶೇಷ ಕಾರ್ಯಕ್ರಮ ಪ್ರಮುಖ ಕಾರಣವಾಗಿದೆ. ಜಿಲ್ಲೆಯಲ್ಲಿ ಗುರುತಿಸಲಾದ 1,246 ಅಕ್ಷರಾಸಕ್ತರನ್ನು ನಾಲ್ಕು ತಿಂಗಳ ವಿಶೇಷ ಪಠ್ಯಕ್ರಮಕ್ಕೆ ಸೇರಿಸಿ, ಓದು, ಬರಹ ಹಾಗೂ ಅಂಕಗಣಿತದ ಮೂಲಭೂತ ಕೌಶಲ್ಯಗಳನ್ನು ಕಲಿಸಲಾಗಿದೆ. ಕಾರ್ಯಕ್ರಮದ ಕೊನೆಯಲ್ಲಿ ಪರೀಕ್ಷೆ ಕೂಡ ನಡೆಸಲಾಗಿದೆ. ಈ ಯೋಜನೆ ಮುಖ್ಯವಾಗಿ ಬಾಲ್ಯದಲ್ಲಿ ಶಿಕ್ಷಣದಿಂದ ದೂರ ಉಳಿದ ವಯಸ್ಕರು ಮತ್ತು ಹಿರಿಯರಿಗೆ ಸಹಾಯಕವಾಗಿದೆ. ಸಾಕ್ಷರತಾ ಕೋರ್ಸ್ ಅಗತ್ಯವಿದ್ದವರು ತಮ್ಮ ಗ್ರಾಮ ಪಂಚಾಯಿತಿಗಳನ್ನು ಸಂಪರ್ಕಿಸಿದ್ದು, ಪಂಚಾಯಿತಿಗಳು ಅವರಿಗೆ ಸಹಾಯ ಮಾಡಿವೆ. ಸುಮಾರು ಎಂಟು ತಿಂಗಳ ಹಿಂದೆ ಜಿಲ್ಲೆಯ 158 ಗ್ರಾಮ ಪಂಚಾಯಿತಿಗಳ ಪೈಕಿ 45 ಪಂಚಾಯಿತಿಗಳು ಇನ್ನೂ ಪೂರ್ಣ ಸಾಕ್ಷರವಾಗಿರಲಿಲ್ಲ. ಆದರೆ ಇದೀಗ ಈ ಮಹತ್ವದ ಸಾಧನೆ ಸಾಧ್ಯವಾಗಿರುವುದು ಗಮನಾರ್ಹ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Leave a Reply

Your email address will not be published. Required fields are marked *