
ಬೆಂಗಳೂರು, ಮಾರ್ಚ್ 31: ಬೆಂಗಳೂರಿನ ಅತ್ಯಂತ ಹಳೆಯ ಮತ್ತು ಸಾಂಪ್ರದಾಯಿಕ ಉತ್ಸವವಾದ ‘ಬೆಂಗಳೂರು ಕರಗ ಶಕ್ತ್ಯೋತ್ಸವ’ಕ್ಕೆ (Karaga Shaktyotsava) ಕ್ಷಣಗಣನೆ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಧರ್ಮರಾಯಸ್ವಾಮಿ ದೇವಸ್ಥಾನ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಚಲಕರಿ ನಾರಾಯಣಸ್ವಾಮಿ ಅವರು ಕರಗದ ಪೌರಾಣಿಕ ಹಿನ್ನೆಲೆ ಮತ್ತು ವೀರಕುಮಾರರ ಆಚರಣೆಗಳ ಬಗ್ಗೆ ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ.
ಏನಿದು ಅಲಗು ಸೇವೆ? ಇದರ ಹಿನ್ನೆಲೆ ಏನು?
ಪೌರಾಣಿಕ ನಂಬಿಕೆಯಂತೆ, ಚೈತ್ರ ಪೂರ್ಣಿಮೆಯ ಮೂರು ದಿನಗಳ ಮೊದಲು ತಾಯಿ ದ್ರೌಪದಿ ದೇವಿ ಭೂಮಿಗೆ ಬರುತ್ತಾಳೆ ಎಂಬ ನಂಬಿಕೆಯಿದೆ. ಪಾಂಡವರ ಸ್ವರ್ಗಾರೋಹಣದ ಸಂದರ್ಭದಲ್ಲಿ ದ್ರೌಪದಿ ದೇವಿ ಮೂರ್ಛೆ ಹೋದಾಗ, ಅವಳ ಮುಂದೆ ತಿಮಿರಾಸುರ ಎಂಬ ರಾಕ್ಷಸ ಪ್ರತ್ಯಕ್ಷನಾಗುತ್ತಾನೆ. ಆ ರಾಕ್ಷಸನ ಸಂಹಾರಕ್ಕಾಗಿ ದ್ರೌಪದಿ ದೇವಿ ತನ್ನ ಶಕ್ತಿಯಿಂದ ‘ವೀರಕುಮಾರರನ್ನು’ ಸೃಷ್ಟಿಸುತ್ತಾಳೆ.
ರಾಕ್ಷಸ ಸಂಹಾರದ ನಂತರ ಗೋವಿಂದನ ದರ್ಶನ ಪಡೆದಾಗ ತಾಯಿ ದ್ರೌಪದಿ ದೇವಿ ಅದೃಶ್ಯಳಾಗುತ್ತಾಳೆ. ಈ ವೇಳೆ ತಮ್ಮನ್ನು ಅಗಲಿದ ತಾಯಿಯನ್ನು ಮತ್ತೆ ನೆನೆದು, ಭಕ್ತಿಯ ಪರವಶತೆಯಲ್ಲಿ ವೀರಕುಮಾರರು ತಮ್ಮಲ್ಲಿದ್ದ ಖಡ್ಗದಿಂದ ಎದೆಗೆ ಬಡಿದುಕೊಳ್ಳುತ್ತಾರೆ. ಇದನ್ನೇ ಇಂದಿಗೂ ‘ಅಲಗು ಸೇವೆ’ ಎಂದು ಕರೆಯಲಾಗುತ್ತದೆ. ತಾಯಿ ನಮ್ಮನ್ನು ಬಿಟ್ಟು ಹೋಗಬೇಡ, ನಮ್ಮನ್ನು ರಕ್ಷಿಸು ಎಂದು ಬೇಡುವ ಸಂಕೇತವಾಗಿ ಈ ಸೇವೆ ನಡೆಯುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಕಟ್ಟುನಿಟ್ಟಿನ ವ್ರತ ಆಚರಿಸುವ ವೀರಕುಮಾರರು
ಕರಗ ಉತ್ಸವದ 11 ದಿನಗಳ ಕಾಲ ವೀರಕುಮಾರರು ಅತ್ಯಂತ ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸುತ್ತಾರೆ. ಅವರು ಬರಿಗಾಲಿನಲ್ಲಿ ನಡೆಯುತ್ತಾರೆ, ಹೊರಗಡೆ ಎಲ್ಲೂ ಊಟ ಮಾಡುವುದಿಲ್ಲ ಮತ್ತು ದಿನವಿಡೀ ಉಪವಾಸವಿದ್ದು ದೇವಸ್ಥಾನದ ಪ್ರಸಾದವನ್ನು ಮಾತ್ರ ಸೇವಿಸುತ್ತಾರೆ. ಈ ಭಕ್ತಿ ಮತ್ತು ಶಿಸ್ತಿನ ಆಚರಣೆಯೇ ಬೆಂಗಳೂರು ಕರಗದ ವೈಶಿಷ್ಟ್ಯವಾಗಿದೆ ಎಂದು ಅವರು ತಿಳಿಸಿದ್ದಾರೆ.