ಮುಸ್ಲಿಂ ಯುವಕರ ವಿವಾದಾತ್ಮಕ ಪೋಸ್ಟ್ ಸ್ಕ್ರೀನ್ಶಾಟ್Image Credit source: tv9
ಬಾಗಲಕೋಟೆ, ಫೆಬ್ರವರಿ 25: ಬಾಗಲಕೋಟೆ (Bagalkot) ನಗರದಲ್ಲಿ ಛತ್ರಪತಿ ಶಿವಾಜಿ ಭಾವಚಿತ್ರ ಮೆರವಣಿಗೆ ವೇಳೆ ನಡೆದ ಕಲ್ಲೆಸೆತ ಪ್ರಕರಣದ ಕಾವು ಆರುವ ಮುನ್ನವೇ ಸಾಮಾಜಿಕ ಜಾಲತಾಣ ಪೋಸ್ಟ್ನಿಂದಾಗಿ ಮತ್ತೊಂದು ವಿವಾದ ಸೃಷ್ಟಿಯಾಗಿದೆ. ಕೆಲವು ಮುಸ್ಲಿಂ ಯುವಕರು ಪಂಕಾ ಮಸೀದಿಯ ಭಾವಚಿತ್ರ ಹಾಗೂ ವಿಡಿಯೋವನ್ನು ಹಂಚಿಕೊಂಡು ಪ್ರಚೋದನಕಾರಿ ಪೋಸ್ಟ್ ಮಾಡಿರುವುದು ಗಮನಸೆಳೆದಿದೆ. ‘15 ನಿಮಿಷ ಪೊಲೀಸರು ಸುಮ್ಮನಿರಲಿ, ಇಸ್ಲಾಂ ಪವರ್ ತೋರಿಸುತ್ತೇವೆ’ ಎಂಬ ಅರ್ಥದ ಹೇಳಿಕೆಯನ್ನು ಪೋಸ್ಟ್ನಲ್ಲಿ ಉಲ್ಲೇಖಿಸಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಈ ಹೇಳಿಕೆ ಕೆಲವು ವರ್ಷಗಳ ಹಿಂದೆ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಪಕ್ಷದ ನಾಯಕ ಅಕ್ಬರುದ್ದಿನ್ ಓವೈಸಿ ನೀಡಿದ್ದ ವಿವಾದಾತ್ಮಕ ಭಾಷಣವನ್ನು ನೆನಪಿಸುವಂತಿದೆ.
ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಈ ಪೋಸ್ಟ್ ಬಗ್ಗೆ ಪೊಲೀಸರು ಗಮನ ಹರಿಸಿದ್ದು, ಕಾನೂನು ಕ್ರಮದ ಕುರಿತು ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಪ್ರಚೋದನಕಾರಿ ಹೇಳಿಕೆಗಳು ಸಮಾಜದಲ್ಲಿ ಅಶಾಂತಿ ಉಂಟುಮಾಡುವ ಸಾಧ್ಯತೆ ಇರುವುದರಿಂದ, ಜವಾಬ್ದಾರಿಯುತವಾಗಿ ವರ್ತಿಸುವಂತೆ ಅಧಿಕಾರಿಗಳು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.
ಬಾಗಲಕೋಟೆ ಗಲಭೆ ಹಿನ್ನೆಲೆ
ಛತ್ರಪತಿ ಶಿವಾಜಿ ಜಯಂತಿ ಅಂಗವಾಗಿ ಬಾಗಲಕೋಟೆಯಲ್ಲಿ ಫೆಬ್ರವರಿ 19ರ ರಾತ್ರಿ 10ಗಂಟೆ ವೇಳೆ ಶಿವಾಜಿ ಭಾವಚಿತ್ರ ಮೆರವಣಿಗೆ ಮಾಡಲಾಗಿತ್ತು. ಆಗ ಮೆರವಣಿಗೆ ಮೇಲೆ ಕಲ್ಲುಗಳು ಹಾಗೂ ಚಪ್ಪಲಿ ತೂರಲಾಗಿತ್ತು. ಇದು ಹಿಂದೂ ಕಾರ್ಯಕರ್ತರನ್ನು ಕೆರಳಿಸಿದ್ದಲ್ಲದೆ, ಉದ್ವಿಗ್ನ ಪರಿಸ್ಥಿತಿ ಸೃಷ್ಟಿಮಾಡಿತ್ತು. ನಂತರ ಕಲ್ಲು ತೂರಾಟ ಸಂಬಂಧ 8 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು.
ಇದನ್ನೂ ಓದಿ: ಶಿವಾಜಿ ಜಯಂತಿಯಲ್ಲಿ ಕಲ್ಲು ತೂರಾಟ: ಶಾಂತಿ ಸಭೆಗೆ ಬಾರದ ಮುಸ್ಲಿಂ ಮುಖಂಡರು
ಘಟನೆಯು ರಾಜಕೀಯ ಆಯಾಮವನ್ನೂ ಪಡೆದುಕೊಂಡಿದೆ. ಸದ್ಯ ಕಲ್ಲುತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಗಲಕೋಟೆಯಲ್ಲಿ ಬೃಹತ್ ಪ್ರತಿಭಟನೆಗೆ ಕರೆ ನೀಡಲಾಗಿದೆ. ಹಿಂದೂ ಸಮುದಾಯವು ಫೆಬ್ರವರಿ 26 ರಂದು ದೊಡ್ಡ ಮಟ್ಟದ ಹೋರಾಟ ನಡೆಸಲು ಸಿದ್ಧತೆ ಮಾಡಿಕೊಂಡಿದೆ.