
ವಾಷಿಂಗ್ಟನ್, ಮಾರ್ಚ್ 23: ಇರಾನ್ ವಿರುದ್ಧ ಅಮೆರಿಕದ ಯುದ್ಧ ಆರಂಭವಾಗಿ ಮೂರು ವಾರಗಳಿಗೂ ಹೆಚ್ಚು ಸಮಯ ಕಳೆದಿದೆ. ಆದರೆ ಅದು ಕೊನೆಗೊಳ್ಳುವ ಯಾವುದೇ ಲಕ್ಷಣ ಕಾಣುತ್ತಿಲ್ಲ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump)ಗೆ ಸುಲಭವಾದ ದಾರಿಯೂ ಕೂಡ ಗೋಚರಿಸುತ್ತಿಲ್ಲ. ಯುದ್ಧ ಮುಂದುವರೆದಂತೆ , ತಮ್ಮ ದೇಶದಲ್ಲೂ ಟೀಕೆಗಳನ್ನು ಎದುರಿಸುತ್ತಿದ್ದಾರೆ. ಅಮೆರಿಕದ ಮಾಜಿ ರಕ್ಷಣಾ ಕಾರ್ಯದರ್ಶಿ ಮತ್ತು ಮಾಜಿ ಸಿಐಎ ಮುಖ್ಯಸ್ಥ ಲಿಯಾನ್ ಪನೆಟ್ಟಾ, ಪ್ರಸ್ತುತ ಪರಿಸ್ಥಿತಿಗೆ ಕಾರಣವಾಗಿರುವ ಟ್ರಂಪ್ರನ್ನು ಟೀಕಿಸಿದ್ದಾರೆ.
ಬ್ರಿಟಿಷ್ ಪತ್ರಿಕೆ ಗಾರ್ಡಿಯನ್ಗೆ ಮಾತನಾಡಿದ ಪನೆಟ್ಟಾ, ಡೊನಾಲ್ಡ್ ಟ್ರಂಪ್ ತುಂಬಾ ಕಠಿಣ ಪರಿಸ್ಥಿತಿಯಲ್ಲಿದ್ದಾರೆ ಮತ್ತು ಅದಕ್ಕೆ ಅವರೇ ಕಾರಣ ಎಂದು ಹೇಳಿದ್ದಾರೆ. ಇರಾನ್ ಹಾರ್ಮುಜ್ ಜಲಸಂಧಿಯನ್ನು ನಿರ್ಬಂಧಿಸಬಹುದು, ಜಾಗತಿಕ ತೈಲ ಪೂರೈಕೆಯನ್ನು ಅಡ್ಡಿಪಡಿಸಬಹುದು ಎಂದು ಅಮೆರಿಕದ ಭದ್ರತಾ ಅಧಿಕಾರಿಗಳಿಗೆ ವರ್ಷಗಳಿಂದ ತಿಳಿದಿದೆ ಎಂದು ಪನೆಟ್ಟಾ ಹೇಳಿದ್ದಾರೆ. ಇದು ತಿಳಿದಿರುವ ಬೆದರಿಕೆಯಾಗಿದ್ದು, ಸಂಘರ್ಷದ ಸಮಯದಲ್ಲಿ ಇದನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಹಾರ್ಮುಜ್ ಜಲಸಂಧಿಯನ್ನು ನಿರ್ಬಂಧಿಸುವ ಮೂಲಕ ಇರಾನ್ ಜಾಗತಿಕ ತೈಲ ಸರಬರಾಜನ್ನು ಅಡ್ಡಿಪಡಿಸಬಹುದು ಎಂದು ಅಮೆರಿಕದ ಭದ್ರತಾ ಸಂಸ್ಥೆಗಳು ಬಹಳ ಹಿಂದಿನಿಂದಲೂ ತಿಳಿದಿದ್ದವು, ಆದರೆ ಈ ಬೆದರಿಕೆಯನ್ನು ನಿರ್ಲಕ್ಷಿಸಲಾಗಿತ್ತು. ಆರಂಭಿಕ ಮಿಲಿಟರಿ ಕಾರ್ಯಾಚರಣೆಯಲ್ಲಿ ಇರಾನ್ ಸರ್ವೋಚ್ಚ ನಾಯಕ ಅಲಿ ಖಮೇನಿ ಹತ್ಯೆಯ ಪರಿಣಾಮಗಳ ಬಗ್ಗೆಯೂ ಪ್ರಶ್ನಿಸಿದ್ದಾರೆ.
ಆರಂಭಿಕ ಮಿಲಿಟರಿ ಕ್ರಮವು ಇರಾನ್ ಅನ್ನು ದುರ್ಬಲಗೊಳಿಸಲಿಲ್ಲ ಬದಲಾಗಿ ಅದರ ನಾಯಕತ್ವವನ್ನು ಬಲಪಡಿಸಿತು. ಈಗ ಕಠಿಣ ನಾಯಕತ್ವ ಹೊರಹೊಮ್ಮಿದ್ದು, ಪರಿಸ್ಥಿತಿಯನ್ನು ಮತ್ತಷ್ಟು ಜಟಿಲಗೊಳಿಸಿದೆ. ಯುದ್ಧವು ನಾಲ್ಕನೇ ವಾರಕ್ಕೆ ಕಾಲಿಡುತ್ತಿದ್ದಂತೆ ಅಮೆರಿಕದಲ್ಲಿ ಟ್ರಂಪ್ ಮೇಲೆ ಒತ್ತಡ ಹೆಚ್ಚುತ್ತಿದೆ.
ಮತ್ತಷ್ಟು ಓದಿ: ನಮ್ಮ ಉದ್ದೇಶ ಈಡೇರುವವರೆಗೆ ಇರಾನ್ ವಿರುದ್ಧದ ಕಾರ್ಯಾಚರಣೆ ನಿಲ್ಲುವುದಿಲ್ಲ: ಟ್ರಂಪ್
ಏರುತ್ತಿರುವ ಇಂಧನ ಬೆಲೆಗಳು ಮತ್ತು ಅನಿಶ್ಚಿತತೆಯು ಸಾರ್ವಜನಿಕ ಬೆಂಬಲವನ್ನು ಕಳೆದುಕೊಳ್ಳುತ್ತಿದೆ. ಒಂದು ಸಮೀಕ್ಷೆ ಪ್ರಕಾರ, ಶೇ.59ರಷ್ಟು ಅಮೆರಿಕನ್ನರು ಇರಾನ್ ಮೇಲಿನ ದಾಳಿಯನ್ನು ವಿರೋಧಿಸುತ್ತಿದ್ದಾರೆ.
ಟ್ರಂಪ್ ಹೋಗುತ್ತಿರುವುದು ಸುಲಭದ ಹಾದಿಯೆಂದು ಅನಿಸುತ್ತಿಲ್ಲ, ಯುದ್ಧದಿಂದ ಹಿಂದೆ ಸರಿಯುವುದು ಅವರಿಗೆ ದೌರ್ಬಲ್ಯವೆನಿಸಬಹುದು ಆದರೆ ಅದು ಉಲ್ಬಣಗಗೊಂಡರೆ ಪರಿಸ್ಥಿತಿ ಮತ್ತಷ್ಟು ಹದಗೆಡಬಹುದು. ಈ ಪರಿಸ್ಥಿತಿಗೆ ಟ್ರಂಪ್ ಸ್ವತಃ ಜವಾಬ್ದಾರರಾಗುತ್ತಾರೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.
ಅಮೆರಿಕ ತನ್ನ ವಿದ್ಯುತ್ ಸ್ಥಾವರಗಳ ಮೇಲೆ ದಾಳಿ ಮಾಡಿದರೆ ಅದು ಗಲ್ಫ್ ರಾಷ್ಟ್ರಗಳ ಇಂಧನ ಮತ್ತು ಜಲ ಮೂಲಸೌಕರ್ಯವನ್ನು ಗುರಿಯಾಗಿಸಿಕೊಳ್ಳುತ್ತದೆ ಎಂದು ಇರಾನ್ ಎಚ್ಚರಿಕೆ ನೀಡಿದೆ. ಇದು ಪ್ರಪಂಚದಾದ್ಯಂತ ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸಬಹುದು. 2011ರ ಮೇ 2ರಂದು ಒಸಾಮಾ ಬಿನ್ ಲ್ಯಾಡನ್ನನ್ನು ಅಮೆರಿಕವು ಆಪರೇಷನ್ ನೆಪ್ಚೂನ್ ಸ್ಪಿಯರ್ ಅಡಿ ಹತ್ಯೆ ಮಾಡಿತ್ತು, ಅದರ ನೇತೃತ್ವವನ್ನು ಪನೆಟ್ಟಾ ಹೊತ್ತಿದ್ದರು.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ