ಬೆಂಗಳೂರು, (ಫೆಬ್ರವರಿ 26): ಸಿಲಿಕಾನ್ ಸಿಟಿ ಬೆಂಗಳೂರಿನ ಕೆಲವು ಭಾಗಗಳಲ್ಲಿ (Bengaluru) ವಿಪರೀತ ಟ್ರಾಫಿಕ್ ಸಮಸ್ಯೆ (Traffic) . ಅದರಂತೆ ಬಾಣಸವಾಡಿ ಹಾಗೂ ಔಟರ್ ರಿಂಗ್ ರೋಡ್ಗೆ ಸಂಪರ್ಕ ಕಲ್ಪಿಸುವ ಮಾರುತಿ ಸೇವಾನಗರ ಸಹ ಒಂದು. ಈ ಭಾಗದಲ್ಲಿ ವಾಹನ ದಟ್ಟಣೆ ವ್ಯಾಪಕವಾಗಿದ್ದು, ವಾಹನ ಸವಾರರು ರೋಸಿ ಹೋಗಿದ್ದಾರೆ. ಇದರಿಂದ ಎಚ್ಚೆತ್ತುಕೊಂಡಿರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ), ಇದಕ್ಕೆ ಮುಕ್ತಿ ನೀಡಲು ಮುಂದಾಗಿದೆ. ಹೌದು… ಬಾಣಸವಾಡಿ ಮುಖ್ಯ ರಸ್ತೆಯ ಐಒಸಿ ಜಂಕ್ಷನ್ನಲ್ಲಿ ಎಲಿವೇಟೆಡ್ ರೋಟರಿ ಮೇಲ್ಸೇತುವೆ ನಿರ್ಮಾಣ ಯೋಜನೆ ಮತ್ತೆ ಮುನ್ನೆಲೆಗೆ ಬಂದಿದೆ. ಈ ನಿಟ್ಟಿನಲ್ಲಿ ಜಿಬಿಎ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಅವರು ಬಿ-ಸ್ಮೈಲ್ ಹಾಗೂ ಕೆ-ರೈಡ್ ಅಧಿಕಾರಿಗಳೊಂದಿಗೆ ಜಂಟಿ ಪರಿಶೀಲನೆ ನಡೆಸಿದ್ದಾರೆ.
ಎಲಿವೇಟೆಡ್ ಮೇಲ್ಸೇತುವೆ ಪ್ಲ್ಯಾನ್
ಅಂದಾಜು 380 ಕೋಟಿ ರೂ. ವೆಚ್ಚದಲ್ಲಿ 3 ರಿಂದ 4 ಕಿಲೋ ಮೀಟರ್ ಉದ್ದದ ಎಲಿವೇಟೆಡ್ ಮೇಲ್ಸೇತುವೆ ನಿರ್ಮಿಸಲು ಫ್ಲ್ಯಾನ್ ನಡೆದಿದೆ. ಈ ಎಲಿವೇಟೆಡ್ ಮೇಲ್ಸೇತುವೆ ಏನಾದರೂ ನಿರ್ಮಾಣವಾದರೆ ಮಾರುತಿ ಸೇವಾನಗರದ ಟ್ರಾಫಿಕ್ ದಟ್ಟಣೆಗೆ ಮುಕ್ತಿ ದೊರೆಯಲಿದೆ. ಇದನ್ನೇ ಸಾರ್ವಜನಿಕರು ಕಾಯುತ್ತಿದ್ದಾರೆ.
ಇದನ್ನೂ ಓದಿ: ಬೆಂಗಳೂರು ಸವಾರರಿಗೆ ಗುಡ್ ನ್ಯೂಸ್: ಶೀಘ್ರದಲ್ಲೇ ನೈಸ್ ರೋಡ್ ಸಂಪರ್ಕಿಸುವ ರಸ್ತೆ ಆರಂಭ
ಮಾರುತಿ ಸೇವಾನಗರ-ಬಾಣಸವಾಡಿ-ಕಮ್ಮನಹಳ್ಳಿ-ಬೈಯ್ಯಪ್ಪನಹಳ್ಳಿ ಸುತ್ತಮುತ್ತ ಸದ್ಯ ವಾಹನ ಸಂಚಾರ ದುಸ್ತರವಾಗಿದೆ. ಸದ್ಯ ಇರುವ ಮೇಲ್ಸೇತುವೆ ಅವೈಜ್ಞಾನಿಕವಾಗಿದ್ದು, ವ್ಯವಸ್ಥಿತ ಪ್ಲಾನ್ ಇಲ್ಲದ ಹಿನ್ನೆಲೆ ಕಿರಿದಾಗಿದೆ. ಹೀಗಾಗಿ ಸದಾ ಮಿತಿಮೀರಿದ ಟ್ರಾಫಿಕ್ ಇಲ್ಲಿ ವಾಹನ ಸವಾರರಿಗೆ ನರಕಕೂಪವಾಗುತ್ತಿದೆ. ಹೀಗಾಗಿ ಶೀಘ್ರವೇ ಈ ಹೊಸ ಮೇಲ್ಸೇತುವೆ ಕಾರ್ಯ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಬೈಯ್ಯಪ್ಪನಹಳ್ಳಿ ರೈಲ್ವೆ ಲೆವೆಲ್ ಕ್ರಾಸಿಂಗ್ನಲ್ಲಿ ಹೆಚ್ಚುವರಿ 2-ಲೇನ್ ರೈಲ್ವೆ ಮೇಲ್ಸೇತುವೆ ನಿರ್ಮಾಣದ ಕುರಿತು ಕೂಡ ಕೆ-ರೈಡ್ ಮತ್ತು ಬಿ-ಸ್ಮೈಲ್ ಅಧಿಕಾರಿಗಳು ಚರ್ಚಿಸಿದ್ದಾರೆ. ಒಟ್ಟಾರೆ ಮಾರುತಿ ಸೇವಾನಗರದಲ್ಲಿ ಉದ್ಭವಿಸಿರುವ ಟ್ರಾಫಿಕ್ ಜಂಜಾಟಕ್ಕೆ ಮುಕ್ತಿ ಸಿಕ್ಕರೆ, ಸಾವಿರಾರು ಮಂದಿ ನಿಟ್ಟುಸಿರು ಬಿಡಲಿದ್ದಾರೆ.
ವರದಿ: ಲಕ್ಷ್ಮಿ ನರಸಿಂಹ ಟಿವಿ9 ಬೆಂಗಳೂರು
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On – 5:39 pm, Thu, 26 February 26