
ಬೆಂಗಳೂರು, ಏಪ್ರಿಲ್ 8: ಬೆಂಗಳೂರಿನ ಮೈಸೂರು ರಸ್ತೆ ಸಾಟಲೈಟ್ ಬಸ್ ನಿಲ್ದಾಣದ ಸಿಗ್ನಲ್ ಬಳಿ ಬುಧವಾರ ಮುಂಜಾನೆ ಭೀಕರ ಲಾರಿ ಅಪಘಾತ ಸಂಭವಿಸಿದೆ. ಈಚರ್ ಲಾರಿ ಚಾಲಕ ವಿಜಯ್, ಕೆ.ಆರ್. ಮಾರ್ಕೆಟ್‌ನಿಂದ ಮೈಸೂರು ರಸ್ತೆಗೆ ಬರುವ ಮಾರ್ಗದಲ್ಲಿ ವೇಗವಾಗಿ ಚಲಿಸಿ ಸರಣಿ ಅಪಘಾತಗಳನ್ನು ಎಸಗಿದ್ದಾನೆ. ಫ್ಲೈಓವರ್ ಮೇಲೆ ಮೂರು ಬಾರಿ ಇದೇ ರೀತಿ ಅಪಘಾತಗಳನ್ನು ಮಾಡಿ ಬಂದ ಈ ಲಾರಿ, ಸಿಗ್ನಲ್‌ನಲ್ಲಿ ನಿಂತಿದ್ದ ಮತ್ತೊಂದು ಲಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಈ ಅಪಘಾತದ ಪರಿಣಾಮವಾಗಿ ಈಚರ್ ಲಾರಿಯ ಮುಂಭಾಗ ಸಂಪೂರ್ಣವಾಗಿ ನುಜ್ಜುಗುಜ್ಜಾಗಿದ್ದು, ಚಾಲಕ ವಿಜಯ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೃತದೇಹವನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ. ಅಪಘಾತಕ್ಕೀಡಾದ ಲಾರಿಗಳಲ್ಲಿ ಒಂದು ತರಕಾರಿ ಸಾಗಿಸುತ್ತಿತ್ತು ಎಂದು ತಿಳಿದುಬಂದಿದೆ. ಘಟನೆಯ ತೀವ್ರತೆಯಿಂದಾಗಿ ರಸ್ತೆಯಲ್ಲಿ ಸಂಚಾರಕ್ಕೆ ಅಡಚಣೆಯುಂಟಾಗಿದೆ. ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಅಪಘಾತಕ್ಕೀಡಾದ ವಾಹನಗಳನ್ನು ತೆರವುಗೊಳಿಸಲು ಕ್ರಮ ಕೈಗೊಂಡಿದ್ದಾರೆ.
ವರದಿ: ಅರುಣ್ ಕುಮಾರ್, ಟಿವಿ9 ಬೆಂಗಳೂರು