
ನವದೆಹಲಿ, ಮಾರ್ಚ್ 16: ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆಗೆ (West Bengal Assembly Elections) ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಇಂದು ಬಿಜೆಪಿ ಬಿಡುಗಡೆ ಮಾಡಿದೆ. ಚುನಾವಣಾ ಆಯೋಗವು 4 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯಲ್ಲಿ ಚುನಾವಣೆಗೆ ಚುನಾವಣಾ ವೇಳಾಪಟ್ಟಿಯನ್ನು ಘೋಷಿಸಿದ ಒಂದು ದಿನದ ನಂತರ ಈ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಪಶ್ಚಿಮ ಬಂಗಾಳದಲ್ಲಿ ಚುನಾವಣೆಗಳು 2 ಹಂತಗಳಲ್ಲಿ ನಡೆಯಲಿವೆ. ಏಪ್ರಿಲ್ 23 ಮತ್ತು ಏಪ್ರಿಲ್ 29ರಂದು ಚುನಾವಣೆಗಳು ನಡೆಯಲಿವೆ. ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಮತ ಎಣಿಕೆಯು ಅಸ್ಸಾಂ, ಕೇರಳ, ಪುದುಚೇರಿ ಮತ್ತು ತಮಿಳುನಾಡಿನ ಮತಗಳ ಎಣಿಕೆಯೊಂದಿಗೆ ಮೇ 4ರಂದು ನಡೆಯಲಿದೆ.
2021ರಲ್ಲಿ ನಡೆದ 8 ಹಂತದ ಚುನಾವಣೆಗಳಿಗೆ ಹೋಲಿಸಿದರೆ ಈ ವರ್ಷದ ಅಂದರೆ 2026ರ ಪಶ್ಚಿಮ ಬಂಗಾಳ ಚುನಾವಣೆ ಏಪ್ರಿಲ್ 23 ಮತ್ತು ಏಪ್ರಿಲ್ 29ರಂದು ಕೇವಲ 2 ಹಂತಗಳಲ್ಲಿ ಚುನಾವಣೆ ನಡೆಯಲಿದೆ ಎಂದು ಭಾರತೀಯ ಚುನಾವಣಾ ಆಯೋಗ ಘೋಷಿಸಿದೆ. ಇದಕ್ಕೆ ಕಾರಣವನ್ನೂ ನೀಡಿರುವ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್, ಚುನಾವಣಾ ಆಯೋಗ ಸಾಕಷ್ಟು ಚರ್ಚೆ ನಡೆಸಿ ಮತದಾನದ ಹಂತಗಳ ಸಂಖ್ಯೆಯನ್ನು ಕಡಿಮೆ ಮಾಡಿದೆ. ಎಲ್ಲರ ಅನುಕೂಲಕ್ಕಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಬಂಗಾಳದ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುತ್ತದೆ, ನುಸುಳುಕೋರರನ್ನು ಓಡಿಸುತ್ತೇವೆ; ಅಮಿತ್ ಶಾ ಶಪಥ
ಬಿಜೆಪಿ ಇಂದು ಬಿಡುಗಡೆ ಮಾಡಿರುವ ಪಟ್ಟಿಯ ಪ್ರಕಾರ, ಪಶ್ಚಿಮ ಬಂಗಾಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ 2 ಕ್ಷೇತ್ರಗಳಿಂದ ಸ್ಪರ್ಧಿಸಲಿದ್ದಾರೆ. ಒಂದು ನಂದಿಗ್ರಾಮ ಮತ್ತು ಭವಾನಿಪುರ. ಭವಾನಿಪುರ ಸ್ಥಾನದಿಂದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸ್ಪರ್ಧಿಸುವುದರಿಂದ ಸುವೇಂದು ಅಧಿಕಾರಿ ಸಿಎಂ ಎದುರಾಳಿಯಾಗಿ ಸ್ಪರ್ಧಿಸುವುದು ಖಚಿತವಾಗಿದೆ. ಸುವೇಂದು ಅಧಿಕಾರಿ ಪ್ರಸ್ತುತ ನಂದಿಗ್ರಾಮದ ಬಿಜೆಪಿ ಶಾಸಕರಾಗಿದ್ದಾರೆ. 2021ರ ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಸುವೇಂದು ಅಧಿಕಾರಿ ನಂದಿಗ್ರಾಮ ಸ್ಥಾನದಿಂದ ಮಮತಾ ಬ್ಯಾನರ್ಜಿ ವಿರುದ್ಧ ಸ್ಪರ್ಧಿಸಿ ಅವರನ್ನು ಸುಮಾರು 2,000 ಮತಗಳಿಂದ ಸೋಲಿಸಿದ್ದರು.
ಇದನ್ನೂ ಓದಿ: ಅಕ್ರಮ ವಲಸಿಗರನ್ನು ರಕ್ಷಿಸಲು ಟಿಎಂಸಿ ಶಕ್ತಿ ಮೀರಿ ಪ್ರಯತ್ನ; ಮಮತಾ ಬ್ಯಾನರ್ಜಿ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ
ಇದಾದ ನಂತರ ಮಮತಾ ಬ್ಯಾನರ್ಜಿ ಭವಾನಿಪುರ ಸ್ಥಾನದಿಂದ ಉಪಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದರು. ಇಂದು ಬಿಡುಗಡೆಯಾದ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯ ಪ್ರಮುಖ ಹೆಸರುಗಳೆಂದರೆ, ದಿಲೀಪ್ ಘೋಷ್ (ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ)- ಖರಗ್ಪುರ ಸದರ್ ಕ್ಷೇತ್ರ, ಅಗ್ನಿಮಿತ್ರ ಪಾಲ್ (ಫ್ಯಾಷನ್ ಡಿಸೈನರ್)- ಅಸನ್ಸೋಲ್ ದಕ್ಷಿಣ ಕ್ಷೇತ್ರ, ಸುವೇಂದು ಅಧಿಕಾರಿ- ನಂದಿಗ್ರಾಮ ಮತ್ತು ಭವಾನಿಪುರ ಕ್ಷೇತ್ರ, ಅಶೋಕ್ ದಿಂಡಾ (ಭಾರತದ ಮಾಜಿ ಕ್ರಿಕೆಟಿಗ)- ಮೊಯ್ನಾ ಕ್ಷೇತ್ರ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ