
ಬೆಂಗಳೂರು, (ಮಾರ್ಚ್ 23): ನಗರದ ಅನಿಲ್ ಕುಂಬ್ಳೆ ಸರ್ಕಲ್ ಬಳಿ ಐಷಾರಾಮಿ ಲ್ಯಾಂಬೋರ್ಗಿನಿ ಕಾರು ಡ್ರಿಫ್ಟಿಂಗ್ (luxury car drifting Case) ವಿಡಿಯೋ ಬೆಚ್ಚಿಬೀಳಿಸಿದ್ದು, ಎಲ್ಲೆಡೆ ಫುಲ್ ವೈರಲ್ ಆಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕಾರನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದು, ದಿವಂಗತ ಮುತ್ತಪ್ಪ ರೈ ಅವರ ಪುತ್ರ ರಿಕ್ಕಿ ರೈ (Rikki Rai) ಹೆಸರು ಕೇಳಿಬಂದಿದೆ. ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ರಿಕ್ಕಿ ರೈ ವಿರುದ್ಧದ ಎಫ್ಐಆರ್ ದಾಖಲಿಸಿ ನೋಟಿಸ್ ಜಾರಿ ಮಾಡಲಾಗಿದೆ. ಇದರ ಬೆನ್ನಲ್ಲೇ ಇತ್ತ ರಿಕ್ಕಿ ರೈ ಬೆಂಗಳುರಿನ 5ನೇ ಎಸಿಎಂಎಂ ಕೋರ್ಟ್ನಿಂದ ಜಾಮೀನು ಪಡೆದುಕೊಂಡಿದ್ದಾರೆ.
ಡ್ರಿಪ್ಟಿಂಗ್ ವಿಡಿಯೋ ವೈರಲ್
ಮಾರ್ಚ್ 21ರ ಮಧ್ಯರಾತ್ರಿ ಸುಮಾರು 2 ಗಂಟೆ ಸುಮಾರಿಗೆ ಲ್ಯಾಬೋರ್ಗಿನಿ ಕಾರು (ಕೆಎ-05, ಎನ್ಆರ್-0009) ಶಿವಾಜಿನಗರ ಕಡೆಯಿಂದ ಅನಿಲ್ ಕುಂಬ್ಳೆ ವೃತ್ತಕ್ಕೆ ಅತಿ ವೇಗವಾಗಿ ಬಂದಿತ್ತು. ಬಳಿಕ ಕಾರು ಚಾಲಕ ಅದೇ ವೃತ್ತದಲ್ಲಿಕಾರನ್ನು ಎರಡು ಸುತ್ತು ಅತಿ ವೇಗವಾಗಿ ತಿರುಗಿಸಿದ್ದ. ನಂತರ ಶಿವಾಜಿನಗರದ ಕಡೆಗೆ ಶರವೇಗದಲ್ಲಿ ಕಾರು ಚಾಲನೆ ಮಾಡಿಕೊಂಡು ಹೋಗಿದ್ದ. ಕಾರು ಚಾಲಕನ ಅಪಾಯಕಾರಿ ಚಾಲನೆಯ ವಿಡಿಯೊ ಸಮೀಪದ ಸಿ.ಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಬಳಿಕ ಪೊಲೀಸರು ಕಾರು ಸಂಚರಿಸಿದ ಮಾರ್ಗದುದ್ದಕ್ಕೂ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದು, ಅದರಲ್ಲಿ ರಿಕ್ಕಿ ರೈ ಸ್ವತಃ ವಾಹನ ಚಲಾಯಿಸುತ್ತಿರುವುದು ದೃಢಪಟ್ಟಿದೆ ಎಂಬ ಮಾಹಿತಿ ಲಭ್ಯವಾಗಿತ್ತು. ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ರಿಕ್ಕಿ ರೈ ವಿರುದ್ಧ IMV 184, 189,BNS 281 ಅಡಿ ಎಫ್ ಐ ಆರ್ ದಾಖಲಾಗಿತ್ತು. ಇದರ ಬೆನ್ನಲ್ಲೇ ರಿಕ್ಕಿ ರೈ ನಿರೀಕ್ಷಣಾ ಜಾಮೀನು ಮೊರೆ ಕೋರ್ಟ್ ಮೆಟ್ಟಿಲೇರಿದ್ದರು.
ಇದನ್ನೂ ನೋಡಿ: ಲ್ಯಾಂಬೋರ್ಗಿನಿ ಡ್ರಿಫ್ಟಿಂಗ್ ಪ್ರಕರಣ: ಹುಚ್ಚಾಟ ಮೆರೆದಿದ್ದು ಮುತ್ತಪ್ಪ ರೈ ಪುತ್ರ ರಿಕ್ಕಿ?
ಲ್ಯಾಂಬೋರ್ಗಿನಿ ಕಾರು ರಿಕ್ಕಿ ರೈ ಅವರಿಗೆ ಸೇರಿದೆ ಎಂದು ಗೊತ್ತಾಗಿದ್ದು, ಸದಾಶಿವನಗರದಲ್ಲಿನ ಅವರ ನಿವಾಸದಲ್ಲಿಕಾರನ್ನು ವಶಕ್ಕೆ ಪಡೆದಿದ್ದಾರೆ. ಆದ್ರೆ, ಕಾರು ಯಾರು ಚಾಲನೆ ಮಾಡುತ್ತಿದ್ದರು ಎಂಬ ಬಗ್ಗೆ ತನಿಖೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.