
ನವದೆಹಲಿ, ಏಪ್ರಿಲ್ 13: ಗ್ರಾಹಕ ಬೆಲೆ ಅನುಸೂಚಿ ಆಧಾರದ ರೀಟೇಲ್ ಹಣದುಬ್ಬರ (Retial Inflation) ಮಾರ್ಚ್ ತಿಂಗಳಲ್ಲಿ ಶೇ. 3.4ಕ್ಕೆ ಏರಿದೆ. ಹಿಂದಿನ ತಿಂಗಳಲ್ಲಿ (2026ರ ಫೆಬ್ರುವರಿ) ಹಣದುಬ್ಬರ ಶೇ. 3.21 ಇತ್ತು. ಮಾರ್ಚ್ನಲ್ಲಿ ಹಣದುಬ್ಬರ ದರ ಏರಲು ಆಹಾರ ಬೆಲೆಗಳಲ್ಲಿ ಆಗಿರುವ ಏರಿಕೆ ಎಂದು ಹೇಳಲಾಗಿದೆ. ಫೆಬ್ರುವರಿಯಲ್ಲಿ ಶೇ. 3.47ರಷ್ಟಿದ್ದ ಆಹಾರ ಹಣದುಬ್ಬರ ಮಾರ್ಚ್ನಲ್ಲಿ ಶೇ. 3.87ಕ್ಕೆ ಹೆಚ್ಚದೆ.
ಹಣದುಬ್ಬರ ಮಾರ್ಚ್ ತಿಂಗಳಲ್ಲಿ ಹೆಚ್ಚುವುದು ನಿರೀಕ್ಷಿತವೇ ಆಗಿತ್ತು. ಇರಾನ್ ಯುದ್ಧದಿಂದಾಗಿ ತೈಲ ಬಿಕ್ಕಟ್ಟು ಸೃಷ್ಟಿಯಾಗಿತ್ತು. ಇದರ ಪರಿಣಾಮದಿಂದ ಸಾಮಾನ್ಯ ಬೆಲೆ ಏರಿಕೆ ಆಗಿದೆ. ಮಾರ್ಚ್ನಲ್ಲಿ ದಾಖಲಾಗಿರುವ ಶೇ. 3.4 ಹಣದುಬ್ಬರವು ಹಿಂದಿನ ವರ್ಷದ ಮಾರ್ಚ್ನಲ್ಲಿದ್ದ ದರಕ್ಕೆ ಹೋಲಿಸಲಾಗಿದೆ. ರಾಷ್ಟ್ರೀಯ ಸಾಂಖ್ಯಿಕ ಕಚೇರಿಯಿಂದ ಬಿಡುಗಡೆ ಮಾಡಲಾದ ಈ ದತ್ತಾಂಶವು 2024 ಅನ್ನು ಆಧಾರ ವರ್ಷವಾಗಿ ಇಟ್ಟುಕೊಂಡು ಎಣಿಸಲಾಗಿದೆ.
ಇದನ್ನೂ ಓದಿ: ಸಂಧಾನ ಮುರಿದುಬಿದ್ದ ಬೆನ್ನಲ್ಲೇ ರಾಕೆಟ್ನಂತೆ ಮೇಲೇರಿದ ತೈಲ ಬೆಲೆ
ಮಾರ್ಚ್ನಲ್ಲಿ ಹಣದುಬ್ಬರ ಏರಿಕೆಗೆ ಕಾರಣವಾದ ವಸ್ತುಗಳಲ್ಲಿ ಆಹಾರ ಇದೆ. ಹಾಗೆಯೇ, ಚಿನ್ನ, ಬೆಳ್ಳಿ, ತೆಂಗಿನಕಾಯಿ, ಟೊಮೆಟೋ, ಕೋಸು ಇತ್ಯಾದಿ ವಸ್ತುಗಳ ಬೆಲೆ ಅಧಿಕಗೊಂಡಿದೆ.
ಇನ್ನೊಂದೆಡೆ, ಈರುಳ್ಳಿ, ಆಲೂಗಡ್ಡೆ, ಬೆಳ್ಳುಳ್ಳಿ ಇತ್ಯಾದಿ ಆಹಾರವಸ್ತುಗಳ ಬೆಲೆ ಕಡಿಮೆಗೊಂಡಿದ್ದು, ಹಣದುಬ್ಬರ ಶೇ. 4 ದಾಟದಂತೆ ನೋಡಲು ಸಾಧ್ಯವಾಗಿದೆ.
ಇದನ್ನೂ ಓದಿ: ಪೆಟ್ರೋಲಿಯಂ ಉತ್ಪನ್ನಗಳ ರಫ್ತು ಸುಂಕದಲ್ಲಿ ಭರ್ಜರಿ ಹೆಚ್ಚಳ; ಡೀಸಲ್ಗೆ 55.5 ರೂ, ಎಟಿಎಫ್ಗೆ 42 ರೂ ಸುಂಕ
ವಿದ್ಯುತ್, ಗ್ಯಾಸ್ ಹಾಗೂ ಇತರ ಇಂಧನಗಳ ಹಣದುಬ್ಬರವು ಫೆಬ್ರುವರಿಯಲ್ಲಿ ಶೇ. 1.52 ಇತ್ತು. ಮಾರ್ಚ್ನಲ್ಲಿ ಶೇ. 1.65ಕ್ಕೆ ಏರಿದೆ. ಗೃಹ ನಿರ್ಮಾಣ ಹಣದುಬ್ಬರ ದರ ಮಾರ್ಚ್ನಲ್ಲಿ ಶೇ. 2.11 ಇತ್ತು. ಸರ್ಕಾರವು ಪೆಟ್ರೋಲ್ ಮತ್ತು ಡೀಸಲ್ ಬೆಲೆ ಹೆಚ್ಚಳವಾಗದಂತೆ ಕ್ರಮ ತೆಗೆದುಕೊಂಡಿದ್ದರಿಂದ ಹಣದುಬ್ಬರವು ಮಿತಿಮೀರಿ ಹೋಗಿಲ್ಲ.
ಆರ್ಬಿಐ ಹಣದುಬ್ಬರವನ್ನು ಶೇ. 4ಕ್ಕೆ ನಿಯಂತ್ರಿಸುವ ಗುರಿ ಹೊಂದಿದೆ. ಕೆಲವಾರು ತಿಂಗಳುಗಳಿಂದ ಹಣದುಬ್ಬರವು ಇದೇ ಗಡಿಯೊಳಗೆ ಇದೆ. ಹಣದುಬ್ಬರ ಏರಿಕೆಯಾಗುವ ಸಾಧ್ಯತೆ ತೋರಿದರೆ ಆರ್ಬಿಐ ರಿಪೋ ದರ ಏರಿಕೆ ಇತ್ಯಾದಿ ಅಸ್ತ್ರ ಬಳಸಲು ಸಜ್ಜಾಗಬೇಕಾಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ