
ಬೆಂಗಳೂರು, ಏಪ್ರಿಲ್ 13: ಮೈಸೂರು ಡಿಸಿಯಾಗಿದ್ದಾಗ ಬಟ್ಟೆ ಬ್ಯಾಗ್ ಖರೀದಿಯಲ್ಲಿ ಅಕ್ರಮ ಆರೋಪ ಸಂಬಂಧ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿಗೆ ಮಧ್ಯಂತರ ರಿಲೀಫ್ ಸಿಕ್ಕಿದೆ. ಸೆಕ್ಷನ್ 17ಎ ಅಡಿ ತನಿಖೆಗೆ ಅನುಮತಿ ನೀಡಲು ಅಧೀನ ಕಾರ್ಯದರ್ಶಿ, ಸಿಬ್ಬಂದಿ, ಆಡಳಿತ ಸುಧಾರಣಾ ಇಲಾಖೆಗೆ ನಿರ್ದೇಶಿಸಿದ್ದ ಹೈಕೋರ್ಟ್ನ ಆದೇಶಕ್ಕೆ ಸುಪ್ರೀಂಕೋರ್ಟ್ ಮಧ್ಯಂತರ ತಡೆ ನೀಡಿದೆ. ಹೈಕೋರ್ಟ್ ಆದೇಶ ಪ್ರಶ್ನಿಸಿ ರೋಹಿಣಿ ಸಿಂಧೂರಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದು, ಈ ಕುರಿತು ವಿಚಾರಣೆ ನಡೆಸಿರುವ ಸರ್ವೋಚ್ಚ ನ್ಯಾಯಾಲಯ ಮಹತ್ವದ ಆದೇಶ ನೀಡಿದೆ.
ರೋಹಿಣಿ ಸಿಂಧೂರಿ ಅವರು ಮೈಸೂರು ಡಿಸಿಯಾಗಿದ್ದಾಗ ಬಟ್ಟೆ ಬ್ಯಾಗ್ ಖರೀದಿಯಲ್ಲಿ ಅಕ್ರಮ ಆರೋಪ ಕೇಳಿಬಂದಿತ್ತು. ಹೀಗಿದ್ದರೂ ಇದಕ್ಕೆ ಸಂಬಂಧಿಸಿ ತನಿಖೆಗೆ ಅನುಮತಿ ನೀಡಲು ರಾಜ್ಯ ಸರ್ಕಾರ ನಿರಾಕರಿಸಿತ್ತು. ಈ ಸಂಬಂಧ ದೂರುದಾರ, ವಕೀಲ ರವಿಚಂದ್ರೇಗೌಡ ಎನ್.ಆರ್. ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಏಪ್ರಿಲ್ 1ರಂದು ಅರ್ಜಿಯ ವಿಚಾರಣೆ ನಡೆಸಿದ್ದ ಕೋರ್ಟ್, ಭ್ರಷ್ಟಾಚಾರ ಕ್ಯಾನ್ಸರ್, ಪ್ಲೇಗ್ ಇದ್ದಂತೆ ಎಂದು ಸುಪ್ರೀಂಕೋರ್ಟ್ ಹೇಳಿದೆ. ಹಾಗೇ ಬಿಟ್ಟರೆ ಪ್ರಜಾಸತ್ತಾತ್ಮಕ ಅಂಗಗಳನ್ನು ಅಸ್ಥಿರಗೊಳಿಸುತ್ತದೆ. ಭ್ರಷ್ಟಾಚಾರದ ಆರೋಪವಿದ್ದಾಗ ತನಿಖೆ ನಡೆಯದೇ ಸತ್ಯ ಬಹಿರಂಗವಾಗುವುದಿಲ್ಲ ಎಂದು ಅಭಿಪ್ರಾಯಪಟ್ಟಿತ್ತು. ಹೀಗಾಗಿ ರೋಹಿಣಿ ಸಿಂಧೂರಿ ವಿರುದ್ಧ ತನಿಖೆಗೆ ಅನುಮತಿ ನೀಡುವಂತೆ ನಿರ್ದೇಶಿಸಿ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ ಆದೇಶ ಹೊರಡಿಸಿತ್ತು.
ಇದನ್ನೂ ಓದಿ: ಬಟ್ಟೆ ಬ್ಯಾಗ್ ಖರೀದಿಯಲ್ಲಿ ಅಕ್ರಮ; IAS ರೋಹಿಣಿ ಸಿಂಧೂರಿ ವಿರುದ್ಧ ತನಿಖೆಗೆ ಅನುಮತಿ ನೀಡಿ ಹೈಕೋರ್ಟ್ ಆದೇಶ
ರೋಹಿಣಿ ಸಿಂಧೂರಿ ಮೇಲಿನ ಆರೋಪ ಏನು?
ನಗರಸಭೆ, ಪುರಸಭೆ ಮತ್ತು ಮಹಾನಗರಪಾಲಿಕೆಗಳ ಪೂರ್ವಾನುಮತಿಯಿಲ್ಲದೆ ದುಬಾರಿ ಬೆಲೆಗೆ ಬ್ಯಾಗ್ಗಳನ್ನು ಖರೀದಿಸಲಾಗಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ 10ರಿಂದ 13ಗೆ ರೂಪಾಯಿಗೆ ಸಿಗುವ ಬ್ಯಾಗ್ಗಳನ್ನು ಜಿಲ್ಲಾಧಿಕಾರಿ 52 ರೂ. ನೀಡಿ ಖರೀದಿಸಿದ್ದಾರೆ. ಹೀಗಾಗಿ ಇದರಲ್ಲಿ ಕೋಟ್ಯಾಂತರ ರೂಪಾಯಿ ಅಕ್ರಮವಾಗಿದೆ ಎಂದು ಜೆಡಿಎಸ್ ನಾಯಕ ಸಾ.ರಾ.ಮಹೇಶ್ ಗಂಭೀರ ಆರೋಪ ಮಾಡಿದ್ದರು.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.